ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮದ ಗ್ರಾಮ ಪಂಚಾಯತ್ ಗ್ರಂಥಾಲಯ ಸಾಕಷ್ಟು ಓದುಗರನ್ನು ಹೊಂದಿದೆ. ಆದರೆ ಅಲ್ಲಿ ಸ್ಥಳದ ಕೊರತೆ ಇರುವುದರಿಂದ ಓದುಗರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
1992ರಲ್ಲೇ ಗ್ರಾಮ ಪಂಚಾಯತ್‌ನಲ್ಲಿ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳದ ಕೊರತೆ ಇರುವುದರಿಂದ ಹಿರೇಮಸಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಗ್ರಂಥಾಲಯ ನಡೆಸಲಾಗುತ್ತಿದೆ. ಗ್ರಂಥಾಲಯದ ಮೇಲ್ಭಾಗದ ಛಾವಣಿ ಕುಸಿದು ಬೀಳುತ್ತಿದೆ. ಮಳೆಗಾಲ ಆರಂಭವಾದರೆ ಸಾಕು ಮಳೆ ನೀರು ಸೋರಿಕೆಯಾಗಿ ಪುಸ್ತಕಗಳೆಲ್ಲವೂ ನೀರಿನಿಂದ ತೋಯ್ದು ಒದ್ದೆಯಾಗುತ್ತವೆ.
ಸ್ಥಳೀಯ ಗ್ರಂಥಪಾಲಕರು ಮಳೆಗಾಲದಲ್ಲಿ ತಮ್ಮ ಮನೆಯಲ್ಲಿನ ತಾಡಪಾಲುಗಳನ್ನು ತರಿಸಿಕೊಂಡು ಪುಸ್ತಕದ ಮೇಲೆ ಹೊದಿಸಿ ಅವುಗಳನ್ನು ರಕ್ಷಿಸುತ್ತಿದ್ದಾರೆ.
ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಪಂಚಾಯತ್ ವತಿಯಿಂದ ಗ್ರಂಥಾಲಯಕ್ಕೆ ಸ್ಥಳ ಒದಗಿಸಲಾಗಿದೆ. ಗ್ರಂಥಾಲಯ ಇಲಾಖೆ ವತಿಯಿಂದ ಆ ಸ್ಥಳದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಬೇಕಿದೆ. ಗ್ರಂಥಾಲಯದಲ್ಲಿ 2 ಸಾವಿರ ಪುಸ್ತಕಗಳಿಗೆ. ಪ್ರತಿ ದಿನ ಮೂರುದಿನಪತ್ರಿಕೆಗಳು ಗ್ರಂಥಾಲಯಕ್ಕೆ ಬರುತ್ತವೆ.
ಪತ್ರಿಕೆಗಳ ಓದಗರೆ ಹೆಚ್ಚಿಗೆ ಇರುವುದರಿಂದ ಎಲ್ಲ ಪತ್ರಿಕೆಗಳನ್ನು ತರಿಸುವಂತೆ ಓದುಗರು ಸಾಕಷ್ಟು ಬಾರಿ ಗ್ರಂಥಪಾಲಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಲಾಖೆ ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ. ಅವರು ಅನುಮತಿ ನೀಡಿದರೆ ಹೆಚ್ಚಿನ ಪತ್ರಿಕೆಗಳನ್ನು ತರಿಸುತ್ತೇನೆ ಎಂದು ಗ್ರಂಥಪಾಲಕರು ಹೇಳುತ್ತಿದ್ದಾರೆ ಎಂದು ಸ್ಥಳೀಯ ಓದುಗರೊಬ್ಬರು ತಿಳಿಸಿದ್ದಾರೆ.
ಪ್ರತಿ ದಿನ ಕನಿಷ್ಠ 30 ಓದುಗರು ಗ್ರಂಥಾಲಯಕ್ಕೆ ಬಂದು ಓದುತ್ತಾರೆ. ಅಲ್ಲಿ ಓದುಗರಿಗೆ ಕೂರಲು ಸ್ಥಳಾವಕಾಶದ ಕೊರತೆಯೂ ಇದೆ. ಹೀಗಾಗಿ ಓದುಗರು ನಿಂತುಕೊಂಡೆ ಪತ್ರಿಕೆಗಳನ್ನು ಓದುವ ಸ್ಥಿತಿ ಇದೆ.