Advertisement

ಕನಸಾಗೇ ಉಳಿದ ಮೆಗಾ ಮಾರ್ಕೆಟ್‌ ನಿರ್ಮಾಣ

02:08 PM Jan 11, 2020 | Naveen |

ಇಂಡಿ: ಪಟ್ಟಣದ ಜನರ ಬಹು ದಿನಗಳ ಬೇಡಿಕೆಯಾದ ಮೆಗಾ ಮಾರ್ಕೆಟ್‌ ನಿರ್ಮಾಣಕ್ಕೆ ಸರಕಾರ ತಣ್ಣೀರೆರಚಿದೆ. ಸರಕಾರದಿಂದ ಮಂಜೂರಾದ 8 ಕೋಟಿ ರೂ. ಅನುದಾನವನ್ನು ನೆರೆ ಸಂಸ್ರಸ್ತರಿಗೆ ನೀಡಲು ಸರ್ಕಾರ ತಡೆ ಹಿಡಿದಿದ್ದು ಮೆಗಾ ಮಾರ್ಕೆಟ್‌ ನಿರ್ಮಾಣ ಕನಸಾಗೇ ಉಳಿದಿದೆ.

Advertisement

ಇದರಿಂದ ಇಂಡಿ ನಗರದ ವ್ಯಾಪಾರಸ್ಥರಿಗೆ ನಿರಾಸೆ ಮೂಡಿದ್ದು ಮತ್ತೆ ಅನುದಾನ ನೀಡಿ ಕಟ್ಟಡ ಪ್ರಾರಂಭಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ನಗರಾಭಿವೃದ್ಧಿ ಇಲಾಖೆಯಿಂದ 8 ಕೋಟಿ ರೂ. ವಿಶೇಷ ಸಹಾಯಧನ ನೀಡಲು, ಕರ್ನಾಟಕ ನಗರ ಮೂಲಭೂತ ಸೌಕರ್ಯಗಳ ಹಣಕಾಸು ಸಂಸ್ಥೆಯಿಂದ ಪ್ರಥಮ ಹಂತ 8 ಕೋಟಿ ರೂ. ಮತ್ತು ದ್ವಿತೀಯ ಹಂತದಲ್ಲಿ 8 ಕೋಟಿ ರೂ. ಸಾಲ 6.75 ಪ್ರತಿಶತ ಬಡ್ಡಿದರದಲ್ಲಿ ನೀಡಬೇಕಿತ್ತು. ಇನ್ನು ಸ್ಥಳೀಯ ಸಂಸ್ಥೆಯಿಂದ 2 ಕೋಟಿ ರೂ. ಅನುದಾನ ಈ ಕಟ್ಟಡ ನಿಮಾಣಕ್ಕೆ ನೀಡಬೇಕಿದ್ದು ಒಟ್ಟು 26 ಕೋಟಿ ವೆಚ್ಚದಲ್ಲಿ ಈ ಭವ್ಯ ಮೆಗಾ ಮಾರ್ಕೆಟ್‌ ನಿರ್ಮಾಣವಾಗಬೇಕಿತ್ತು. ಪ್ರಥಮ ಅಂತಸ್ತಿನಲ್ಲಿ 237 ಅಂಗಡಿ ನಿರ್ಮಾಣ ಮಾಡಬೇಕಿದ್ದು, ದ್ವಿತೀಯ ಅಂತಸ್ತಿನಲ್ಲಿ ವ್ಯಾಪಾರಸ್ಥರ ಬೇಡಿಕೆಗೆ ಅನುಗುಣವಾಗಿ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದರು.

ಜಿಲ್ಲಾ ಕೇಂದ್ರ ವಿಜಯಪುರದಲ್ಲಿ ಇಂತಹ ಕಟ್ಟಡ ಬಿಟ್ಟರೆ ಎರಡನೇ ಕಟ್ಟಡ ಇಂಡಿ ನಗರದ ಮೆಗಾ ಮಾರ್ಕೆಟ್‌ ಆಗಲಿದೆ. ವಿಜಯಪುರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮಾರ್ಕೆಟ್‌ನಲ್ಲಿ ಹೇಗೆ ಎಲ್ಲ ವಸ್ತುಗಳು ಒಂದೆಡೆ ಸಿಗುತ್ತವೆಯೋ ಹಾಗೆ ಎಲ್ಲ ವಸ್ತುಗಳು ಒಂದೇ ಕಡೆ ಸಿಗುವಂತೆ ಮಾಡಲು ಈ ಮೆಗಾ ಮಾರ್ಕೆಟ್‌ ನಿರ್ಮಾಣವಾಗುತ್ತದೆ ಎಂದು ಜನ ಖುಷಿ ಪಟ್ಟಿದ್ದರು ಆದರೆ ಈಗ ಇವೆಲ್ಲವುಗಳಿಗೆ ಸರಕಾರ ಅನುದಾನ ತಡೆ ಹಿಡಿದಿದ್ದರಿಂದ ಜನರಲ್ಲಿ ನಿರಾಸೆ ಮೂಡಿದೆ. ಇನ್ನು ಎರಡು ವರ್ಷಗಳ ಹಿಂದೆ ಪುರಸಭೆ ವತಿಯಿಂದ ರಸ್ತೆ ಅಗಲೀಕರಣ ಸಂದರ್ಭದಲ್ಲಿ 110 ಅಂಗಡಿ ಕೆಡವಲಾಗಿತ್ತು.

