Advertisement

ಸಿದ್ಧಲಿಂಗನ ಸನ್ನಿಧಿಯಲ್ಲಿ ದೀಪೋತ್ಸವ

04:32 PM Nov 13, 2019 | Naveen |

ಇಂಡಿ: ಇಂಡಿ ತಾಲೂಕಿನ ಲಚ್ಯಾಣದ ಸಿದ್ದಲಿಂಗ ಮಹಾರಾಜರ ಕಮರಿಮಠದಲ್ಲಿ ಕಾರ್ತಿಕ ಮಾಸದ ನಿಮಿತ್ತ ಭಕ್ತರು ಸೋಮವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ತೈಲದ ದೀಪ ಬೆಳಗಿ ಭಕ್ತಿ ಸಮರ್ಪಿಸಿದರು.

Advertisement

ಪ್ರತಿ ವರ್ಷದಂತೆ ಈ ವರ್ಷವು ಕಾರ್ತಿಕ ಮಾಸದ ಅಂಗವಾಗಿ ಮಠದಲ್ಲಿನ ವಿಶಾಲವಾದ ಒಳ ಆವರಣದಲ್ಲಿ, ನಿತ್ಯ ನಸುಕಿನ ಜಾವ ಹಾಗೂ ರಾತ್ರಿಯ ಸಮಯದಲ್ಲಿ ಬೆಳಗುವ ನೂರಾರು ದೀಪದ ಬೆಳಕು ಮಠದ ಅಂದವನ್ನು ಹೆಚ್ಚಿಸಿದೆ. ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸ್ಥಳೀಯ ಸಂಗನಬಸವೇಶ್ವರ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ದೀಪದ ಪಣತೆಗಳನ್ನು ಓಂ ನಮಃ ಶಿವಾಯ, ಜೈ ಸಿದ್ದಲಿಂಗ, ಓಂ ಎಂಬ ಅಕ್ಷರದ ಚಿತ್ತಾರ ಸೇರಿದಂತೆ, ಹತ್ತು ಹಲವು ಚಿತ್ರ ಬಿಡಿಸಿದ ಸುಂದರ ದೀಪಾಲಂಕಾರದ ನೋಟ, ಮಠಕ್ಕೆ ಬಂದ ಭಕ್ತರ ಕಣ್ಮನ ಸೆಳೆಯುತ್ತಿದ್ದರೆ, ಗಂಟೆ, ಜಾಗಟೆಗಳ ನಿನಾದ ಭಕ್ತಿ ಲೋಕವನ್ನೆ ಸೃಷ್ಟಿಸಿದೆ.

ಕಳೆದ ದೀಪಾವಳಿ ಅಮಾವಾಸ್ಯೆಯಿಂದ ಪ್ರಾರಂಭವಾದ ಈ ದೀಪೋತ್ಸವ ಬರುವ ಛಟ್ಟಿ ಅಮಾವಾಸ್ಯೆವರೆಗೆ ನಡೆಯಲಿದ್ದು, ಈ ಕಾರ್ತಿಕ ಮಾಸದ ಅಂಗವಾಗಿ ಸ್ಥಳೀಯ ಹಾಗೂ ಸುತ್ತಲ ಪಡನೂರ, ಬರಗೂಡಿ, ಲೋಣಿ ಕೆ.ಡಿ. ಗ್ರಾಮದ ಭಕ್ತರು ತಮ್ಮ ಮನೆಯಿಂದ ದೀಪಕ್ಕೆ ಬೇಕಾದ ತೈಲ ತಂದು ಬೆಳಗುವ ಪಣತೆಗೆ ಹಾಕಿ ದೀಪದ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಪುನೀತರಾಗುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಇಲ್ಲಿನ ಐಟಿಐ ಕಾಲೇಜಿನ ವಿದ್ಯಾರ್ಥಿಗಳಾದ ನಾಗರಾಜ ಹಿಪ್ಪಳೆ, ಸಿದ್ದು ಕೆಳಗಿನಮನಿ, ಬಸವರಾಜ ಕುಂಬಾರ, ನಾಗರಾಜ ನಿಕ್ಕಳ, ರಾಹುಲ್‌ ಬೋಳಶೆಟ್ಟಿ, ಮಹಾಂತೇಶ ಬಿರಾದಾರ, ಸಂಜೀವ ಪೂಜಾರಿ, ಸಂಜೀವ ಕಟ್ಟಿಮನಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next