Advertisement

ಲಾರಿ ಮುಷ್ಕರ ಅಂತ್ಯ

03:45 AM Apr 09, 2017 | Team Udayavani |

ಬೆಂಗಳೂರು: ಸರಕು ಸಾಗಣೆ ವಾಹನಗಳ ಮೂರನೇ ವ್ಯಕ್ತಿ ವಿಮಾ ಶುಲ್ಕವನ್ನು ಶೇ.50ರಿಂದ ಶೇ.27ಕ್ಕೆ ಇಳಿಕೆ
ಮಾಡಲು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಒಪ್ಪಿದ ಹಿನ್ನೆಲೆಯಲ್ಲಿ 10 ದಿನಗಳಿಂದ ರಾಜ್ಯಾದ್ಯಂತ ಮುಂದುವರಿದಿದ್ದ ಸರಕು, ಸಾಗಣೆದಾರರ ಮುಷ್ಕರ ಶನಿವಾರ ಅಂತ್ಯಗೊಂಡಿದೆ.

Advertisement

ಹೈದರಾಬಾದ್‌ನಲ್ಲಿ ಶನಿವಾರ ಐಆರ್‌ಡಿಎ ನಡೆಸಿದ ಸಭೆಯಲ್ಲಿ ವಿಮಾ ಶುಲ್ಕವನ್ನು ಇಳಿಕೆ ಮಾಡಲು ಪ್ರಾಧಿಕಾರ ಒಪ್ಪಿದ್ದರಿಂದ ಸರಕುಸಾಗಣೆದಾರರ ಪ್ರಮುಖ ಬೇಡಿಕೆಗೆ ಕೇಂದ್ರ ಸರ್ಕಾರ ಮಣಿದಂತಾಗಿದೆ. ಜತೆಗೆ ಇನ್ನೂ ಕೆಲ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿದ್ದು, ರಾಜ್ಯ ಸರ್ಕಾರವೂ ತನ್ನ ವ್ಯಾಪ್ತಿಗೆ ಸಂಬಂಧಪಟ್ಟ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಮೋಟಾರ್‌ ಸಾಗಣೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಆರ್‌.ಷಣ್ಮುಖಪ್ಪ ಮುಷ್ಕರ ಹಿಂಪಡೆದಿರುವುದಾಗಿ ಶನಿವಾರ ಸಂಜೆ ಪ್ರಕಟಿಸಿದರು.

ಮುಷ್ಕರ ಅಂತ್ಯವಾದ ಸುದ್ದಿ ತಿಳಿಯುತ್ತಿದ್ದಂತೆ ಹೆದ್ದಾರಿ ಬಳಿ ಹಲವು ದಿನಗಳಿಂದ ಬೀಡುಬಿಟ್ಟಿದ್ದ ಲಾರಿಗಳು ರಸ್ತೆಗಿಳಿದವು. ಸರಕುಗಳನ್ನು ಸಂರಕ್ಷಿಸಿಕೊಳ್ಳುವ ಜತೆಗೆ ರಸ್ತೆಬದಿಯಲ್ಲೇ ಕೆಲ ದಿನ ಕಳೆದಿದ್ದವರು ಮುಷ್ಕರ ಅಂತ್ಯವಾಗುತ್ತಿದ್ದಂತೆ ತಮ್ಮ ನಿರ್ದಿಷ್ಟ ಸ್ಥಳದತ್ತ ಹೊರಟರು. ಆಹಾರ ಧಾನ್ಯ, ಬೇಳೆಕಾಳು, ತರಕಾರಿ, ಹಣ್ಣು ಇತರೆ ಸರಕುಗಳ ಪೂರೈಕೆಯೂ ಸಹಜ ಸ್ಥಿತಿಗೆ ಮರಳಾರಂಭಿಸಿತು. ಸಭೆ ಕುರಿತು ಮಾಹಿತಿ ನೀಡಿದ ಷಣ್ಮುಖಪ್ಪ, “ಐಆರ್‌
ಡಿಎ ಸದಸ್ಯ ಪಿ.ಜೆ. ಜೋಸೆಫ್, ಆಂಧ್ರ ಪ್ರದೇಶದ ಸಾರಿಗೆ ಆಯುಕ್ತರು ಸೇರಿದಂತೆ ಹಲವರು ಪಾಲ್ಗೊಂಡಿದ್ದ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಸರಕು ಸಾಗಣೆ ವಾಹನಗಳಿಗೆ ಮೂರನೇ ವ್ಯಕ್ತಿ ವಿಮಾ ಶುಲ್ಕಇಳಿಕೆ ಮಾಡಬೇಕೆಂಬುದು ಪ್ರಮುಖ ಬೇಡಿಕೆಯಾಗಿದ್ದು, ಈ ಕುರಿತು ಸುದೀರ್ಘ‌ ಚರ್ಚೆ ನಡೆಯಿತು.

