Advertisement

ಬೀಜ-ಗೊಬ್ಬರ ಖರೀದಿ ಜೋರು

11:11 AM Jun 17, 2019 | Naveen |

ಉಮೇಶ ಬಳಬಟ್ಟಿ
ಇಂಡಿ:
ತಾಲೂಕಿನಾದ್ಯಂತ ಹತ್ತು ದಿನದ ಹಿಂದೆ ಕೆಲ ಭಾಗದಲ್ಲಿ ಸುರಿದ ಮಳೆಗೆ ಜಮೀನು ಸ್ವಲ್ಪಮಟ್ಟಿಗೆ ತೇವಾಂಶದಿಂದ ಉಂಟಾಗಿದ್ದರಿಂದ ಮುಂಗಾರು ಬಿತ್ತನೆ ಚುರುಕುಗೊಳಿಸಲು ರೈತರು ಕೃಷಿ ಇಲಾಖೆಯತ್ತ ಮುಖ ಮಾಡಿದ್ದು ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ.

Advertisement

ಜೂನ್‌ ತಿಂಗಳಲ್ಲಿ 102 ಎಂಎಂ ಮಳೆ ಬರಬೇಕಾಗಿತ್ತು. ಆದರೆ ಸದ್ಯ 61 ಎಂಎಂ ಮಳೆಯಾಗಿದೆ. ಹೀಗಾಗಿ ತೇವಾಂಶದಿಂದ ಕೂಡಿದ ಜಮೀನದಲ್ಲಿ ಕೃಷಿ ಚಟುವಟಿಕೆ ಚುರುಕುಗೊಳಿಸಿದ ರೈತರು ಬಿತ್ತನೆ ಬೀಜ, ಗೊಬ್ಬರ ಖರೀದಿಯಲ್ಲಿ ಮಗ್ನರಾಗಿದ್ದಾರೆ. ಈ ಬಾರಿ ಮುಂಗಾರಿನಲ್ಲಿ 1,05,400 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಕೃಷಿ ಇಲಾಖೆಯಿಂದ ಈಗಾಗಲೆ ಮುಂಗಾರು ಹಂಗಾಮಿಗೆ ತಾಲೂಕಿನ ವಿವಿಧ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ 287 ಕ್ವಿಂಟಲ್ ತೊಗರಿ, 25 ಕ್ವಿಂಟಲ್ ಹೆಸರು, ಸೂರ್ಯಕಾಂತಿ, ಹತ್ತಿ, ಮೆಕ್ಕೆಜೋಳ ಸೇರಿದಂತೆ 5 ಸಾವಿರ ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ.

ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯಿಂದ ಇಂಡಿ, ತಾಂಬಾ, ನಾದ, ಬಳ್ಳೊಳ್ಳಿ, ಬಳ್ಳೊಳ್ಳಿ-2, ಹೊರ್ತಿ, ಅಥರ್ಗಾ, ಲಚ್ಯಾಣ, ಚಡಚಣ ಗ್ರಾಮದಲ್ಲಿ ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ.

ರೈತರ ಅನುಕೂಲಕ್ಕಾಗಿ ತಾಲೂಕಿನ ವಿವಿಧ ರಸಗೊಬ್ಬರ ಅಂಗಡಿಗಳಲ್ಲಿ ಯೂರಿಯಾ 515 ಟನ್‌, ಡಿಎಪಿ 785,10:26:26- 510ಟನ್‌, ಸುಪರ್‌ ಪಾಸ್ಟೇಟ್ 230, ಪೋಟ್ಯಾಶ 210, 19:19:19-180 ಟನ್‌, 17:17:17-153 ಟನ್‌, 12:32:16-186 ಟನ್‌, 20:20:00-150 ಟನ್‌, 24:24:0-100 ಟನ್‌, 28:28:0-90 ಟನ್‌ ಸೇರಿದಂತೆ ಒಟ್ಟು 3300 ಟನ್‌ ರಸಗೊಬ್ಬರ ದಾಸ್ತಾನು ಮಾಡಲಾಗಿದೆ.

Advertisement

ಮುಂಗಾರು ಮಳೆ ತಂಪೆರದಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಬೀರಿದೆ. ಜಮೀನು ಹದ ಮಾಡುವ ಕಾಯಕದಲ್ಲಿ ತೊಡಗಿರುವ ರೈತರು ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬಂಪರ್‌ ಬೆಳೆ ತೆಗೆಯುವ ಹುಮಸ್ಸಿನಲ್ಲಿದ್ದಾರೆ.

