Advertisement
ಈ ವಿಧಿಯ ಇಲ್ಲದಿರುವಿಕೆಗೆ ಯತ್ನಿಸದೆ ಅನ್ಯ ವಿಧಿಯೇ ಇಲ್ಲವೇ? ಈ ಪ್ರಶ್ನೆಗೆ ಎರಡು ಉತ್ತರಗಳಿವೆ – ಒಂದನೆಯದು, ಭಾರತದ ಒಕ್ಕೂಟ ವ್ಯವಸ್ಥೆಯ ಉಳಿದ 28 ರಾಜ್ಯಗಳಂತೆ ಜಮ್ಮು-ಕಾಶ್ಮೀರವೂ ಕೂಡ ಸಾಂವಿಧಾನಿಕ ನೆಲೆಯಲ್ಲೇ ಉಳಿಯಬೇಕೆಂದರೆ ಈ ವಿಧಿಯ ಅಸ್ತಿತ್ವ ಅಂತ್ಯಗೊಳ್ಳಬೇಕಿದೆ. ಅದೇ ರೀತಿ ಮುಂಬರುವ ದಿನಗಳಲ್ಲಿ ಕಾಶ್ಮೀರ ಕಣಿವೆಯು ರಾಷ್ಟ್ರೀಯ ಭಾವನಾತ್ಮಕ ಪರಿಕಲ್ಪನೆಗೆ ತೆರೆದುಕೊಳ್ಳಲು ಈ ದೃಢ ಹೆಜ್ಜೆ ತೀರಾ ಅತ್ಯಗತ್ಯ.
Related Articles
Advertisement
ಇದರ ಹಿಂದೆ ಭಾರತದ ಸಾರ್ವಭೌಮತೆಗೆ ಧಕ್ಕೆ ಒದಗಿಸಬೇಕೆಂಬ ನಮ್ಮ ನೆರೆರಾಷ್ಟ್ರದ ಉದ್ದೇಶ ಕೆಲಸ ಮಾಡುತ್ತಿದೆ. ಈ ಕಣಿವೆ ರಾಜ್ಯದಲ್ಲಿ ಸ್ವತಃ ಪಯಣಿಸಿ, ಅಲ್ಲಿನ ಜನಮನದ ಆಶಯಗಳನ್ನು ಆಲಿಸಿ ಕಂಡುಕೊಂಡ ವಾಸ್ತವಿಕತೆಯನ್ನು ನಿಮ್ಮೆದುರಿಡುತ್ತಿದ್ದೇನೆ: ಅಲ್ಲಿನ ಒಂದು ಗುಂಪು ‘ ಭಾರತದ ಅವಿಭಾಜ್ಯ ಅಂಗವಾಗಿ ಮುಂದುವರಿದರೆ ನೆಮ್ಮದಿಯಾಗಿ ಇರಬಹುದು, ತಮಗಾಗಿ ಹಾಗೂ ತಮ್ಮ ಮಕ್ಕಳಿಗಾಗಿ ಉತ್ತಮ ಬದುಕು ಕಟ್ಟಿಕೊಳ್ಳುವುದು ಸುಲಭ ಸಾಧ್ಯ’ ಎಂಬ ಅಭಿಮತ ವ್ಯಕ್ತಪಡಿಸಿದರೆ, ಇನ್ನೊಂದು ಗುಂಪು ‘ಇಲ್ಲ, ನಾವು ಇಸ್ಲಾಮಾಬಾದಿನ ಧ್ವಜದ ನೆಳಲಿಗೇ ಗಡಿದಾಟುತ್ತೇವೆ. ಕಾಶ್ಮೀರ 1947ರ ಮಹಮದಾಲಿ ಜಿನ್ನಾರ ‘ದ್ವಿರಾಷ್ಟ್ರ ಸಿದ್ಧಾಂತ’ದ ಮುಗಿಯದೆ ಉಳಿದ, ಸೇರ್ಪಡೆಯಾಗದ ಕಾರ್ಯಸೂಚಿ (Unifinished Agenda)’ ಎಂಬ ಮಾನಸಿಕತೆಯ ಮಂದಿಯೂ ಅಲ್ಲಿದ್ದಾರೆ.
