ಇಂಡಿ: ಸರ್ಕಾರಿ ಕಚೇರಿಗಳೆಂದರೆ ಮೂಗು ಮುರಿಯುವ ಇಂದಿನ ಕಾಲದಲ್ಲಿ ಜಿಲ್ಲೆಯ ಇತರ ತಾಲೂಕಿಗೆ ಮಾದರಿಯಾಗುವಂತೆ ಮಾಡಲಾಗಿದೆ. ಕಚೇರಿ ಆವರಣದಲ್ಲಿ ಹುಲ್ಲುನೆಟ್ಟು ಗಾರ್ಡನ್ ಸೇರಿದಂತೆ ರೈತರ ಸಹಾಯಕ್ಕಾಗಿ ವಿಶೇಷ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಕಚೇರಿಗಳು ವ್ಯವಸ್ಥಿತವಾಗಿರುತ್ತವೆ ಎನ್ನುವುದಕ್ಕೆ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯೇ ನಿದರ್ಶನವಾಗಿದೆ.
ಸದ್ಯ ಅಂದಗೊಳಿಸಿದ ಕೃಷಿ ಇಲಾಖೆ ಸ್ಥಳದಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಇತ್ತು. ಮಿನಿ ವಿಧಾನಸೌಧದಲ್ಲಿ ಕಚೇರಿಯಲ್ಲಿ ಸದ್ಯ ಉಪ ನೋಂದಣಾಧಿಕಾರಿ ಕಚೇರಿ ವರ್ಗಾಯಿಸಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಿತ್ಯ ಹಣಕಾಸು ವ್ಯವಹಾರ ನಡೆಯುತ್ತಿದೆ ಎಂಬುದು ತಿಳಿದಿದ್ದು, ಆದರೆ ಕಚೇರಿ ಮಾತ್ರ ಧೂಳು ತುಂಬಿದ ಗೋಡೆ, ಜಾಡುಗಟ್ಟಿದ ಮೇಲ್ಛಾವಣಿ, ಕಿಟಕಿ, ಬಾಗಿಲುಗಳು ಸ್ವಾಗತಿಸುವಂತಿತ್ತು.
ಈ ಕಚೇರಿಯನ್ನು ಕೃಷಿ ಇಲಾಖೆ ಸಹಾಯಕ ಉಪ ನಿರ್ದೇಶಕರ ಕಚೇರಿ ನಿರ್ಮಿಸಿಕೊಳ್ಳು ನೀಡಲಾಗಿತ್ತು. ಕೃಷಿ ಇಲಾಖೆ ಹಿರಿಯ ಅಧಿಕಾರಿ ಇಚ್ಛಾಶಕ್ತಿಯಿಂದ ಧೂಳು, ಜಾಡು ತುಂಬಿದ್ದ ಕಚೇರಿ ಕಟ್ಟಡ ಇಂದು ಸುಂದರ ಹುಲ್ಲಿನ ಆವರಣ, ಸುಣ್ಣ, ಬಣ್ಣದಿಂದ ಕಂಗೊಳಿಸುವಂತೆ ಆಗಿದ್ದು, ರೈತರನ್ನು ಕೈ ಬಿಸಿ ಕರೆಯುವಂತಾಗಿದೆ. ತಾಲೂಕು ಕಚೇರಿಗಳೆಂದರೆ ಹೀಗೆ ಇರಬೇಕು ಎನ್ನುವಂತೆ ಮಾದರಿಯಾಗಿದೆ. ಜಿಲ್ಲಾ ಕೇಂದ್ರದ ಕನಸು ಈ ಕಚೇರಿ ಹೊತ್ತು ಕೊಂಡಂತಾಗಿದೆ.
ಕಚೇರಿ ವಿಶೇಷತೆ : ಕಚೇರಿಯಲ್ಲಿ ರೈತರಿಗೆ ಕೃಷಿ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳ ಮಾಹಿತಿ ಸುಲಭವಾಗಿ ದೊರೆಯುವಂತೆ ಮಾಡಲು ಬೇರೆ ಬೇರೆ ಹೊಬಳಿಯ ಗ್ರಾಮ ಸೇವಕರು ಕುಳಿತುಕೊಳ್ಳಲು ಬ್ಯಾಂಕಿನಲ್ಲಿ ಇರುವಂತೆ ಪ್ರತ್ಯೇಕ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. ರೈತರು ಬಂದು ಕುಳಿತುಕೊಳ್ಳಲು ಕಚೇರಿ ಆವರಣದಲ್ಲಿ ಹುಲ್ಲು ಹಾಸಿಗೆ ಮಾಡಲಾಗಿದೆ. ರೈತರಿಗೆ ಗ್ರಾಮ ಸೇವಕರಿಂದ ಸರಿಯಾದ ಮಾಹಿತಿ ಸಿಗದಿದ್ದರೆ ಮೇಲಧಿಕಾರಿಯನ್ನು ಕಾಣಲು, ಕೌಂಟರ್ ಬಳಿಯೇ ಅಧಿಕಾರಿಗಳ ಕೋಣೆ ನಿರ್ಮಿಸಿಕೊಳ್ಳಲಾಗಿದೆ. ಅಧಿಕಾರಿಗಳು ಇಚ್ಛಾಶಕ್ತಿ ತೋರಿದರೆ ರೈತರಿಗೆ ಯೋಜನೆಗಳು ಯಾವ ರೀತಿಯಾಗಿ ತಲುಪಿಸಲು ಸಾಧ್ಯವಾಗುತ್ತದೆ ಎಂಬುದಕ್ಕೆ ಈ ಇಲಾಖೆ ಮಾದರಿಯಾಗಿದೆ.
