ಗದಗ: ನಿಸರ್ಗದತ್ತವಾಗಿಯೇ ಮಕ್ಕಳಲ್ಲಿ ಸೃಜನಶೀಲತೆ ಅಡಗಿರುತ್ತದೆ. ಅದನ್ನು ಅಭಿವ್ಯಕ್ತಗೊಳಿಸಲು ಮುಕ್ತ ಅವಕಾಶ ಕಲ್ಪಿಸಬೇಕು. ತಮ್ಮ ಸುತ್ತಲಿನ ಜಗತ್ತನ್ನು ಕುತೂಹಲದಿಂದ ಗಮನಿಸುವ ಮೂಲಕ ಮಕ್ಕಳು ತಮಗಾದ ಅನುಭವಗಳನ್ನು ಬರಹದ ರೂಪದಲ್ಲಿ ದಾಖಲಿಸಿ, ಸೃಜನಶೀಲತೆಗೆ ಮತ್ತಷ್ಟು ಇಂಬುಕೊಡಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ನಾ. ಡಿಸೋಜಾ ಅಭಿಪ್ರಾಯಪಟ್ಟರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ, ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಕೆ.ಎಚ್. ಪಾಟೀಲ ಗ್ರಾಮ ಹಿತಾಭಿವೃದ್ಧಿ ಸಂಘ, ಹುಲಕೋಟಿ ರಾಜೇಶ್ವರಿ ವಿದ್ಯಾನಿಕೇತನ, ಹುಲಕೋಟಿ ಸಮಗ್ರ ಶಿಕ್ಷಣ-ಕರ್ನಾಟಕ, ಬಾಲಭವನ ಸೊಸೈಟಿ ಆಶ್ರಯದಲ್ಲಿ ಹುಲಕೋಟಿಯಲ್ಲಿ ಸಂಘಟಿಸಿದ್ದ ರಾಜ್ಯಮಟ್ಟದ ಮಕ್ಕಳ ಹಬ್ಬದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ತಾಳ್ಮೆ, ಸಹಕಾರ ಮನೋಭಾವವನ್ನು ರೂಢಿಸಿಕೊಂಡಾಗ ಉತ್ತಮ ವ್ಯಕ್ತಿತ್ವ ರೂಪಗೊಳ್ಳಲು ಸಾಧ್ಯ ಎಂದು ಹೇಳಿದರು.
ಮೈಸೂರಿನ ಸಿಎಫ್‌ಟಿಆರ್‌ಐ ವಿಜ್ಞಾನ ಸಂವಹನಕಾರ ಕೊಳ್ಳೆಗಾಲ ಶರ್ಮಾ ಮಾತನಾಡಿ, ಮಕ್ಕಳು ಪ್ರಶ್ನೆ ಕೇಳುವ ಮನೋಭಾವ ರೂಢಿಸಿಕೊಳ್ಳಬೇಕು. ಸಮಸ್ಯೆ ಗುರುತಿಸಿ, ಪರಿಹಾರ ಶೋಧಿಸಿ, ಪರಿಶೀಲಿಸಿ ಮತ್ತು ಪರಾಮರ್ಶಿಸುವ ಮೂಲಕ ನಮ್ಮೊಳಗಿರುವ ವಿಜ್ಞಾನಿಯನ್ನು ಜಾಗೃತಿಗೊಳಿಸಬೇಕು. ಪ್ರಾಯೋಗಿಕ ಅಥವಾ ತರ್ಕ ಬದ್ಧ ಯೋಚನೆಗಳಿಂದ ಪರಾಮರ್ಶೆ ನಡೆಯಬೇಕು. ವಿಜ್ಞಾನಿ ಎಂಬುದು ಉದ್ಯೋಗವಲ್ಲ ನಮ್ಮ ಮನಸ್ಥಿತಿ ಮತ್ತು ಆಲೋಚನೆಯಾಗಿದೆ ಎಂದು ತಿಳಿಸಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೂಡಿ ಬಾಳುವ, ಕೂಡಿ ಬದುಕುವ ಸಿದ್ಧಾಂತ ಬಹು ದೊಡ್ಡದು. ಸೌಹಾರ್ದತೆ, ಒಗ್ಗಟ್ಟು, ಜಾತ್ಯತೀತ ಮನೋಭಾವದ ಮೂಲಕ ಹೊಸ ಭಾರತವನ್ನು ಕಟ್ಟುವ ಕಾರ್ಯ ನಡೆಯಬೇಕು. ಈ ದಿಸೆಯಲ್ಲಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಶಾಲೆ, ಮನೆ, ಮತ್ತು ಸಮಾಜದಿಂದ ದೊರೆಯಬೇಕು ಎಂದು ಹೇಳಿದರು.
ಜೆ.ಕೆ. ಜಮಾದಾರ ಮಾತನಾಡಿ, ಚಾರಿತ್ರ್ಯ, ಬದ್ಧತೆ, ನಂಬಿಕೆ, ಸೌಜನ್ಯ, ಧೈರ್ಯ ಈ ಗುಣಗಳು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತವೆ ಎಂದರು. ಬಾಲವಿಕಾಸ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿ, ಮಕ್ಕಳ ಹಬ್ಬ ಮಕ್ಕಳಲ್ಲಿ ಸಂತಸದ ಕಲಿಕೆಯನ್ನು ಪರಿಚಯಿಸುವುದರ ಜೊತೆಗೆ ಸಹೋದರತ್ವ, ಪರಸ್ಪರ ಪ್ರೀತಿ, ತಿಳಿವಳಿಕೆಯನ್ನು ಉಂಟುಮಾಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕವಿ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶಶಿಕಲಾ ಬಳ್ಳೊಳ್ಳಿ, ಅರ್ಚನಾ ಜೈನ್, ಎಚ್.ಬಿ. ಮೇಟಿ ಶಿಬಿರದ ಕುರಿತು ಮಾತನಾಡಿದರು. ನಿವೃತ್ತ ಉಪನಿರ್ದೇಶಕ ಎ.ಎನ್. ನಾಗರಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡಿ, ಎಸ್.ಎಸ್. ಕೆಳದಿಮಠ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ, ಪ್ರಾಚಾರ್ಯ ಮಂಗಳಾ ಬಿ.ಆರ್. ಆಡಳಿತಾಧಿಕಾರಿ ವೈ.ಎನ್. ಶೆಟ್ಟಿ, ವಜ್ರಮುನಿ ಎಸ್., ರೇಣುಕಾ ಗುಡಿಮನಿ, ಟಿ.ಎ. ಪ್ರಶಾಂತಬಾಬು, ಶಂಕ್ರಣ್ಣ ಸಂಕಣ್ಣವರ, ಎಸ್.ಎಸ್. ಹಿರೇಮಠ ಇದ್ದರು. ಡಿ.ಎಸ್. ಬಾಪುರಿ ಸ್ವಾಗತಿಸಿದರು. ಡಾ| ನಿಂಗು ಸೊಲಗಿ ನಿರೂಪಿಸಿದರು. ವಿವೇಕಾನಂದಗೌಡ ಪಾಟೀಲ ವಂದಿಸಿದರು.