ಇಂಡಿ: ಕರಾಟೆ ಕ್ರೀಡೆ ಎಂದು ಘೋಷಣೆಯಾಗಿದ್ದು ಇದನ್ನು ಪಠ್ಯಕ್ರಮದಲ್ಲಿಯೂ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ವಿಜಯಪುರ ತಾಲೂಕು ಬಿಟ್ಟರೆ ಇಂಡಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಕರಾಟೆ ಪಟುಗಳಿದ್ದಾರೆ ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎ.ಬಿ. ಕೌಲಗಿ ಹೇಳಿದರು.
ಪಟ್ಟಣದ ಉಮರ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಜಿಲ್ಲಾ ಸಾರ್ವಜನಿಕರ ಶಿಕ್ಷಣ ಇಲಾಖೆ, ಅಬುಸುಫೀಯಾನ್ ಶಿಕ್ಷಣ ಸಂಸ್ಥೆ, ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕರಾಟೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಉತ್ತಮ ಕರಾಟೆ ಕ್ರೀಡಾಪಟುಗಳಿದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ವಿಜಯಪುರ ಜಿಲ್ಲೆಗೆ ಹಿರಿಮೆ ತಂದುಕೊಟ್ಟಿದ್ದಾರೆ. ಅದರಂತೆ ಈ ಬಾರಿಯೂ ವಿಜಯಪುರ ಜಿಲ್ಲೆಯಿಂದ ಅತಿ ಹೆಚ್ಚು ಕರಾಟೆ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ವಕ್ತಾರ ಶಿವಕುಮಾರ ಶಾರದಳ್ಳಿ ಮಾತನಾಡಿ, ಕಳೆದ ಹಲವು ವರ್ಷಗಳ ಹಿಂದೆ ದೇಶದ ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂಬ ಹಿನ್ನೆಲೆಯಲ್ಲಿ ಕರಾಟೆ ಕ್ರೀಡೆಗೆ ನೀಡಿದ ಮಹತ್ವ ಇಂದಿನ ದಿನಗಳಲ್ಲಿ ಇಲ್ಲವಾಗಿದೆ. ಕರಾಟೆಯನ್ನೂ ಕ್ರೀಡೆ ಎಂಬ ಘೋಷಣೆ ಕೇವಲ ಸರಕಾರ ದಾಖಲೆಯಲ್ಲಾಗಿದೆ.
ಇನ್ನುಳಿದ ಕ್ರೀಡೆಗಳನ್ನು ಸಂಘಟಿಸುವಂತೆ ಕರಾಟೆ ಕ್ರೀಡೆಯನ್ನು ರಾಜ್ಯದಲ್ಲಿ ಸಂಘಟಿಸಲು ಸರಕಾರಗಳು ಹಿನ್ನಡೆಯಾಗುತ್ತಿವೆ. ಆದರೂ ಕರಾಟೆ ಕ್ರೀಡೆ ಉಳಿವಿಗಾಗಿ ಹಾಗೂ ಹೆಣ್ಣುಮಕ್ಕಳ ಸಹಾಯಕ್ಕಾಗಿ ವಿಜಯಪುರ ಜಿಲ್ಲೆಯ ಕರಾಟೆ ಶಿಕ್ಷಕರ ಸಂಘ ಹಾಗೂ ರಾಜು ಕರಾಟೆ ಶಿಕ್ಷಕರ ಸಂಘ ಸರಕಾರದ ಜೊತೆಗೆ ಸಹಕಾರವಿಟ್ಟು ತಾಲೂಕು ಮಟ್ಟದ ಕರಾಟೆ ಕ್ರೀಡಾಕೂಟ ಸಂಘಟಿಸುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿನೋದ ಹತ್ತಳ್ಳಿ, ರಾಯಿಸ್ ಅಸ್ಟೇಕರ್ ಮಾತನಾಡಿದರು. ಈ ವೇಳೆ ಗೌರೀಶ ಪಾಟೀಲ, ಶ್ರೀಶೈಲ ನರಳೆ ಹಾಗೂ ಪ್ರಕಾಶ ರವಳಿ ಕರಾಟೆ ಪಟುಗಳಿಗೆ ಬೆಲ್r ವಿತರಿಸಲಾಯಿತು.
ಮುಕ್ತಾರ್ ಅರಬ, ಮುಖ್ಯಗುರು ಬಿ.ಬಿ. ಮಂಕಣಿ, ಎಸ್.ಎಸ್. ಹಚಡದ, ಎಂ.ಎ. ನಾಯ್ಕೋಡಿ, ಬಿ.ಎ. ಹಾದಿಮನಿ, ನಿಂಗಪ್ಪ ಕೌಲಗಿ, ಬಿ.ಎಂ.ತೇರದಾಳ, ಜೆ.ಸಿ.ಹಿರೇಪಟ್ಟ ವೇಕೆಯಲ್ಲಿದ್ದರು. ಗೌರೀಶ ಕಟ್ಟಿಮನಿ, ಪ್ರವೀಣ ವಠಾರ, ರಮೇಶ ಚವ್ಹಾಣ, ಸಂತೋಷ ರಾಠೊಡ ನಿರ್ಣಾಯಕರಾಗಿದ್ದರು.
ಕರಾಟೆ ಶಿಕ್ಷಕರಾದ ಅಶೋಕ ಮಾಣೆ, ಈರಣ್ಣ ಸಂಗೋಗಿ, ಎಂ.ಎಲ್.ಚೌಧರಿ, ವಿನೋಧ ಜಧವ, ಪ್ರಕಾಶ ರಾಠೊಡ, ಕುಂಬಾರ ಸೇರಿದಂತೆ ಇನ್ನಿತರಿದ್ದರು. ಶಬ್ಬೀರ್ ಯಾದಗಿರಿ ಸ್ವಾಗತಿಸಿದರು. ಎಸ್.ಬಿ. ಓಂಕಾರಿ ನಿರೂಪಿಸಿದರು.