ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯಾಗಿರುವ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಶುಕ್ರವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮೂರೂ ಪಕ್ಷಗಳ ನಾಯಕರು ರಾಜಧಾನಿಯತ್ತ ಮುಖ ಮಾಡಿದ್ದಾರೆ.
ಕಳೆದ ಹತ್ತು ದಿನಗಳಿಂದ ಎರಡೂ ಕ್ಷೇತ್ರಗಳಲ್ಲಿ ಬಿಟ್ಟೂ ಬಿಡದೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದ ನಾಯಕರು ಬಹಿರಂಗ ಪ್ರಚಾರದ ಸಮಯ ಅಂತ್ಯವಾಗುತ್ತಿದ್ದಂತೆ ಕ್ಷೇತ್ರ ಬಿಟ್ಟು ನಿರ್ಗಮಿಸಿದರು. ಇದಕ್ಕೂ ಮೊದಲು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿ, ಮತದಾರರ ಒಲವು ಗಳಿಸುವ ಯತ್ನ ನಡೆಸಿದರು.
ವಿಶ್ರಾಂತಿಯತ್ತ ನಾಯಕರ ಚಿತ್ತ: ಎರಡೂ ಉಪ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ನಾಯಕರು ಶನಿವಾರ ಹಾಗೂ ಭಾನುವಾರ ವಿಶ್ರಾಂತಿಗೆ ಮೊರೆ ಹೋಗಲಿದ್ದು, ಆನಂತರ ಲೋಕಸಭಾ ಚುನಾವಣೆ ಫಲಿತಾಂಶದತ್ತ ಚಿತ್ತ ಹರಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಕೆಪಿಸಿಸಿ ಆಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್, ಬಂಡೆಪ್ಪ ಕಾಶಂಪೂರ್, ಹಿರಿಯ ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ, ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ನಾಯಕರು ಕ್ಷೇತ್ರ ಬಿಟ್ಟು ವಾಪಸ್ಸಾಗಿದ್ದಾರೆ.
ಕುತೂಹಲ: ಈ ಮಧ್ಯೆ, ಸೋಮವಾರದಿಂದ ಮೂರೂ ಪಕ್ಷಗಳು ತಮ್ಮ, ತಮ್ಮ ಪಕ್ಷಗಳ ಶಾಸಕರ ಮೇಲೆ ನಿಗಾ ವಹಿಸಲು ತೀರ್ಮಾನಿಸಿವೆ. ಭಾನುವಾರ ಕೊನೆಯ ಹಂತದ ಮತದಾನ ಮುಗಿದ ನಂತರ ಮತದಾನೋತ್ತರ ಸಮೀಕ್ಷೆಗಳು ಹೊರಬೀಳುತ್ತಿದ್ದಂತೆ ಒಂದಷ್ಟು ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇರುವುದರಿಂದ ಎಲ್ಲ ಪಕ್ಷಗಳಲ್ಲೂ ಶಾಸಕರ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಶಾಸಕಾಂಗ ಪಕ್ಷದ ಸಭೆಯನ್ನು ಮಂಗಳವಾರ ಹಾಗೂ ಬುಧವಾರ ಕರೆದಿದ್ದು, ಅಲ್ಲಿ ಮುಂದಿನ ಕಾರ್ಯತಂತ್ರ ರೂಪಿಸುವ ಸಾಧ್ಯತೆಯಿದೆ. ಜತೆಗೆ, ತಮ್ಮ ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ಅಥವಾ ಹೋಟೆಲ್‌ಗಳಿಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.