ಇಂಡಿ: ತಮ್ಮ ಸ್ವಂತ ಜಮೀನಿನಲ್ಲಿನ ತೋಟಗಾರಿಕೆ ಬೆಳೆಗಳಿಗೆ ನೀರು ಹರಿಸದೆ ನೀರಿನ ತೊಂದರೆ ಇರುವ ಸಾಲೋಟಗಿ ಗ್ರಾಮಕ್ಕೆ ಜಮೀನಿನಲ್ಲಿರುವ ಬೋರವೆಲ್ ಹಾಗೂ ಹೊಂಡದಲ್ಲಿರುವ ನೀರು ನೀಡಿ ಓರ್ವ ರೈತ ಹಾಗೂ ರಾಜಕಾರಣಿ ಆಧುನಿಕ ಭಗೀರಥರಾಗಿದ್ದಾರೆ.
12 ಸಾವಿರ ಜನಸಂಖ್ಯೆ ಹೊಂದಿರುವ ಸಾಲೋಟಗಿ ಗ್ರಾಮಕ್ಕೆ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ತಾಲೂಕು ಭೀಕರ ಬರಕ್ಕೆ ತುತ್ತಾಗಿದೆ. ಕುಡಿಯುವ ನೀರಿಗಾಗಿ ತಾಲೂಕಿನಾದ್ಯಂತ ಹಾಹಾಕಾರ ಶುರುವಾಗಿದೆ. ತಾಲೂಕಿನ ಬಹುತೇಕ ಕೊಳವೆ ಬಾವಿ ಮತ್ತು ಸೇದು ಬಾವಿಗಳು ಬತ್ತಿ ಜನರಿಗೆ ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದಾರೆ.
ಇಂತಹ ಭೀಕರ ಬರಗಾಲದ ಸಂದರ್ಭದಲ್ಲಿ ಸಾವಿರ ಅಡಿ ಆಳ ಬೋರ್‌ವೆಲ್ ಕೊರೆದರೂ ಹನಿ ನೀರು ಸಿಗುತ್ತಿಲ್ಲ. ಇನ್ನು ತೋಟಗಾರಿಕೆ ಬೆಳೆೆಗೆ ಟ್ಯಾಂಕರ್ ನೀರು ಹಾಕಿಸಿ ಬೆಳೆ ಉಳಿಸುವಲ್ಲಿ ನಿತ್ಯ ಹರಸಾಹಸ ಪಡುತ್ತಿರುವ ವೇಳೆಯಲ್ಲಿಯೇ ನೇದಲಗಿ ಅವರು ತಮ್ಮ ಸ್ವಂತ 16 ಎಕರೆ ಜಮೀನಿನಲ್ಲಿ ಬೆಳೆದಿದ್ದ 7,000 ದಾಳಿಂಬೆ, 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 2,500 ಪೇರು, 15 ಎಕರೆ ಜಮೀನಿನಲ್ಲಿ ಬೆಳೆದ 1,200 ಲಿಂಬೆ. ಈ ಎಲ್ಲ ತೋಟಗಾರಿಕೆ ಸೇರಿ ವಾರ್ಷಿಕ 50 ಲಕ್ಷ ರೂ. ಆದಾಯ ಬರುತ್ತಿದ್ದ ಬೆಳೆಗಳು ಒಣಗಿದರು ಸಾರ್ವಜನಿಕರಿಗೆ ಕುಡಿಯಲು ನೀರು ನೀಡಬೇಕು ಎಂದು ಜಮೀನಿನಲ್ಲಿನ ಬೆಳೆಗಳನ್ನೆಲ್ಲ ಕಟಾವು ಮಾಡಿ ಇಡಿ ಗ್ರಾಮಕ್ಕೆ ನೀರು ಪೂರೈಸುವ ಕೆಲಸ ಮಾಡಿದ್ದಾರೆ.
ತೋಟದಲ್ಲಿ 5 ಎಕರೆ ಪೇರು ಬೆಳೆ ಇದ್ದು ಗ್ರಾಮಕ್ಕೆ ನೀರು ಒದಗಿಸುವುದರಿಂದ ಬೆಳೆಗೆ ನೀರಿನ ಕೊರತೆಯಾಗುತ್ತದೆ ಎಂದು ತಿಳಿದು ಪೇರು ಕಟಾವು ಮಾಡಿದ್ದಾರೆ. 1200 ಲಿಂಬೆ ಮತ್ತು 7000 ದಾಳಿಂಬೆ ರಕ್ಷಣೆಗೆ ಮಾತ್ರ ನೀರು ಒದಗಿಸುತ್ತಿದ್ದು ಇದರಿಂದ ಲಿಂಬೆ ಮಿಡಿಗಾಯಿ ಉದುರುತ್ತಿದೆ. ಒಟ್ಟಾರೆ ವಾರ್ಷಿಕ 50 ಲಕ್ಷ ರೂ. ಆದಾಯವಿರುವ ತೋಟಗಾರಿಕೆ ಬೆಳೆಗಳನ್ನು ಹಾಳು ಮಾಡಿಕೊಂಡು ಗ್ರಾಮಕ್ಕೆ ನೀರು ಪೂರೈಸಿ ಇತರರಿಗೆ ಮಾದರಿಯಾಗಿದ್ದಾರೆ.