ಬೆಂಗಳೂರು: ನಗರಕ್ಕೆ ಹೊಂದಿಕೊಂಡಿರುವ ಕನಕಪುರ ರಸ್ತೆಯ ರೋರಿಚ್ ಮತ್ತು ದೇವಿಕಾರಾಣಿ ರೋರಿಚ್ ಎಸ್ಟೇಟ್‌ನ ಅರಣ್ಯ ಪ್ರದೇಶದಲ್ಲಿ ವಿನಾಶದಂಚಿನಲ್ಲಿರುವ ನೀರುನಾಯಿ ಪತ್ತೆಯಾಗಿದೆ!
ನೇಚರ್ ಕನ್‌ಸರ್ವೇಶನ್ ಫೌಂಡೇಶನ್ ಸಂಸ್ಥೆಯು ಚಿರತೆ ಸಂಶೋಧನೆಗಾಗಿ ಈ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ನೀರುನಾಯಿ ಪತ್ತೆಯಾಗಿದೆ. ವಡೇರಹಳ್ಳಿ ಕೆರೆಯಿಂದ ಸುಮಾರು 700 ಮೀಟರ್ ದೂರದಲ್ಲಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ನೀರುನಾಯಿಯ ಚಿತ್ರ ಸೆರೆಯಾಗಿದೆ.
ರೋರಿಚ್ ಎಸ್ಟೇಟ್, ಬಿ.ಎಂ.ಕಾವಲು ಮೀಸಲು ಅರಣ್ಯ ಪ್ರದೇಶವು ಸುಮಾರು 2000 ಎಕರೆ ಪ್ರದೇಶದಲ್ಲಿ ವಿಸ್ತರಿಸಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೂ ಸಂಪರ್ಕ ಹೊಂದಿದೆ. ಫೌಂಡೇಶನ್ ಅಧ್ಯಕ್ಷ ಸಂಜಯ್ ಗುಬ್ಬಿ ಮತ್ತು ತಂಡ ಚಿರತೆ ಪತ್ತೆಗಾಗಿ ಅಳಡಿಸಿದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ನೀರುನಾಯಿ ಪತ್ತೆಯಾಗಿದೆ.
ನಗರ ವ್ಯಾಪ್ತಿಯಲ್ಲಿ ನೀರುನಾಯಿ ಪತ್ತೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಭಾಜಪೆ, “ದೇಶದ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ನೀರುನಾಯಿ ಕಂಡುಬಂದಿರುವುದು ಸಂತಸ ತಂದಿದೆ. ಈ ಭಾಗದಲ್ಲಿ ವನ್ಯಜೀವಿಗಳಿರುವ ಬಗ್ಗೆ ಮಾಹಿತಿ ಇತ್ತು. ಆದರೆ ಅಪರೂಪದ ಪ್ರಾಣಿ ಪತ್ತೆಯಾಗಿರುವುದು ವನ್ಯಸಂಪತ್ತಿನ ವೈವಿಧ್ಯವನ್ನು ತೋರಿಸುತ್ತದೆ’ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಜಯ್ ಗುಬ್ಬಿ, “ನಾವು ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಒಂದು ನೀರುನಾಯಿಯಷ್ಟೇ ಪತ್ತೆಯಾಗಿದೆ. ಇದು ಸಂಘಜೀವಿಯಾಗಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರಾಣಿಗಳಿರುವ ಸಾಧ್ಯತೆ ಹೆಚ್ಚಾಗಿದೆ’ ಎಂದು ತಿಳಿಸಿದರು.