Advertisement

ಲಿಂಬೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ

03:09 PM May 20, 2019 | Team Udayavani |

ಇಂಡಿ: ಬರದ ತಾಲೂಕು ಎಂದೇ ಹಣೆಪಟ್ಟಿ ಕಟ್ಟಿಕೊಂಡ ಇಂಡಿ ತಾಲೂಕು ಲಿಂಬೆ ಬೆಳೆಗೆ ಪ್ರಸಿದ್ಧಿ ಪಡೆದಿದೆ. ಸುಮಾರು 25-30 ವರ್ಷಗಳ ಹಿಂದೆಯೇ ಇಂಡಿ ಪಟ್ಟಣದ ಪ್ರಗತಿಪರ ರೈತ ಉದ್ಯಾನ ಪಂಡಿತ ಗುರಪ್ಪ ಹಂಜಗಿಯವರ ತೋಟದಲ್ಲಿ ಬೆಳೆದ ಲಿಂಬೆಗೆ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ ಬಂದ ಹೆಗ್ಗಳಿಕೆಯಿದೆ.

Advertisement

ಮೇಲಿಂದ ಮೇಲೆ ಮಳೆ ಕೊರತೆಯಿಂದ ತಾಲೂಕಿನ ಭೂಮಿಯಲ್ಲಿ ಅಂತರ್ಜಲ ಮಟ್ಟದ ಭಾರಿ ಕುಸಿತದಿಂದಾಗಿ ಬಾವಿ, ಕೊಳವೆ ಬಾವಿಗಳು ಬತ್ತಿದ್ದು, ತೋಟಗಾರಿಕೆ ಬೆಳೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಹಾಕಿ ಅವುಗಳನ್ನು ಉಳಿಸುವ ಪ್ರಸಂಗ ಬಂದಿದೆ.

ಲಿಂಬೆ ಬೆಳೆ ದೀರ್ಘಾವಧಿ ಬೆಳೆಯಾಗಿದ್ದು ಒಮ್ಮೆ ಈ ಗಿಡ ಫಲ ಕೊಡಲು ಆರಂಭಿಸಿದರೆ ಸುಮಾರು 30ರಿಂದ 40 ವರ್ಷಗಳವರೆಗೆ ಬರುತ್ತದೆ. ತಾಲೂಕಿನಲ್ಲಿ ಸುಮಾರು 8 ಸಾವಿರ ರೈತರು 5,700 ಹೆಕ್ಟೇರ್‌ ಪ್ರದೇಶದಲ್ಲಿ ಲಿಂಬೆ ಬೆಳೆಯಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.

ಬರಗಾಲದ ತೀವ್ರ ಬವಣೆಯಿಂದ ಹಳ್ಳ, ಕೊಳ್ಳ, ಬಾವಿ, ಕೊಳವೆ ಬಾವಿಗಳು ದಿನೇ ದಿನೇ ಬತ್ತಿ ಹೋಗುತ್ತಿದ್ದು ಲಿಂಬೆ ಬೆಳೆಗಾರ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಇಂಥ ದೀರ್ಘಾವಧಿ ಫಲ ಕೊಡುವ ಲಿಂಬೆ ಬೆಳೆಯ್ನು ಉಳಿಸಲು ಇಂಥ ಬೇಸಿಗೆಯಲ್ಲಿಯೂ ಅನೇಕ ರೈತರು ಟ್ಯಾಂಕರ್‌ ಗಳ ಮೂಲಕ ನೀರು ಹಾಕಿ ಗಿಡಗಳನ್ನು ರಕ್ಷಿಸುತ್ತ ಬಂದಿದ್ದರೂ ಬಹಳಷ್ಟು ಪಾಲು ಲಿಂಬೆ ಬೆಳೆ ನೀರಿಲ್ಲದೇ ಒಣಗಿ ನೆಲ ಕಚ್ಚಿದೆ ರೈತ ಸಾಲ ಶೂಲ ಮಾಡಿ ಈ ಲಿಂಬೆ ಬೆಳೆಯನ್ನು ಉಳಿಸಲು ಟ್ಯಾಂಕರ್‌ಗಳ ಮೂಲಕ ದೂರದಿಂದ ಗಿಡಗಳಿಗೆ ನೀರನ್ನು ತಂದು ಹಾಕಿ ಕೈಸೋಲುವ ಸ್ಥಿತಿಗೆ ಬಂದಿದ್ದಾನೆ .

ಲಿಂಬೆಗೆ ಪ್ರಸಿದ್ಧಿ ಪಡೆದ ಇಂಡಿ ತಾಲೂಕಿಗೆ ಸರಕಾರ ಲಿಂಬೆ ಅಭಿವೃದ್ಧಿ ಮಂಡಳಿಯನ್ನು ಹಿಂದಿನ ಸರಕಾರ ಶಾಸಕ ಯಶವಂತರಾಯಗೌಡ ಪಾಟೀಲರ ಪ್ರಯತ್ನದಿಂದ ನೀಡಿದೆ. ಆದರೆ ಈ ಮಂಡಳಿ ಕಮರಿ ಒಣಗಿ ನಾಶವಾಗುತ್ತಿರುವ ಲಿಂಬೆ ಬೆಳೆಯ ಉಳಿವಿಗೆ ಸರಕಾರದಿಂದ ರೈತರಿಗೆ ಲಿಂಬೆ ಗಿಡಗಳ ಉಳುವಿಗೆ ರೈತರ ಸಹಾಯಕ್ಕೆ ಬರಬೇಕಾದ ಪರಿಸ್ಥಿತಿಯಿದೆ.

