Advertisement

2020ಕ್ಕೆ 24×7 ಕುಡಿವ ನೀರು

10:55 AM Jul 13, 2019 | Naveen |

ಇಂಡಿ: ಸುಮಾರು ದಶಕಗಳಿಂದ ಬೇಸಿಗೆಯಲ್ಲಿ ಇಂಡಿ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು ನೀರಿನ ಸಮಸ್ಯೆ ಪರಿಹರಿಸಲು ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ಪಣ ತೊಟ್ಟಿದ್ದು ಮಹಾರಾಷ್ಟ್ರ ಮಾದರಿಯಲ್ಲಿ ಧೂಳಖೇಡ ಬಳಿ ಹರಿದಿರುವ ಭೀಮಾ ನದಿಯಿಂದ ಇಂಡಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ 90.40 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಿದ್ದು 2020ರ ಜನವರಿ ತಿಂಗಳಲ್ಲಿ ನೀರು ಪೂರೈಕೆ ಆರಂಭಿಸಲು ತೀರ್ಮಾನಿಸಲಾಗಿದೆ.

Advertisement

ಮಹಾರಾಷ್ಟ್ರದ ಸೊಲ್ಲಾಪುರ ನಗರಕ್ಕೆ ಟಾಕಳಿ ಬಳಿ ಭೀಮಾ ನದಿಯಿಂದ ಕುಡಿಯುವ ನೀರನ್ನು ಶುದ್ಧೀಕರಿಸಿ ಯಾವ ರೀತಿ ನೀರು ನೀಡಲಾಗುತ್ತಿದೆಯೋ, ಅದೇ ಮಾದರಿಯಲ್ಲಿ ಇಂಡಿ ಪಟ್ಟಣಕ್ಕೆ ದಿನದ 24 ಘಂಟೆ ಕುಡಿಯುವ ನೀರು ಪೂರೈಸಬೇಕು ಎಂದು ಶಾಶ್ವತ ಯೋಜನೆಯೊಂದನ್ನು ಶಾಸಕರು ಕೈಗೆತ್ತಿಕೊಂಡಿದ್ದು ಅತೀ ಶೀಘ್ರದಲ್ಲಿಯೇ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ.

ಆಗಸ್ಟ್‌ ತಿಂಗಳಲ್ಲಿ ಪ್ರಾಯೋಗಿಕವಾಗಿ ಪಟ್ಟಣದ ಮಧ್ಯವರ್ತಿ ಸ್ಥಳದಲಿರುವ ಗ್ರಂಥಾಲಯದ ಪಕ್ಕದ ಕುಂಬಾರ ಓಣಿಯಲ್ಲಿ ನೀರಿನ ಸಂಗ್ರಹಾಲಯದ ತೊಟ್ಟಿಗೆ ನೀರನ್ನು ಹರಿಸಿ ಇದರಿಂದ ಕೆಲವು ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸಿ ನಂತರದಲ್ಲಿ 2ನೇ ಹಂತದಲ್ಲಿ ಜನೇವರಿ ತಿಂಗಳಲ್ಲಿ ವಿಜಯಪುರ ರಸ್ತೆಯ ಸುರಪುರ ಬಡಾವಣೆ ಸಮೀಪ ನೂತನವಾಗಿ ನಿರ್ಮಾಣ ಹಂತದ ಜಲ ಸಂಗ್ರಹಾಲಯದ ತೊಟ್ಟಿಗೆ ನೀರು ತುಂಬಿಸಿ ಇದರಿಂದ 15 ಸಾವಿರ ಮನೆಗಳಿಗೆ 24×7 ಕುಡಿಯುವ ನೀರು ಪೂರೈಸಲು ನಿರ್ಧರಿಸಲಾಗಿದೆ.

ಈಗಾಗಲೇ ಪಟ್ಟಣದಲ್ಲಿ 8 ಸಾವಿರ ಮನೆಗಳಿಗೆ ಉಚಿತ ಒಳಚರಂಡಿ ಜೋಡಣಾ ಕಾರ್ಯ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next