Advertisement

ಭೂದಾನ ಮಾಡಿದ ರೈತರ ಕುಟುಂಬದಲ್ಲೊಬ್ಬರಿಗೆ ಕೆಲಸ

01:13 PM Aug 26, 2019 | Naveen |

ಇಂಡಿ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೂದಾನ ಮಾಡಿದ ರೈತರ ಕುಟುಂಬದಲ್ಲೊಬ್ಬರಿಗೆ ಕಾರ್ಖಾನೆಯಲ್ಲಿ ಕೆಲಸ ನೀಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.

Advertisement

ತಾಲೂಕಿನ ಮರಗೂರ ಗ್ರಾಮದ ಸಮೀಪದಲ್ಲಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರವುವಾರ ನಡೆದ ಪ್ರಥಮ ವರ್ಷದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

40 ವರ್ಷಗಳ ಹಿಂದೆ 175 ಎಕರೆ ಭೂದಾನ ಮಾಡಿದ ರೈತರಿಂದಲೇ ಇಂದು ನಾವು ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲು ಸಾಧ್ಯವಾಯಿತು. ಅವರ ತ್ಯಾಗದಿಂದಲೇ ಇಂದು ಈ ಬೃಹತ್‌ ಕಾರ್ಖಾನೆ ನಿರ್ಮಾಣವಾಗಿ ಸಾವಿರಾರು ರೈತರ ಆಶಾಕಿರಣವಾಗಿ ಬೆಳೆಯುತ್ತಿದೆ ಎಂದರು.

ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿದ್ದೇವೆ. ಆದರೆ ಅದನ್ನು ಬೆಳೆಸಿ ಉಳಿಸಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಕಾರ್ಖಾನೆಗೆ ಹೆಚ್ಚಿನ ರೈತರು ಕಬ್ಬು ನೀಡಿ ಕಾರ್ಖಾನೆ ಏಳ್ಗೆಗೆ ಶ್ರಮಿಸಬೇಕು ಎಂದ ಅವರು, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಒಂದೇ ಒಂದು ರೂ. ಅವ್ಯವಹಾರವಾದರೆ ಆ ಕ್ಷಣವೇ ನಾನು ಅಧ್ಯಕ್ಷ ಸ್ಥಾನದಲ್ಲಿರದೆ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ ಎಂದರು.

ಕಾರ್ಖಾನೆಯ 12 ನಿರ್ದೇಶಕರು ಸಹ ಅವಿರೋಧ ಆಯ್ಕೆಯಾಗಿದ್ದೇವೆ. ಹೀಗಿರುವುದರಿಂದ ನಾವು ಯಾವೊಬ್ಬ ನಿರ್ದೇಶಕರೂ ಸಹ ಸಭೆಗಳಿಗೆ ಹಾಜರಾಗಲು ದಿನ ಭತ್ಯ ಹಾಗೂ ಪ್ರಯಾಣ ಭತ್ಯೆ ಪಡೆಯುವುದಿಲ್ಲ. ನಿಸ್ವಾರ್ಥ ಸೇವೆ ಸಲ್ಲಿಸುತ್ತೇವೆ ಎಂದರು. ಕಾರ್ಖಾನೆ ನಿರ್ಮಾಣ ಇಂಡಿ-ಸಿಂದಗಿ ತಾಲೂಕಿನ ರೈತರ ಹಾಗೂ ಷೇರುದಾರರ ಕನಸಾಗಿತ್ತು. ಈ ಕಾರ್ಖಾನೆ ಸ್ಥಾಪನೆಗೆ ಹಿಂದಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಕಾರದಿಂದ ಸಾಕಷ್ಟು ಅನುದಾನ ನೀಡಿದ್ದಾರೆ. ಕೃಷ್ಣಾ ಭಾಗದ ದಡದಲ್ಲಿದ ಸಹಕಾರಿ ಸಂಸ್ಥೆಗಳಂತೆ ಇದು ಕೂಡಾ ಬೆಳವಣಿಗೆ ಹೊಂದಬೇಕಾಗಿದೆ. ಕೃಷ್ಣಾ ಭಾಗದಲ್ಲಿ ಪ್ರಾಮಾಣಿಕ ಜನರಿದ್ದರೆ ಭೀಮಾ ಭಾಗದ ಜನರು ಹೃದಯ ಶ್ರೀಮಂತಿಕೆಯವರಿದ್ದಾರೆ ಎಂದರು.