ಕೊನೆಗೆ ವಿಮಾ ಶುಲ್ಕ ಮೊತ್ತದಲ್ಲಿ ಶೇ.23ರಷ್ಟು ಇಳಿಕೆ ಮಾಡಿ ಶೇ.27ರಷ್ಟು ಶುಲ್ಕ ವಿಧಿಸಲು ಪ್ರಾಧಿಕಾರ ಒಪ್ಪಿತು. ಇದರಿಂದ ವಿಮಾ ಸಂಸ್ಥೆಗಳಿಗೆ ಸುಮಾರು 16,000 ಕೋಟಿ ರೂ. ನಷ್ಟವಾಗಲಿದೆ ಎಂದು ಐಆರ್‌ಡಿಎ ತಿಳಿಸಿತು’ ಎಂದು ಹೇಳಿದರು. “ವಾಹನಗಳಿಗೆ ವಿಮಾ ಶುಲ್ಕವನ್ನು ಮನಬಂದಂತೆ ಏರಿಕೆ ಮಾಡುವುದನ್ನು ನಿಯಂತ್ರಿಸುವ ಸಲುವಾಗಿ
ಸಮಿತಿ ರಚಿಸಬೇಕೆಂಬ ಮನವಿಗೂ ಪ್ರಾಧಿಕಾರ ಒಪ್ಪಿತು. ಅದರಂತೆ ದಕ್ಷಿಣ ಭಾರತ ಮೋಟಾರ್‌ ಟ್ರಾನ್ಸ್‌ಪೊರ್ಟ್‌ ಅಸೋಸಿಯೇಷನ್‌ನ ಇಬ್ಬರು ಪ್ರತಿನಿಧಿಗಳು, ಅಖೀಲ ಭಾರತ ಮೋಟಾರ್‌ ಟ್ರಾನ್ಸ್‌ಪೊರ್ಟ್‌ ಕಾಂಗ್ರೆಸ್‌ನಿಂದ ಮೂವರು
ಪ್ರತಿನಿಧಿಗಳು ಹಾಗೂ ಐಆರ್‌ಡಿಎ ಮೂವರು ಪ್ರತಿನಿಧಿಗಳನ್ನು ಒಳಗೊಂಡ ಕಾಯಂ ಸಮಿತಿ ರಚಿಸುವುದಾಗಿ ಪ್ರಾಧಿಕಾರ ತಿಳಿಸಿದೆ’ ಎಂದು ಅವರು ಹೇಳಿದರು. 

“ನವದೆಹಲಿಯಲ್ಲಿ 10 ವರ್ಷ ಮೀರಿದ ಸರಕು ಸಾಗಣೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಈ ನಿರ್ಬಂಧ ತೆರವುಗೊಳಿಸುವುದಾಗಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭರವಸೆ ನೀಡಿದ್ದು, ಇದರಿಂದ 40 ಲಕ್ಷ ಸರಕು ಸಾಗಣೆ ವಾಹನಗಳಿಗೆ ಅನುಕೂಲವಾಗಲಿದೆ. ಒಟ್ಟಾರೆ ಪ್ರಮುಖ ಬೇಡಿಕೆಗಳಿಗೆ ಪ್ರಾಧಿಕಾರದಿಂದ ಸ್ಪಂದನೆ ಸಿಕ್ಕಿದಂತಾಗಿದೆ’ ಎಂದು ಹೇಳಿದರು. “ಇನ್ನೊಂದೆಡೆ ಕೇಂದ್ರ ಸರ್ಕಾರ ಸರಕು ಸಾಗಣೆ ವಾಹನಗಳಿಗೆ ಸಾಮರ್ಥಯ ದೃಢೀಕರಣ ಪತ್ರ (ಎಫ್.ಸಿ) ವಿತರಣೆ ಶುಲ್ಕವನ್ನು 200 ರೂ.ನಿಂದ 3000 ರೂ.ಗೆ ಏರಿಕೆ ಮಾಡಿತ್ತು. ಆದರೆ ಇದನ್ನು 300 ರೂ.ಗೆ ಇಳಿಕೆ
ಮಾಡಲು ಪ್ರಯತ್ನಿಸುವುದಾಗಿ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಹಾಗೆಯೇ ಅನ್ಯ ರಾಜ್ಯಗಳ ನೋಂದಣಿ ವಾಹನಗಳು ರಾಜ್ಯ ಪ್ರವೇಶಿಸಲು ವಿಧಿಸುವ ಶುಲ್ಕಕ್ಕೂ ವಿನಾಯ್ತಿಗೂ ನೀಡುವ ಬಗ್ಗೆ ಚರ್ಚಿಸುವುದಾಗಿ ಸಚಿವರು ತಿಳಿಸಿದ್ದು, ಏ.20ರಂದು ಸಭೆ ಆಯೋಜಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ವಿವರಿಸಿದರು.

Advertisement

ಹತ್ತಾರು ಸಾವಿರ ಕೋಟಿ ರೂ. ನಷ್ಟ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೇಡಿಕೆಗಳಿಗೆ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲಾಗಿದೆ. 10 ದಿನ ನಡೆದ ಮುಷ್ಕರದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗಿದ್ದು, ಒಟ್ಟಾರೆ ದಕ್ಷಿಣ ಭಾರತದ ವಹಿವಾಟಿನ ಮೇಲೆ ತೀವ್ರ ಹೊಡೆತಬಿದ್ದಿದ್ದು, ಸುಮಾರು 10,000 ಕೋಟಿ ರೂ. ಗಿಂತ ಹೆಚ್ಚು ನಷ್ಟ ಸಂಭವಿಸಿರಬಹುದು’ ಎಂದು
ಹೇಳಿದರು. ಮಾರ್ಚ್‌ 30ರ ಮಧ್ಯರಾತ್ರಿಯಿಂದ ಸರಕು ಸಾಗಣೆದಾರರು ಮುಷ್ಕರ ಆರಂಭಿಸಿದರು. ಬಳಿಕ ಐಆರ್‌ಡಿಎ ನಡೆಸಿದ ಎರಡೂ ಸಭೆ ವಿಫ‌ಲವಾಗಿದ್ದರಿಂದ ಹೋರಾಟ ಮುಂದುವರಿದಿತ್ತು. ಹಾಗಾಗಿ ಓಲಾ ಮತ್ತು ಉಬರ್‌ ಟ್ಯಾಕ್ಸಿ ಮಾಲೀಕರ ಸಂಘ ಕೂಡ ಶನಿವಾರದಿಂದ ಸೇವೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿತ್ತು. ಆದರೆ ಶನಿವಾರದ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಷ್ಕರ ಮುಕ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next