ಹೀಗಾಗಿ ಅಂಗಡಿಗಳನ್ನು ಕಳೆದುಕೊಂಡ 110 ಜನರಿಗೂ ಇಲ್ಲಿ ನ್ಯಾಯ ಸಿಗುವಂತೆ ಮಾಡುತ್ತೇನೆ ಎಂದು ಶಾಸಕ ವೈ.ವಿ. ಪಾಟೀಲ ಹೇಳಿದ್ದರು. ಈ ಕಟ್ಟಡ ನಿರ್ಮಾಣದ ನಂತರ ಕಟ್ಟಡ ಕಳೆದುಕೊಂಡ ಎಲ್ಲರಿಗೂ ಪ್ರಥಮ ಅದ್ಯತೆ ನೀಡಿ ಅವರಿಗೆ ಅಂಗಡಿ ಒದಗಿಸುವ ಕಾರ್ಯ ಪುರಸಭೆ ಮಾಡುತ್ತದೆ ಎಂದು ತಿಳಿದು ಅಂಗಡಿಕಾರರು ಸಹ ಖುಷಿಯಾಗಿದ್ದರು. ಆದರೆ ಅವೆಲ್ಲವುಗಳು ಈಗ ಹುಸಿಯಾಗಿವೆ.

Advertisement

26 ಕೋಟಿ ವೆಚ್ಚದಲ್ಲಿ 1.6 ಎಕರೆ ಜಮೀನಿನಲ್ಲಿ (ಹಳೆ ಗೋಡಾವನ
ಸ್ಥಳ) ಕಟ್ಟಡ ಮಾಡಲು ತೀರ್ಮಾನಿಸಲಾಗಿತ್ತು. ನೆರೆ ಸಂತ್ರಸ್ತರಿಗಾಗಿ ಮೆಗಾ ಮಾರ್ಕೆಟ್‌ ನಿರ್ಮಾಣಕ್ಕೆ ಮಂಜೂರಾದ 8 ಕೋಟಿ ರೂ.ಯನ್ನು ಸರ್ಕಾರ ತಡೆ ಹಿಡಿದಿದೆ. ಮತ್ತೆ ಡಿಸಿ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಮಂಜೂರಾದ ಮೇಲೆ ಕಟ್ಟಡ ನಿರ್ಮಿಸಲಾಗುವುದು.
ಗಂಗಾಧರ ವಾಲಿ,
ಪುರಸಭೆ ಮುಖ್ಯಾಧಿಕಾರಿ

ಈಗಾಗಲೆ ಮೆಗಾ ಮಾರ್ಕೆಟ್‌ ನಿರ್ಮಾಣಕ್ಕೆ ಸ್ಥಳ ನಿಯೋಜನೆ
ಮಾಡಲಾಗಿದೆ. ಸರಕಾರದಿಂದ 8 ಕೋಟಿ ರೂ. ಅನುದಾನ ಸಹ ಮಂಜೂರಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದರಿಂದ ಮಂಜೂರಾದ ಹಣ ತಡೆ ಹಿಡಿದಿರಬಹುದು. ಮತ್ತೆ ಹಣ ಮಂಜೂರು ಮಾಡಲು ಸರಕಾರಕ್ಕೆ ಮನವಿ ಮಾಡಿದ್ದು ಶೀಘ್ರದಲ್ಲೇ ಮೆಗಾ ಮಾರ್ಕೆಟ್‌ ನಿರ್ಮಾಣಕ್ಕೆ ಚಾಲನೆ ನೀಡಲಿದ್ದೇವೆ.
ಯಶವಂತರಾಯಗೌಡ ಪಾಟೀಲ,
ಶಾಸಕ

ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next