ಬಾಗೇಪಲ್ಲಿ: ಬಾಲ್ಯ ವಿವಾಹಗಳಿಗೆ ಯಾರೊಬ್ಬರೂ ಪ್ರೋತ್ಸಾಹ ನೀಡಬಾರದು. ಒಂದು ವೇಳೆ ಪ್ರೋತ್ಸಾಹಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತೀರಾ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೌಝೀಯಾ ತರುನ್ನಮ್ ತಿಳಿಸಿದರು.
ತಾಲೂಕಿನ ಗೂಳೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಕೋಟೆ ಫೌಂಡೇಶನ್, ಯಂಗ್ ಲೈವ್ ಫೌಂಡೇಶನ್, ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಇವರ ಆಶ್ರಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ತರಗತಿಗಳ ಉದ್ಘಾಟನೆ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಮುಖ್ಯ: ಜಿಲ್ಲೆಯಲ್ಲಿ ಬಾಗೇಪಲ್ಲಿ ತಾಲೂಕಿನಲ್ಲೇ ಹೆಚ್ಚಾಗಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಅವುಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯತೆ ಇದೆ. ಕಡಿವಾಣ ಹಾಕಬೇಕಾದರೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ ತಕ್ಷಣ ಮಾಹಿತಿ ನೀಡಬೇಕು. ಅನಕ್ಷರಸ್ಥರ ಸಂಖ್ಯೆ ಎಲ್ಲಿ ಹೆಚ್ಚಾಗಿರುತ್ತದೆಯೋ ಅಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತವೆ ಎಂದರು.
ಎನ್‌ಜಿಒ ಸಹಭಾಗಿ: ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಂಗ್ ಲೈವ್ಸ್ ಫೌಂಡೇಶನ್ ಸಂಸ್ಥೆಯವರು ಸ್ಮಾರ್ಟ್ ತರಗತಿಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಜೊತೆಗೆ ಎನ್‌ಜಿಒ ದಂತಹ ಖಾಸಗಿ ಸಂಸ್ಥೆಯು ಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯು 10ನೇ ತರಗತಿಯ ಫಲಿತಾಂಶ ಮೇಲ್ದಜೇಗೆ ಏರಲು ಶಿಕ್ಷಕರು ಮಕ್ಕಳಿಗೆ ಅರ್ಥವಾಗುವ ಹಾಗೆ ಪಾಠ ಮಾಡಬೇಕು ಎಂದರು.
ಸ್ಮಾರ್ಟ್ ತರಗತಿ: ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಆರ್.ವೆಂಕಟರಾಮಪ್ಪ ಮಾತನಾಡಿ, ಬಾಗೇಪಲ್ಲಿಯಲ್ಲಿ ಡಾ.ಹೆಚ್.ಎನ್.ರವರು ನ್ಯಾಷನಲ್ ಪದವಿ ಕಾಲೇಜು ಸ್ಥಾಪನೆ ಮಾಡದಿದ್ದರೆ ನಮ್ಮ ಭಾಗದಲ್ಲಿ ಶಿಕ್ಷಣ ಪಡೆಯುವುದು ಅಸಾಧ್ಯವೇ ಆಗುತ್ತಿತ್ತು. ವೈಜ್ಞಾನಿಕ ಮನೋಭಾವನೆ ಬೆಳೆದಂತೆಲ್ಲಾ ನಾವು ಸಹಾ ಬದಲಾಗಬೇಕಾಗಿದೆ. ಮೊದಲು ಶ್ರೀಮಂತ ಮಕ್ಕಳು ಮಾತ್ರ ಸ್ಮಾರ್ಟ್ ತರಗತಿಗಳಲ್ಲಿ ಭಾಗವಹಿಸುತ್ತಿದ್ದರು.
ಆದರೆ ಖಾಸಗಿ ಸಂಸ್ಥೆಯವರ ಸಹಕಾರದಿಂದ ಸರ್ಕಾರಿ ಶಾಲೆಯ ಬಡ ಮಕ್ಕಳು ಸಹ ಸ್ಮಾರ್ಟ್ ತರಗತಿಗಳಲ್ಲಿ ಭಾಗವಹಿಸಬಹುದು ಎಂದರು. ಜಿಪಂ ಸಿಇಒ ಫೌಝೀಯಾ ತರುನ್ನುಮ್ 10ನೇ ತರಗತಿಗೆ ಭೇಟಿ ಮಕ್ಕಳಿಗೆ ಪ್ರಶ್ನೆ ಕೇಳಿದರು. ಬೆಂಗಳೂರು ಕೋಟೆ ಫೌಂಡೇಷನ್ ನಿರ್ದೇಶಕ ಟಿ.ವಿ.ಶ್ರೀಧರ್, ಗ್ರಾಪಂ ಅಧ್ಯಕ್ಷ ಮುನ್ನಾಖಾನ್, ಶಿಕ್ಷಣ ಇಲಾಖೆಯ ಇಸಿಒ ಕೆ.ಬಿ.ಆಂಜನೇಯರೆಡ್ಡಿ, ಪಿಎಸ್‌ಐ ಪಿ.ಎಂ.ನವೀನ್,
ತಾಲೂಕು ವೈದ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ, ಗೂಳೂರು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಂಗನಾಥ್, ಉಪನ್ಯಾಸಕ ವೆಂಕಟಶಿವಾರೆಡ್ಡಿ, ಪಿಡಿಒ ಭಾಗ್ಯಲಕ್ಷ್ಮಿ, ಶಿಕ್ಷಕರಾದ ಟಿ.ಎಸ್.ವೇಣುಗೋಪಾಲ್‌ರಾವ್, ಅಶ್ವತ್ಥಪ್ಪ, ಎಲ್.ಸುಬ್ರಹ್ಮಣ್ಯಂ, ಸತ್ಯನಾರಾಯಣ, ರಂಗನಾಥ್, ವಕೀಲ ರಮೇಶ್, ನಿವೃತ್ತ ಮುಖ್ಯ ಶಿಕ್ಷಕ ರಾಮಪ್ಪ, ಸರೋಜಮ್ಮ, ಯಂಗ್ ಲೈವ್ ಫೌಂಡೇಷನ್ ಅಧಿಕಾರಿಗಳಾದ ನರಸಿಂಹಮೂರ್ತಿ, ಹರೀಶ್ ಡಾ.ಮನೋಜ್ ಇದ್ದರು.