Advertisement

ಸತತ ಬರಗಾಲಕ್ಕೆ ತುತ್ತಾಗಿ ಅಸಹಾಯಕನಾದ ರೈತ ಟಾಂಕರ ಗಳ ಮೂಲಕ ಕೊಂಡು ನೀರನ್ನು ಗಿಡಗಳಿಗೆ ಹಾಕಿ ಇಂದು ಅಸಹಾಯಕ ಸ್ಥಿಗೆ ಬಂದಿದ್ದಾನೆ. ಕೊಂಡು ಹಾಕಲು ಸಾಲ ಶೂಲ ಮಾಡಿ ಬೇಸತ್ತು ಇಂದು ಕೈ ಚೆಲ್ಲಿ ಕುಳಿತಿದ್ದಾನೆ. ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲೇ ನೀರಿಲ್ಲದೇ ಸುಮಾರು 3 ಸಾವಿರ ಹೆಕ್ಟೇರ್‌ ಪ್ರದೇಶದಷ್ಟು ಲಿಂಬೆ ಒಣಗಿ ಹೋಗಿದ್ದು ನಿತ್ಯ ಈ ಪರಿಸ್ಥಿತಿ ಮಂದುವರಿದರೆ ಲಿಂಬೆ ಸಂಪೂರ್ಣ ಒಣಗಿ ಹೋಗಿ ರೈತ ಮತ್ತಷ್ಟು ತೊಂದರೆ ಅನುಭವಿಸುವಂತಾಗುತ್ತದೆ.

ನೀರಿಲ್ಲದೇ ಲಿಂಬೆ ಬೆಳೆ ನಾಶವಾದ ನಂತರ ಬೆಳೆಗೆ ಪರಿಹಾರ ಕೊಡುವ ಸರಕಾರ ಬೆಳೆ ಒಣಗುವ ಮುನ್ನ ಬೆಳೆ ಉಳಿಸಲು ನೀರಿಲ್ಲದೇ ಒಣಗುತ್ತಿರುವ ಇಂಥ ಸ್ಥಿತಿಯಲ್ಲಿ ಸರಕಾರ ರೈತನ ಸಹಾಯಕ್ಕೆ ಬರಬೇಕಿದೆ. ಲಿಂಬೆ ಬೆಳೆ ನಾಶವಾದ ಬಳಿಕ ಒಂದು ಒಣಗಿದ ಗಿಡಕ್ಕೆ ನೂರೋ ಇನ್ನೂರೋ ಪರಿಹಾರ ನೀಡಿ ರೈತರ ಕಣ್ಣೊರೆಸುವುದಕ್ಕಿಂತ ಸರಕಾರ ಲಿಂಬೆ ಬೆಳೆಗಾರ ರೈತರ ನೆರವಿಗೆ ಬಂದು ಲಿಂಬೆ ಬೆಳೆ ಉಳಿಸಲು ಸಹಾಯ ಹಸ್ತ ನೀಡಿ ರೈತರ ನೆರವಿಗೆ ಬರುವುದೆ ಕಾದು ನೋಡಬೇಕಿದೆ.

ಲಿಂಬೆ ಅಭಿವೃದ್ಧಿ ಮಂಡಳಿಯ ಪ್ರಭಾರ ಕಾರ್ಯದರ್ಶಿಹಾಗೂ ಇಂಡಿ ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್‌.ಟಿ. ಹಿರೇಮಠ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದರೆ, ಹಾಳಾದ ಬೆಳೆಗೆ ಪರಿಹಾರಕ್ಕೆ ಹಾಗೂ ಸದ್ಯಕ್ಕಿರುವ ಬೆಳೆಗೆ ನೀರು ಹಾಕಲು ಸಹಾಯಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರಕಾರದ ಆದೇಶ ಬಂದ ನಂತರ ಅದರಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಲಿಂಬೆ ಇಂಡಿ ತಾಲೂಕಿನ ಪ್ರಸಿದ್ಧ ತೋಟಗಾರಿಕೆ ಬೆಳೆಯಾಗಿದ್ದು ಸುಮಾರು 8 ಸಾವಿರಕ್ಕಿಂತ ಅಕ ರೈತರು ಈ ಬೆಳೆಯನ್ನೇ ಅವಲಂಬಿಸಿದ್ದಾರೆ. ಸರಕಾರ ಬೆಳೆ ಒಣಗಿ ಹೋದ ನಂತರ ಪರಿಹಾರ ಕೊಡುವುದಕ್ಕಿಂತ ಬೆಳೆ ಉಳಿಸಲು ಗಿಡಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಕಲು ರೈತರ ನೆರವಿಗೆ ಬರಬೇಕು.
ಸಿದ್ಧಲಿಂಗ ಹಂಜಗಿ,
ರಾಜು ಕುಲಕರ್ಣಿ, ಲಿಂಬೆ ಬೆಳೆಗಾರರು

Advertisement

Udayavani is now on Telegram. Click here to join our channel and stay updated with the latest news.

Next