Advertisement

ಕಮರುತ್ತಿದೆ ತೊಗರಿ ಬೆಳೆ

10:32 AM Jul 25, 2019 | Naveen |

ಉಮೇಶ ಬಳಬಟ್ಟಿ
ಇಂಡಿ:
ಕಳೆದ ಹತ್ತಾರು ವರ್ಷದಿಂದ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿದ್ದು ಈ ಭಾಗದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬರಪೀಡಿತ ತಾಲೂಕಾಗಿ ಸರ್ಕಾರ ಘೋಷಣೆ ಮಾಡಿದ್ದರೂ ತಾಲೂಕಿನ ರೈತರಿಗೆ ಜನ, ಜಾನುವಾರುಗಳಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡದೇ ಇರುವುದು ದುರ್ದೈವದ ಸಂಗತಿಯಾಗಿದೆ.

Advertisement

ಮಳೆಗಾಲ ಆರಂಭವಾಗುತ್ತಿದ್ದಂತೆ ಅಲ್ಪ-ಸ್ವಲ್ಪ ಮಳೆಯಾಗಿದ್ದರಿಂದ ಮುಂದೆ ಮಳೆ ಬರಬಹುದು ಎಂಬ ಆಶಾಭಾವ ಇಟ್ಟುಕೊಂಡು ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಆದರೆ ಆಷಾಢ ಮಾಸ ಪ್ರಾರಂಭವಾಗಿ ಗಾಳಿ ಬೀಸುತ್ತಿದ್ದು ಮಳೆಯಾಗದೆ ಇರುವುದರಿಂದ ಬಿತ್ತನೆ ಮಾಡಿದ ಬೀಜಗಳು ಭೂಮಿಯಿಂದ ಹೊರ ಬರುತ್ತಲೆ ಮಳೆ ಹಾಗೂ ತೇವಾಂಶದ ಕೊರತೆಯಿಂದಾಗಿ ಕಮರಿ ಹೋಗುತ್ತಿವೆ.

ಜುಲೈ ತಿಂಗಳಿನಲ್ಲಿ ಇಲ್ಲಿವರೆಗೆ 260 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಇಲ್ಲಿವರೆಗೂ 137 ಮಿ.ಮೀ. ಮಾತ್ರ ಮಳೆಯಾಗಿದೆ. ತಾಲೂಕಿನಾದ್ಯಂತ ಈಗಾಗಲೆ 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು ಮಳೆ ಅಭಾವದಿಂದ ತೊಗರಿ ಬೆಳೆ ಒಣಗುವ ಹಂತಕ್ಕೆ ತಲುಪಿದೆ. ಇನ್ನು ಒಂದೆರಡು ದಿನದಲ್ಲಿ ಮಳೆಯಾಗದೆ ಇದ್ದರೆ ತಾಲೂಕಿನಾದ್ಯಂತ ಬಿತ್ತನೆ ಮಾಡಿದ ತೊಗರಿ ಬೆಳೆ ಸಂಪೂರ್ಣ ಹಾಳಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೇಸಿಗೆ ಸಮಯದಲ್ಲಿ ತಾಲೂಕು ಮತ್ತು ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯೆಗೆ ಇರುವ ಹಳ್ಳಿಗಳು, ತಾಂಡೆ, ವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡಿದ್ದರು. ಆದರೆ ಮಳೆಗಾಲ ಆರಂಭವಾದರೂ ಮಳೆ ಬಾರದ ಹಿನ್ನೆಲೆಯಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಈಗಾಗಲೆ ತಾಲೂಕಿನಲ್ಲಿ ಅಂದಾಜು 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತಲಾಗಿದೆ. ಇಲ್ಲಿವರೆಗೆ 260 ಮಿ.ಮೀ. ಮಳೆಯಾಗಬೇಕಿತ್ತು. ಕೇವಲ 137 ಮಿ.ಮೀ. ಮಳೆಯಾಗಿದೆ. ಇನ್ನೂ ಒಂದು ವಾರದ ಒಳಗಡೆ ಮಳೆಯಾಗದಿದ್ದರೆ ಬಿತ್ತನೆ ಮಾಡಿದ ತೊಗರಿ ಬೆಳೆ ಹಾಳಾಗುತ್ತದೆ.
ಮಹಾದೇವಪ್ಪ ಏವೂರ
ಸಹಾಯಕ ಕೃಷಿ ನಿರ್ದೇಶಕ, ಇಂಡಿ

Advertisement

ಇತ್ತೀಚೆಗೆ ಮಹಾರಾಷ್ಟ್ರ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಶಾಸಕರು, ಸಚಿವರು ರೆಸಾರ್ಟ್‌ ರಾಜಕಾರಣ ಮಾಡುತ್ತಿದ್ದು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಮಹಾರಾಷ್ಟ್ರ ಸರ್ಕಾರದ ಜೊತೆ ಚರ್ಚಿಸಿ ಭೀಮಾಹಾಗೂ ಕೃಷ್ಣಾ ನದಿಗಳ ವ್ಯಾಪ್ತಿ ಕಾಲುವೆಗಳ ಮೂಲಕವಾದರೂ ನೀರು ಹರಿಸಬೇಕು.
ಭೀಮರಾಯ ಮದರಖಂಡಿ,
 ರೇವಣಸಿದ್ದ ಕುಂಬಾರರೈತರು

Advertisement

Udayavani is now on Telegram. Click here to join our channel and stay updated with the latest news.

Next