ಬೀಜ ಖರೀದಿ ಹೇಗೆ?
ಈ ಬಾರಿ ಬೀಜ ತಗೆದುಕೊಳ್ಳಲು ಆನ್‌ಲೈನ್‌ ಅರ್ಜಿ ಸಲ್ಲಿಸಬೇಕಾಗಿದೆ. ಹೀಗಾಗಿ ರೈತರು ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಪಡೆಯಲು ತಮಗೆ ಕೃಷಿ ಇಲಾಖೆಯಿಂದ ನೀಡಿದ ರೈತರ ಕಾರ್ಡ್‌, ಉತಾರಿ, ಬ್ಯಾಂಕ್‌ ಪಾಸ್‌ ಪುಸ್ತಕ, ಒಂದು ಫೋಟೋ, ಖಾತೆ ಉತಾರಿ, ಆಧಾರ್‌ ಕಾರ್ಡ್‌ ಝರಾಕ್ಸ್‌, ಪಜಾ, ಪಪಂ ರೈತರು ಜಾತಿ ಪ್ರಮಾಣ ಪತ್ರ ನಿಗದಿತ ಅರ್ಜಿ ನಮೂನೆಗೆ ಲಗತ್ತಿಸಿ ಕೃಷಿ ಇಲಾಖೆಗೆ (ರೈತ ಸಂಪರ್ಕ ಕೇಂದ್ರ) ಸಲ್ಲಿಸಬೇಕು.

ಮುಂಗಾರು ಹಂಗಾಮಿನ ಬಿತ್ತನೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕಿನ 8 ಕಡೆಗಳಲ್ಲಿ ಹೆಚ್ಚುವರಿಯಾಗಿ ಬೀಜ ವಿತರಣೆ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ದೂರದ ತಾಲೂಕು ಕೇಂದ್ರಗಳಿಗೆ ಗ್ರಾಮಗಳಿಂದ ಬರುವುದು ಅಸಾಧ್ಯವಾಗುತ್ತಿದ್ದು, ರೈತರಿಗೆ ಗ್ರಾಮದ ಸಮೀಪದಲ್ಲಿಯೇ ಬೀಜ ದೊರೆಯುವಂತೆ ಮಾಡುವ ಉದ್ದೇಶದಿಂದ ನಾಲ್ಕೈದು ಗ್ರಾಮದ ಮಧ್ಯೆ ಒಂದು ಬೀಜ ವಿತರಣೆ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಈಗಾಗಲೆ ಮುಂಗಾರು ಬಿತ್ತನೆಯ ಬೀಜಗಳನ್ನು ಬಿತ್ತನೆಯ ಗುರಿಯ ಕ್ಷೇತ್ರಕ್ಕೆ ಅನುಗುಣವಾಗಿ ದಾಸ್ತಾನು ಮಾಡಲಾಗಿದೆ. ಬೀಜ ವಿತರಣೆಯಲ್ಲಿ ರೈತರಿಗೆ ತೊಂದರೆ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗೊಬ್ಬರ ದಾಸ್ತಾನು ಸಾಕಷ್ಟಿದೆ. ಬೀಜ, ಗೊಬ್ಬರದ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಮಹಾದೇವಪ್ಪ ಏವೂರ, ಸಹಾಯಕ ಕೃಷಿ ನಿರ್ದೇಶಕರು, ಇಂಡಿ

ತೇವಾಂಶಗೊಂಡು ಬಿತ್ತನೆಗೆ ಅನುಕೂಲವಾಗಿದೆ. ಆದರೆ ಸಾಲದಿಂದ ತತ್ತರಿಸುತ್ತಿರುವ ರೈತರಿಗೆ ಈ ಬಾರಿ ಮುಂಗಾರು ಬಿತ್ತನೆಗೆ ಕೃಷಿ ಇಲಾಖೆಯಿಂದ ಶೇ. 75 ಸಬ್ಸಿಡಿಯಲ್ಲಿ ಬೀಜ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ.
•ಸೈಫನ್‌ ಮುಲ್ಲಾ,
ರೇವಣಸಿದ್ದ ಕುಂಬಾರ ರೈತರು

Advertisement

Udayavani is now on Telegram. Click here to join our channel and stay updated with the latest news.

Next