Advertisement

ಕಾಂಗ್ರೆಸ್‌ನ ಶವ ಪೆಟ್ಟಿಗೆಗೆ ಕೊನೆ ಮೊಳೆ

02:49 PM Mar 29, 2018 | |

ಬೀದರ: ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣದಲ್ಲಿ ಕರ್ನಾಟಕದ ವಿಧಾನಸಭೆ ಚುನಾವಣೆ ಪಾತ್ರ ಮಹತ್ವದ್ದಾಗಿದೆ. ಈ ಫಲಿತಾಂಶವು ಕಾಂಗ್ರೆಸ್‌ನ ಶವ ಪೆಟ್ಟಿಗೆಗೆ ಕೊನೆ ಮೊಳೆಯಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್‌ ಚೌಗ್‌ ಭವಿಷ್ಯ ನುಡಿದರು.

Advertisement

ನಗರದಲ್ಲಿ ಬುಧವಾರ ನಡೆದ ಬಿಜೆಪಿ ಜಿಲ್ಲಾ ಹಾಗೂ ಮಂಡಲ್‌ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬರೀ ಚುನಾವಣೆ ತಯಾರಿ ಮಾಡಿಕೊಳ್ಳಬೇಡಿ. ವಿಜಯೋತ್ಸವದ ಸಿದ್ಧತೆಯೂ ಜೊತೆಯಲ್ಲಿಯೇ ನಡೆಯಲಿ. ಅಭ್ಯರ್ಥಿ ಯಾರಾದರೂ ಆಗಲಿ. ಕಮಲವನ್ನು ಗೆಲ್ಲಿಸುವುದೊಂದೇ ಮುಖಂಡರ, ಕಾರ್ಯಕರ್ತರ ಸಂಕಲ್ಪವಾಗಬೇಕು. ಸಂಕಲ್ಪ ಬಲವಾಗಿದ್ದಲ್ಲಿ ತಾನಾಗಿ ಸಿದ್ಧಿಸುತ್ತದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು ಕೇಂದ್ರದಲ್ಲಿ ಯುಪಿಎ ನೇತೃತ್ವದ ಕಾಂಗ್ರೆಸ್‌ ಆಡಳಿತ ಇದ್ದಾಗ ದೇಶ ದುರ್ಬಲವಾಗಿತ್ತು.

ಭ್ರಷ್ಟಾಚಾರ, ಅವ್ಯವಹಾರ, ಅಕ್ರಮಗಳು ಮಿತಿ ಮೀರಿದ್ದವು. ದೇಶದ ಜನರಲ್ಲಿ ಮುಂದೇನು ಎಂಬ ನಿರಾಶೆ ಭಾವ ನೆಲೆಗೊಂಡಿತ್ತು. ಈಗ ಕರ್ನಾಟಕ ಜನರಲ್ಲೂ ಇದೇ ತೆರನಾದ ಭಾವನೆ ಮನೆ ಮಾಡಿಕೊಂಡಿದೆ. ಮೇ 12ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ರಾಜ್ಯದ ಜನರು ನಿರಾಶೆಯಿಂದ ಮುಕ್ತಗೊಳಿಸಬೇಕು.

ವಿಧಾನಸಭೆ ಚುನಾವಣೆ ಬರೀ ರಾಜ್ಯಕ್ಕೆ ಸಂಬಂಧಿಸಿಲ್ಲ. ಅದು ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ದಿಕ್ಸೂಚಿಯೂ ಆಗಲಿದೆ. ಜಿಲ್ಲೆಯ ಎಲ್ಲ ಆರೂ ಕ್ಷೇತ್ರಗಳಲ್ಲಿ ಗೆಲ್ಲುವ ಸಂಕಲ್ಪದೊಂದಿಗೆ ಕೆಲಸ ಮಾಡಿ. ಒಂದೂ ಕ್ಷೇತ್ರದಲ್ಲಿ ಹಿಂದೆ ಬೀಳದಂತೆ ಎಚ್ಚರ ವಹಿಸಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಅಧಿಕಾರಕ್ಕೆ ಬರುವ ಏಕೈಕ ಉದ್ದೇಶದಿಂದ ಕೆಲವರು ಜಾತಿ- ಮತಗಳ ಹೆಸರಿನಲ್ಲಿ ಸಮಾಜ, ಜನರ ಮನಸುಗಳನ್ನು ಒಡೆಯಲು ಯತ್ನಿಸುತ್ತಿದ್ದಾರೆ. ನಾವು ಧರ್ಮವನ್ನು ಒಡೆಯಲು ಬಿಡಲಾರೇವು. ಸಂಸ್ಕೃತಿ ಮೂಲಕ, ಭಾತೃತ್ವದ ಮೂಲಕ ಪ್ರೀತಿಯಿಂದ ಜನರ ಮನಸುಗಳನ್ನು ಜೋಡಿಸುತ್ತೇವೆ. ಭಾರತದಿಂದ ಎಂದೂ ಬಡತನ ನಿರ್ಮೂಲನೆಯಾಗದು. ದೇಶದಲ್ಲಿ ಸ್ವತ್ಛತೆ ನೆಲೆಗೊಳ್ಳದು ಎಂದೆಲ್ಲ ಹೇಳಲಾಗುತಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಸ್ಥಿತಿ ಬದಲಾಗಿದೆ ಎಂದು ಹೇಳಿದರು.

Advertisement

ಪಕ್ಷದ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರಭು ಚಹ್ವಾಣ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರ, ಪ್ರಮುಖರಾದ ಡಿಕೆ ಸಿದ್ರಾಮ, ಬಾಬು ವಾಲಿ, ಬಾಬುರಾವ ಕಾರವಾರಿ, ಬಾಬುರಾವ ಮದಕಟ್ಟಿ, ಸೋಮನಾಥ ಪಾಟೀಲ, ಸೂರ್ಯಕಾಂತ ನಾಗಮಾರಪಳ್ಳಿ ಇದ್ದರು. 

ರಾಹುಲ್‌ಗೆ ಸೋಲಿನ ಕೊಡುಗೆ ನೀಡಿ’
ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ನಂತರ ಉತ್ತರದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಪರಾಭವಗೊಂಡಿದೆ. ಈಗ ಪ್ರವಾಸ ಮಾಡುತ್ತಿರುವ ಕರ್ನಾಟಕದಲ್ಲೂ ಕಾಂಗ್ರೆಸ್‌ ಅನ್ನು ಸೋಲಿಸುವ ಮೂಲಕ ರಾಹುಲ್‌ಗೆ ಕೊಡುಗೆ ನೀಡಿ. ಲೊಕಸಭೆಯಲ್ಲಿ ಅಹಂಕಾರದಿಂದ ಮಾತನಾಡುವ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪಾಠ ಕಲಿಸಬೇಕಾದ ಅಗತ್ಯ ಇದೆ.
  ತರುಣ ಚೌಗ್‌, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next