ಬೀಳಗಿ: ತಾಲೂಕಿನ ಬಾಡಗಂಡಿ ಗ್ರಾಮದ ಹೊರವಲಯದಲ್ಲಿನ ಶತಮಾನಗಳ ಇತಿಹಾಸಕ್ಕೆ ಸಾಕ್ಷಿಯಾಗಿರುವ ಹೈದರ್‌ಖಾನ್ ಬಾವಿ ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಳಿವಿನಂಚಿಗೆ ತಲುಪಿದೆ.
ಗ್ರಾಮಸ್ಥರ ಹಿರೇಬಾವಿ: ಬಾಡಗಂಡಿ ಗ್ರಾಮಸ್ಥರು ಹಿರೇಬಾವಿ ಎಂದು ಕರೆಯುವ ಹೈದರ್‌ಖಾನ್ ಬಾವಿ ಶತಮಾನಗಳ ಇತಿಹಾಸ ಹೊಂದಿದೆ. ಸುಮಾರು 16 ನೇ ಶತಮಾನದ ಕೊನೆಯ ಕಾಲಘಟ್ಟದಲ್ಲಿ ಅಂದಿನ ಬಿಜಾಪುರದ ಎರಡನೇ ಇಬ್ರಾಹಿಂ ಆದಿಲ್‌ಶಾಹಿ ಆಳ್ವಿಕೆ ಅವಧಿಯಲ್ಲಿ ಇಲ್ಲಿನ ಹಸನ್‌ಡೋಂಗ್ರಿ ಸಾಹೇಬ ದರ್ಗಾ ಭಕ್ತರಿಗೆ ಕುಡಿವ ನೀರು ಸೌಲಭ್ಯಕ್ಕೆ ಮತ್ತು ದನಕರುಗಳಿಗೆ ನೀರಿಗೆ ಉಪಯೋಗವಾಗಲೆನ್ನುವ ಆಶಯದಿಂದ ಹೈದರ್ ಖಾನ್ ನಿರ್ಮಿಸಿದ ಬಾವಿಯೇ ಇಂದು ಹೈದರ್ ಖಾನ್ ಬಾವಿಯೆಂದು ಖ್ಯಾತಿಯಾಗಿದೆ.
ಗಚ್ಚು ಗಾರೆಯಿಂದ ಭದ್ರ: ಸುಮಾರು 10 ಸಾವಿರ ಚದರ ಅಡಿ ವಿಶಾಲ ಜಾಗದಲ್ಲಿ ಆವರಿಸಿದ ಬಾವಿಯು, ಗುಡ್ಡದ ಕೆಂಪುಕಲ್ಲು, ಗಚ್ಚು ಗಾರೆಯಿಂದ ನಿರ್ಮಿತವಾಗಿ ಭದ್ರವಾಗಿದೆ. ಆಳವಾದ ಬಾವಿಯ ತಳದವರೆಗೂ ಗಟ್ಟಿಯಾದ ನೂರಾರು ಮೆಟ್ಟಿಲುಗಳಿವೆ. ಹಲವು ಕಮಾನು ಹೊಂದಿದ ಬಾವಿಯ ಮೂರನೇ ಕಮಾನಿನಲ್ಲಿ ಇತಿಹಾಸ ಸಾರುವ ಶಿಲಾ ಶಾಸನವಿದೆ.
ಇಂತಹ ಐತಿಹಾಸಿಕ, ಇತಿಹಾಸ ಸಾರುವ ಬಾವಿ ಇದೀಗ ತನ್ನ ಗತವೈಭವ ಕಳೆದುಕೊಂಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ನಿರ್ಲಕ್ಷ್ಯಕ್ಕೊಳಗಾಗಿ ಬಾವಿ ಸುತ್ತಲೂ ಮುಳ್ಳುಗಂಟಿಗಳು ಬೆಳೆದಿವೆ. ಅದೆಷ್ಟೋ ದಶಕಗಳಿಂದ ಬಾವಿ ಹೂಳು ತೆಗೆಯದೇ ಮಲೀನ ನೀರು ತುಂಬಿದೆ. ವಿಶೇಷವೆಂದರೆ ಯಾವತ್ತೂ ಈ ಬಾವಿ ಬತ್ತಿದ ಉದಾಹರಣೆಯಿಲ್ಲ.
ಬೇಕಿದೆ ಇಚ್ಛಾಶಕ್ತಿ: ಸರಿಸುಮಾರು ಐದು ಶತಮಾನಗಳ ಇತಿಹಾಸ ಹೊಂದಿರುವ ಸುಂದರ ಬಾವಿ ಯಾರದ್ದೋ ಪಾಲಾಗುವ ಅಪಾಯಕ್ಕೂ ಸಿಲುಕಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ. ಐತಿಹಾಸಿಕ ಹಿನ್ನೆಲೆ, ದಾಖಲೆ ಹೊಂದಿರುವ ಬಾವಿಯ ಹೂಳು ತೆಗೆದು, ಸ್ವಚ್ಛಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ದೊರಕುವಂತೆ ಆಸಕ್ತಿವಹಿಸಬೇಕೆನ್ನುವುದು ಪ್ರಜ್ಞಾವಂತರ ಆಶಯ.
ರವೀಂದ್ರ ಕಣವಿ