ಇಂಡಿ: ಕಾಂಗ್ರೆಸ್ ಪಕ್ಷಕ್ಕೆ ತನ್ನದೆಯಾದ ಇತಿಹಾಸವಿದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಪಕ್ಷದಲ್ಲಿರುವುದು ನಮ್ಮೆಲ್ಲರ ಸುದೈವ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪುರಸಭೆ ಅಭ್ಯರ್ಥಿಗಳ ಪರ ಮತಯಾಚನೆ ಮಾಡೋಣ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯ ಶಂಕರ ಪಾರ್ವತಿ ಸಭಾ ಭವನದಲ್ಲಿ 2019ರ ಪುರಸಭೆ ಚುನಾವಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ಆರು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದು ಶಾಸಕನಾಗಿ ನಾನು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಗರದಲ್ಲೂ ಸಾಕಷ್ಟು ಅಭಿವೃದ್ಧಿಗಳಾಗಿವೆ. ಆದರೆ ನಗರದ ಒಳ ರಸ್ತೆಗಳ ಅಭಿವೃದ್ಧಿ ಮಾಡಲು ಹಿಂದೆ ಆಗಿರಲಿಲ್ಲ. ಈ ಬಾರಿ ಅದನ್ನೂ ಸಹ ಸಂಪೂರ್ಣ ಅಭಿವೃದ್ಧಿ ಮಾಡಿ ಮುಖ್ಯ ರಸ್ತೆ ಮೇಲೆ ತಿರುಗಾಡುವಂತೆ ಭಾಸವಾಗುವಂತೆ ಮಾಡುತ್ತೇನೆ ಎಂದರು.
ಪುರಸಭೆಯಲ್ಲಿ ಕೇವಲ 23 ವಾರ್ಡ್‌ಗಳಿವೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರತಿ ವಾರ್ಡ್‌ಗೂ 10ಕ್ಕಿಂತ ಹೆಚ್ಚು ಜನ ಟಿಕೆಟ್ ಕೇಳುತ್ತಿದ್ದಾರೆ. ಟಿಕೆಟ್ ಕೇಳುವ ನೈತಿಕ ಹಕ್ಕು ನಿಮಗಿದೆ. ಆದರೆ ಎಲ್ಲ ವಾರ್ಡ್‌ಗೆ ಒಂದೇ ಟಿಕೆಟ್ ನೀಡಬೇಕಾಗಿರುವುದರಿಂದ ಉಳಿದವರು ಹತಾಶೆಯಾಗದೆ ತ್ಯಾಗ ಮಾಡಿ ಅವರ ಪರ ಮತಯಾಚನೆ ಮಾಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ತ್ಯಾಗ-ಬಲಿದಾನ ಎಂಬುದು ಪೂರ್ವಜರಿಂದ ನಡೆದುಕೊಂಡು ಬಂದಿದೆ. ತ್ಯಾಗ ಮಾಡಿದವರನ್ನು ಒಂದಿಲ್ಲ ಒಂದು ಬಾರಿ ಪಕ್ಷ ಗುರುತಿಸಿ ಉತ್ತಮ ಹುದ್ದೆ ನೀಡುತ್ತದೆ ಎಂದರು.
ನಾನು ಕಾಂಗ್ರೆಸ್ ಶಾಸಕನಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೆ ಗೆದ್ದು ಪುರಸಭೆಯಲ್ಲಿ ಅಧಿಕಾರ ನಡೆಸಿದರೆ ಅಭಿವೃದ್ಧಿ ಮಾಡಲು ಇನ್ನಷ್ಟು ಸುಲಭವಾಗುತ್ತದೆ. ನಗರದ ಜನತೆ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ರವಿಗೌಡ ಪಾಟೀಲ, ಮಹಾದೇವಿ, ಅಂತು ಜೈನ್, ಅನಂತ ಕೋಟಿ, ಇಲಿಯಾಸ್ ಬೋರಾಮಣಿ, ಕಲ್ಲನಗೌಡ ಬಿರಾದಾರ, ಸಂಬಾಜಿ ಮಿಸಾಳೆ, ಬಲುಗೌಡ ಪಾಟೀಲ, ಶ್ರೀಕಾಂತ ಕುಡಿಗನೂರ, ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಜಟ್ಟೆಪ್ಪ ರವಳಿ, ಸತ್ತಾರ ಬಾಗವಾನ, ಜಬ್ಟಾರ ಅರಬ, ರಶೀದ ರರಬ, ಭಿಮಣ್ಣ ಕವಲಗಿ, ಮೋಹನ್ ರಾಠೊಡ, ರಾಜು ಕುಲಕರ್ಣಿ, ಶ್ರೀಕಾಂತ ದೇವರ ಸೇರಿದಂತೆ ಮತ್ತಿತರರು ಇದ್ದರು.