ಬೆಂಗಳೂರು: ಅಳಿವಿನಂಚಿಲ್ಲಿರುವ ಕಲೆಗಳನ್ನು ಉಳಿಸಲು ಸರ್ಕಾರ ಪ್ರಯತ್ನಿಸಬೇಕು ಎಂದು ನಾಡೋಜ ಬೆಳಗಲ್ಲು ವೀರಣ್ಣ ಹೇಳಿದರು. ಕರ್ನಾಟಕ ಜಾನಪದ ಪರಿಷತ್ತಿನಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಯಕ್ಷಗಾನ ಹಾಗೂ ಬಯಲಾಟ ಎರಡು ವಿಭಿನ್ನ ಪ್ರಕಾರದ ಕಲೆಗಳಾಗಿವೆ.
ರಾಜಕೀಯ, ಚಿಂತಕರು, ಸಾಂಸ್ಕೃತಿಕ ನಾಯಕರಿಂದ ಯಕ್ಷಗಾನಕ್ಕೆ ಹೆಚ್ಚಿನ ಪೋಷಣೆ ದೊರೆತು ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಿತು. ಈ ಪೋಷಣೆ ಬಯಲಾಟಕ್ಕೆ ದೊರೆಯಲಿಲ್ಲ. ಇದರಿಂದಾಗಿ 17 ಜಿಲ್ಲೆಗಳಲ್ಲಿರುವ ಬಯಲಾಟದ ಕಲಾಪ್ರಕಾರಗಳು ಅಳಿವಿನಂಚನ್ನು ತಲುಪಿವೆ.
ಶ್ರೀಪಾರಿಜಾತ, ದೊಡ್ಡಾಟ, ಸಣ್ಣಾಟ, ಸೂತ್ರಧಾರಿ, ತೊಗಲುಗೊಂಬೆಯಾಟಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಗ್ರಾಮೀಣ ಭಾಗದ ಜನರನ್ನು ರಂಜಿಸುತ್ತಿದ್ದ ಗ್ರಾಮೀಣ ಕಲೆಗಳು ಕಣ್ಮರೆಯಾಗುತ್ತಿವೆ. ಕಲೆ ಮತ್ತು ಕಲಾವಿದರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಹಲವು ಜನಪದ ಕಲಾವಿದರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಿರಿಯ ಕಲಾವಿದರು ತಮ್ಮ ಪರಂಪರಾಗತವಾದ ಜಾನಪದ ಕಲೆಯನ್ನು ಬೆಳೆಸಲು ಬದುಕನ್ನೇ ಮೀಸಲಾಗಿಟ್ಟಿದ್ದಾರೆ. ಅಂತಹ ಕಲಾವಿದರನ್ನು ಹುಡುಕಿ ಅವರಿಗೆ ಮಾಶಾಸನ ನೀಡಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಉಜ್ವಲವಾಗಿ ಬೆಳೆದಿರುವ ವಿಜ್ಞಾನ ಮತ್ತು ನಾಗರಿಕತೆಯಿಂದಾಗಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಒಳಿತನ್ನು ಗುರುತಿಸುವ ಅಂತರ್ ದೃಷ್ಟಿಯನ್ನು ನಾಗರಿಕತೆ ನೀಡಬೇಕಿತ್ತು. ಆದರೆ ಇಂದು ಅದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲ, ಆದಿಚುಂಚನಗಿರಿ ವಿಜಯನಗರದ ಶಾಖಾಮಠದ ಶೀಸೌಮ್ಯನಾಥ ಸ್ವಾಮೀಜಿ, ಕರ್ನಾಟಕ ಜಾನಪದ ಪರಿಷತ್ತಿನ ಟ್ರಸ್ಟಿ ಆದಿತ್ಯ ನಂಜರಾಜ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎಂ ಹೆಗಡೆ ಮತ್ತಿತರರು ಹಾಜರಿದ್ದರು.