ಇಂಡಿ: ಬಂಜಾರಾ ಸಮುದಾಯ ನೌಕರ ಬಾಂಧವರು ಮಕ್ಕಳಿಗೆ ಪ್ರೋತ್ಸಾಹಿಸಲು ಹಾಗೂ ಸಾಧಕರಿಗೆ ಸತ್ಕಾರ ಮಾಡಲು ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಇಂಡಿ ತಾಲೂಕು ಬಂಜಾರಾ ನೌಕರರ ಪತ್ತಿನ ಸಹಕಾರಿ ಸಂಘ, ಬಂಜಾರಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಬಂಜಾರಾ ಸಮಾಜ ಬಾಂಧವರು ಇವತ್ತಿಗೂ ಅನೇಕ ಕಷ್ಟ-ಕಾರ್ಪಣ್ಯಗಳ ನಡುವೆ ಜೀವನ ನಡೆಸುತ್ತಿದ್ದಾರೆ. ಬೇರೆ-ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಗುಳೆ ಹೋಗಿ ದುಡಿದುಕೊಂಡ ಬರುತ್ತಾರೆ. ಆದರೆ ಅವರು ಯಾರಿಗೂ ಯಾವತ್ತೂ ಮೋಸ ಮಾಡಿಲ್ಲ. ಬಂಜಾರಾ ಸಮುದಾಯ ಬಾಂಧವರು ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಎಂದರು.
ನಂಜುಂಡಪ್ಪ ವರದಿಯಂತೆ ಇಂಡಿ ತಾಲೂಕು ಹಿಂದುಳಿದಿದೆ. ಈ ತಾಲೂಕು ಗಡಿ ಭಾಗದಲ್ಲಿರುವುದರಿಂದ ಸಾಕಷ್ಟು ಕಷ್ಟ, ನಷ್ಟಗಳ ಮಧ್ಯೆ ನಾವು ಬದುಕುತ್ತಿದ್ದೇವೆ. ಪ್ರತಿ ಬಾರಿ ಬರಗಾಲ ನಮ್ಮನ್ನು ಕಾಡಿದರೆ ಒಂದೊಮ್ಮೆ ಅತಿ ಮಳೆಯಾಗಿ ಅನಾವೃಷ್ಟಿಯಾಗುತ್ತದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ನಮ್ಮ ಜನಬದುಕು ಸಾಗಿಸುತ್ತಿರುವುದು ಹೆಮ್ಮೆ ಸಂಗತಿ ಎಂದರು.
ಜಿಒಸಿಸಿ ಬ್ಯಾಂಕ್ ಅಧ್ಯಕ್ಷ ಅರ್ಜುನ ಲಮಾಣಿ, ಬಂಜಾರಾ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ ನಾಯಕ, ತಾಪಂ ಸದಸ್ಯ ರವಿದಾಸ ಜಾಧವ, ವೈದ್ಯಾಧಿಕಾರಿ ರಮೇಶ ರಾಠೊಡ ಮಾತನಾಡಿದರು.
ಕೆಸರಟ್ಟಿಯ ಶಂಕರಲಿಂಗ ಮಠದ ಸೋಮಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಶೇಖರ ನಾಯಕ, ಜಿಒಸಿಸಿ ಬ್ಯಾಂಕ್ ಅಧ್ಯಕ್ಷ ಅರ್ಜುನ ಲಮಾಣಿ, ವಿಜಯಕುಮಾರ ನಾಯಕ, ಅರಣ್ಯಾಧಿಕಾರಿ ರಮೇಶ ಚವ್ಹಾಣ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ವೈದ್ಯಾಧಿಕಾರಿ ಡಾ| ರಮೇಶ ರಾಠೊಡ, ಸುಭಾಷ್ ರಾಠೊಡ, ತಾಪಂ ಸದಸ್ಯ ರವಿದಾಸ ಜಾಧವ, ಲಿಂಬಾಜಿ ರಾಠೊಡ, ಜಯರಾಮ ರಾಠೊಡ, ಪ್ರಕಾಶ ರಾಠೊಡ, ದೇಸು ರಾಠೊಡ, ಸುನೀಲ ಪವಾರ, ಎಸ್.ಕೆ. ರಾಠೊಡ, ಶ್ರೀಶೈಲ ಲಮಾಣಿ, ಶ್ರೀಕಾಂತ ಚವ್ಹಾಣ, ಅರ್ಜುನ ಚವ್ಹಾಣ, ಜಯರಾಮ್ ಚವ್ಹಾಣ, ಸುರೇಶ ಚವ್ಹಾಣ, ಯಶವಂತ ರಾಠೊಡ, ಲಿಂಬಾಜಿ ರಾಠೊಡ, ಧರ್ಮು ರಾಠೊಡ, ಎಸ್.ಟಿ. ಲಮಾಣಿ ಸೇರಿದಂತೆ ಮತ್ತಿತರರು ಇದ್ದರು.