ಇಂಡಿ: ಪ್ರಾಚೀನ ಕಾಲದಲ್ಲಿ ನಮ್ಮ ಪೂರ್ವಜರ ಗಟ್ಟಿತನಕ್ಕೆ ಮತ್ತು ಆರೋಗ್ಯದ ಸಮಸ್ಯೆಗಳಿಲ್ಲದೆ ಬದುಕುತ್ತಿರುವುದಕ್ಕೆ ಅವರು ಸೇವಿಸುತ್ತಿದ್ದ ಆಹಾರ ಪದ್ಧತಿಗಳೆ ಪ್ರಮುಖ ಕಾರಣ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಆತ್ಮ (ಎಟಿಎಂಎಸ್) ವಿ.ಪ್ರಾ.ಸ.ಸಾ. ಕೃಷಿ ಸಂಘಗಳ ಒಕ್ಕೂಟ ವಿಜಯಪುರ ಹಾಗೂ ಕೆ.ವಿ.ಕೆ ಸಹಯೋಗದಲ್ಲಿ ಮುಂಗಾರು ಹಂಗಾಮಿನ ಸಿರಿಧಾನ್ಯ ಆಂದೋಲನ ಹಾಗೂ ಕಿಸಾನಗೋಷ್ಠಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತನ ಬದುಕು ಅತ್ಯಂತ ದುಸ್ತರವಾಗಿದೆ. ಇದಕ್ಕೆ ಮೇಘರಾಜನ ಅವಕೃಪೆಯೇ ಕಾರಣ. ಇಂದು ರೈತರು ಸಹಿತ ಬೆಳೆಗಳನ್ನು ಬೆಳೆಯುವಾಗ ಆವೃತ ಮಾದರಿ ಕೃಷಿ ಪದ್ಧತಿ ಅಳವಡಿಸಿ ನೂತನ ತಂತ್ರಜ್ಞಾನಗಳ ಸಹಕಾರದಿಂದ ಅಭಿವೃದ್ಧಿಯತ್ತ ಹೊಸ ಹೆಜ್ಜೆ ಹಾಕಬೇಕು. ಸದ್ಯ ಮೇಘರಾಜನ ಕೃಪೆಯಾಗಿರುವುದರಿಂದ ಜಿಲ್ಲೆಯಾದ್ಯಂತ ಅಲ್ಪ ಸ್ವಲ್ಪ ಮಳೆಯಾಗಿದೆ. ಇದರಿಂದ ರೈತನ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ರೋಹಿಣಿ ಮಳೆ ಬಿತ್ತನೆ ಮಾಡಿದರೆ ಬೆಳೆಗಳಿಗೆ ಯಾವುದೇ ರೋಗ ಬರುವುದಿಲ್ಲ ಎಂದು ಹೇಳಿದರು.
ಸರಕಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಅನೇಕ ಯೋಜನೆಗಳು ಜಾರಿ ಮಾಡಿದೆ. ಅಧಿಕಾರಿಗಳು ಸರಿಯಾಗಿ ರೈತರಿಗೆ ತಲುಪಿಸಬೇಕು. ಸರಕಾರದ ಪ್ರತಿಯೊಂದು ಯೋಜನೆಗಳು ಕೇವಲ ಕಾಟಾಚಾರದ ಪ್ರಚಾರ ಗಿಟ್ಟಿಸಿಕೊಳ್ಳುವಂತೆ ಆಗಬಾರದು. ಕೃಷಿ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಬೇಕು. ಮುಂಗಾರು ಹಂಗಾಮಿನಲ್ಲಿ ರೈತರು ಎಂತಹ ಬೆಳೆಗಳನ್ನು ಬೆಳೆಯಬೇಕು ಮತ್ತು ಹೊಸ ಆವಿಷ್ಕಾರಗಳನ್ನು ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳಲು ರೈತರಿಗೆ ಸಲಹೆ ನೀಡಬೇಕು.
ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆಗೆ ಬೇಕಾದ ರಸಗೊಬ್ಬರ, ಬೀಜ ಇತ್ಯಾದಿ ಸಾಮಗ್ರಿಗಳ ಕೊರತೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ರೈತರೆ ದೇಶದ ಬೆನ್ನೆಲುಬು ಎಂದು ಹೇಳಿದರು.
ಇಂಡಿ ಸಿದ್ದಾರೂಢ ಮಠದ ಡಾ| ಸ್ವರೂಪಾನಂದ ಮಹಾಸ್ವಾಮಿಗಳು, ನಾದ ಗ್ರಾಮದ ಶಿವಾನಂದ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ತಾಪಂ ಅಧ್ಯಕ್ಷ ಶೇಖರ ನಾಯಕ, ಕೃಷಿ ಇಲಾಖೆ ಅಧಿಕಾರಿ ಮಹಾದೇವಪ್ಪ ಏವೂರ, ರೈತ ಎಸ್.ಟಿ. ಪಾಟೀಲ, ಅಶೋಕ ಕುಲಕರ್ಣಿ ವೇದಿಕೆಯಲ್ಲಿದ್ದರು. ಮದ್ದುಗೌಡ ಪಾಟೀಲ, ಸೈಫನ್ ಮುಲ್ಲಾ, ನರಸಪ್ಪ ಮೇತ್ರಿ, ಪಶು ವೈದ್ಯಾಧಿಕಾರಿ ಸಿ.ಬಿ. ಕುಂಬಾರ, ಬಾಬುರಾಯ ಜಿಗಜಿಣಿ, ಶಿವಶಂಕರ ಕಾಗನಳ್ಳಿ, ಪಾಂಡು ಪ್ಯಾಟಿ, ಭೀಮರಾಯ ಕಣ್ಣಿ, ಹುಸೇನಿ ಮಾರ್ಕಪನಹಳ್ಳಿ, ಚಂದ್ರಾಮ ಹಿಪ್ಪಳ್ಳಿ, ಮಳಸಿದ್ದ ನಿಂಬಾಳ, ದಾದು ಮುಲ್ಲಾ, ಶಿವುಪುತ್ರ ಸೇರಿದಂತೆ ಅನೇಕ ಪ್ರಗತಿಪರ ರೈತರು ಇದ್ದರು.