Advertisement

ಇಂದು ನಿಸರ್ಗ ರೈತರಿಗೆ ಕೈಕೊಡುತ್ತಿದೆ. ಅತಿವೃಷ್ಟಿ ,ಅನಾವೃಷ್ಟಿಯಿಂದ ರೈತರ ಬದುಕು ದುಸ್ತರವಾಗಿದೆ. ರೈತರ ಹಿತ ಕಾಪಾಡುವುದು ಸಹಕಾರಿ ರಂಗಗಳ ಕರ್ತವ್ಯ. ಆದರೆ ನಮ್ಮ ಕಾರ್ಖಾನೆ ಇನ್ನೂ ಆ ಮಟ್ಟಕ್ಕೆ ಬೆಳೆದಿಲ್ಲ. ಒಂದು ವರ್ಷ ಕ್ರಷಿಂಗ್‌ ಮಾಡಬೇಕಾದ ಕಬ್ಬನ್ನು ಕಬ್ಬು ಅಭಾವದಿಂದ ಎರಡು ವರ್ಷ ಕ್ರಷಿಂಗ್‌ ಮಾಡಿದ್ದೇವೆ. ಒಂದು ವರ್ಷಕ್ಕೆ ಕನಿಷ್ಠ 4.5 ಲಕ್ಷ ಟನ್‌ನಿಂದ 5.0 ಲಕ್ಷ ಟನ್‌ ಕ್ರಷಿಂಗ್‌ ಆದಾಗ ಮಾತ್ರ ಕಾರ್ಖಾನೆ ಲಾಭದಲ್ಲಿ ಬರುತ್ತದೆ ಎಂದರು.

ಸಹಕಾರಿ ಸಂಸ್ಥೆ ಗುಣಮಟದ್ದಾಗಿ ಬೆಳೆಯಬೇಕಾದೆ ರಾಜಕೀಯವಾಗಿ ದೂರ ಇರಬೇಕು. ಇಲ್ಲಿ ಯಾವುದೇ ರಾಜಕೀಯ, ಜಾತಿ ಬರಬಾರದು ಇಲ್ಲಿ ಕೇವಲ ರೈತ ಜಾತಿ, ಮನುಷ್ಯ ಜಾತಿ, ಅಭಿವೃದ್ದಿ ಒಂದೇ ಮೂಲ ಮಂತ್ರವಾಗಿರಬೇಕು ಎಂದು ಹೇಳಿದರು.

ಸಾಮಾನ್ಯ ಸಭೆಯಲ್ಲಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಅಶೋಕ ಮೋರಬ ಪ್ರಾಸ್ತಾವಿಕ ಮಾತನಾಡಿ, ಕಾರ್ಖಾನೆ 2017-18ರಲ್ಲಿ 12 ಕೋಟಿ ರೂ. ಹಾನಿಯಾದರೆ 2018-19 ರಲ್ಲಿ 17.90 ಕೋಟಿ ರೂ. ಹಾನಿಯಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ 2018-19ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರ, ಷೇರು, ಜಮಾ, ಖರ್ಚು, ಉತ್ಪಾದನೆ, ಖರೀದಿ, ಹಾನಿ ಹಾಗೂ 2018-19ನೇ ಸಾಲಿನ ಅನುಸರಣಾ ಷೇರು ಮೌಲ್ಯ ಹೆಚ್ಚಳ, ಇಥೀನಾಲ್ ಘಟಕ ಚಿಂತನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಕಾರ್ಖಾನೆ ಉಪಾಧ್ಯಕ್ಷ ವಿಶ್ವನಾಥ ಬಿರಾದಾರ, ನಿರ್ದೇಶಕರಾದ ಮಲ್ಲನಗೌಡ ಪಾಟೀಲ, ಬಸಣ್ಣ ಕೋರೆ, ಸಿದ್ದಣ್ಣ ಬಿರಾದಾರ, ಅಶೋಕ ಗಜಾಕೋಶ, ಜಟ್ಟೆಪ್ಪ ರವಳಿ, ದಾನಮ್ಮಗೌಡತಿ ಬಿರಾದಾರ, ಲಲಿತಾ ನಡಗೇರಿ, ಅರ್ಜುನ ನಾಯ್ಕೋಡಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಷೇರುದಾರರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next