ಬೀಜ ವಿತರಣೆ ಕೇಂದ್ರ: ತಾಲೂಕು ಕೇಂದ್ರದಲ್ಲಿ ರೈತರಿಗೆ ಬೀಜ ವಿತರಣೆಗೆ ತೊಂದರೆಯಾಗದಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮುಂದೆ ಬೀಜ ವಿತರಣೆ ಕೇಂದ್ರಗಳನ್ನು ತೆರೆದಿದ್ದಾರೆ. ರೈತರಿಗೆ ಬೀಜ ವಿತರಣೆಯಲ್ಲಿ ತೊಂದರೆಯಾದರೆ ಇಲಾಖೆ ಹಿರಿಯ ಅಧಿಕಾರಿ ಬೇಗನೆ ಹೋಗಿ ರೈತರ ಸಮಸ್ಯೆ ಸ್ಪಂದಿಸುವಂತೆ ಸಮೀಪದಲ್ಲಿಯೇ ಸ್ಥಾಪಿಸಲಾಗಿದೆ.
ಸಹಾಯವಾಣಿ: ಕೃಷಿ ಇಲಾಖೆಗೆ ಸಂಬಂಧಿಸಿದ ಕೃಷಿ ಬಗ್ಗೆ ರೈತರು ಸಮರ್ಪಕ ಮಾಹಿತಿ ಪಡೆಯಲು 1800-180-1551 ಉಚಿತ ಸಹಾಯವಾಣಿಯನ್ನು ತೆರೆಯಲಾಗಿದೆ.
ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಿದ್ದರಿಂದ ಬಹುತೇಕ ಸರ್ಕಾರಿ ಕಚೇರಿಗಳು ಅಲ್ಲಿಗೆ ವರ್ಗಾವಣೆಗೊಂಡಿವೆ. ಕೃಷಿ ಇಲಾಖೆಗೆ ಕಚೇರಿ ಕೊರತೆ ಇದ್ದಿದ್ದಕ್ಕಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಬಳಿ ಮನವಿ ಮಾಡಿಕೊಂಡಾಗ, ಖಾಲಿ ಉಳಿದ ಉಪ ನೋಂದಣಾಧಿಕಾರಿ ಕಚೇರಿಯನ್ನು ಕೃಷಿ ಇಲಾಖೆಗೆ ಬಿಟ್ಟುಕೊಡಲು ಅಕಾರಿಗಳಿಗೆ ತಿಳಿಸಿದ್ದರಿಂದ ಸದ್ಯ ಕೃಷಿ ಇಲಾಖೆ ಕಚೇರಿ ಆರಂಭಿಸಲಾಗಿದೆ.
•ಮಹಾದೇವಪ್ಪ ಏವೂರ,
ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಇಂಡಿ
ಜಿಲ್ಲೆಯಲ್ಲಿ ಇನ್ನೊಂದು ಜಿಲ್ಲೆಯಾಗುವ ಪ್ರಕ್ರಿಯೆ ಆರಂಭವಾದರೆ ಇಂಡಿ ಜಿಲ್ಲಾ ಕೇಂದ್ರದ ಲಕ್ಷಣ ಹೊಂದಬೇಕು. ಇಂಡಿ ಜಿಲ್ಲಾ ಕೇಂದ್ರವಾಗಬೇಕು ಎಂಬ ಕನಸು ಕಟ್ಟಿಕೊಂಡಿದ್ದೇನೆ. ಹೀಗಾಗಿ ತಾಲೂಕು ಕೇಂದ್ರದಲ್ಲಿ ಜಿಲ್ಲೆಗೆ ಬೇಕಾದ ಎಲ್ಲ ಅನುಕೂಲಗಳನ್ನು ನಿರ್ಮಿಸಲು ಶ್ರಮಿಸುತ್ತಿದ್ದೇನೆ. ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಇನ್ನೊಂದು ಜಿಲ್ಲೆಯಾದರೆ ಅದು ಇಂಡಿ ಖಂಡಿತವಾಗಿಯೂ ಜಿಲ್ಲೆಯಾಗುವುದು.
•
ಯಶವಂತರಾಯಗೌಡ ಪಾಟೀಲ,
ಶಾಸಕ, ಇಂಡಿ