ಅದಕ್ಕನುಗುಣವಾಗಿ ನುಸುಳುಕೋರರ ಧರ್ಮಾಂಧತೆ, ಪುಡಿ ಕಾಸಿಗಾಗಿ ಕಲ್ಲು ಬೀಸುವ ಕಾಯಕವನ್ನೇ ನಮ್ಮ ದೈನಂದಿನ ‘ಕರ್ಮ’ವಾಗಿಸಿಕೊಂಡ ನಿರುದ್ಯೋಗಿಗಳ ತಂಡವೂ ಅಲ್ಲಿದೆ. ಮತ್ತೂಂದೆಡೆ ‘ಆಜಾದ್ ಕಾಶ್ಮೀರದ’ ಶೇಖ್ ಅಬ್ದುಲ್ಲಾರ ಕನಸಿನ ಬೆಂಕಿಗೆ ಇನ್ನೂ ಮೈಕಾಯಿಸಿಕೊಂಡು ಇರುವ ಚಿಂತನೆ ಇನ್ನೂ ಕಾಶ್ಮೀರೀ ಛದ್ಧರ್ ಹೊದ್ದುಕೊಂಡು ಮೂಲೆಯಲ್ಲಿ ಕೂತಿದೆ! ಆದರೆ ಭಾರತದಂತಹ ಸದೃಢ ಒಕ್ಕೂಟ ವ್ಯವಸ್ಥೆಯ ಬೇಲಿಯಿಂದಾಚೆಗೆ ಜಿಗಿದು, ಪಾಕ್ ರಣಹದ್ದಿನ ದೃಷ್ಟಿಯಿಂದ ಪಾರಾಗಿ, ಸ್ವತಂತ್ರ ಬಾವುಟ ಹಾರಿಸುವ ಪರಿಜ್ಞಾನ ಒಂದಿನಿತೂ ಈ ಮಂದಿ ಹೊಂದಿಲ್ಲ.
ಇದೀಗ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ‘ಶ್ರೀನಗರದ’ ಬಗೆಗೆ ಹೊಮ್ಮಿಸಿದ ‘ಧೋರಣಾ ಘೋಷಣೆ’ 370ನೇ ವಿಧಿಗೆ ವಿದಾಯ ಕೋರುವ ಸಾಧ್ಯತೆಯನ್ನು ತೆರೆದಿಟ್ಟಿದೆ. ‘ಈ ವಿಧಿಯನ್ನೇ ಅಳಿಸಿದರೆ ಕಾಶ್ಮೀರ ಉರಿವ ಕೆಂಡವಾಗದೇ?’ ಎಂಬ ಪ್ರಶ್ನೆಯನ್ನು ಪ್ರಜ್ಞಾವಂತ ಮಿತ್ರರೊಬ್ಬರು ತೆರೆದಿಟ್ಟರು. ಆ 370ನೇ ವಿಧಿ ಇದ್ದುಕೊಂಡೇ ಕಾಶ್ಮೀರ ಧಗಧಗಿಸುತ್ತಿಲ್ಲವೇನು? ‘ಉರಿ’ಯಂತಹ ಪ್ರದೇಶದಲ್ಲಿ ಭಯೋತ್ಪಾದಕತೆಯ ಸುಡುವಿಕೆ, ಅದಕ್ಕೆ ಕ್ಷಿಪ್ರ ಪ್ರತಿ ದಾಳಿ, ಕಾರ್ಗಿಲ್ ಕದನದ ವಿಜಯ ಪತಾಕೆ… ಈ ಎಲ್ಲಾ ಸರಣಿ ಕಿಡಿಗಳು ಧಗಧಗಿಸುತ್ತಲೇ ಬಂದಿಲ್ಲವೇ? ಈಗದು ಪ್ರವಾಸಿಗರ ಸ್ವರ್ಗವೆನಿಸಿಕೊಳ್ಳುತ್ತಿದೆಯೇ? ದೋಣಿಮನೆ, ಸುಂದರ ಶಾಲು, ಸಾಲು ಸಾಲು ಕಣಿವೆ ಕಂದರಗಳು, ಕೇಸರಿ ಬೆಳೆಯ ಇಳಿಜಾರು ಮೈದಾನಗಳಿಂದ ಸುದ್ದಿಯಲ್ಲಿದೆಯೇ? ಇಲ್ಲ ತಾನೆ?
ಇತಿಹಾಸ ಎಂದರೇ ಹಾಗೇನೇ. ಹಲವರು ಇತಿಹಾಸ ಓದುವುದರಲ್ಲಿ ಆಸಕ್ತರಾದರೆ, ಕೆಲವರಾದರೂ ಭಾವೀ ಇತಿಹಾಸ ನಿರ್ಮಿಸಲೇ ಬೇಕಾದುದು ಅನಿವಾರ್ಯ. ಈ ನಿಟ್ಟಿನಲ್ಲಿ 370ನೇ ವಿಧಿಗೆ ವಿದಾಯ ಕೂಟ ಏರ್ಪಡಿಸುವ ಪೂರ್ವಭಾವಿಯಾಗಿ, ಜಮ್ಮು – ಕಾಶ್ಮೀರದ ಪ್ರತ್ಯೇಕ ಸಂವಿಧಾನಕ್ಕೆ ಚರಮಗೀತೆ ಹಾಡಬೇಕು. 368ನೇ ವಿಧಿಗೂ ಅರ್ಥಾತ್ ತಿದ್ದುಪಡಿಯ ಅಧಿಕಾರದ ಕೀಲಿಕೈ ಹೊತ್ತ ಈ ನಿಧಿಯನ್ನು, ಜಮ್ಮು – ಕಾಶ್ಮೀರ ಅಸೆಂಬ್ಲಿಯ ಪಾರಮ್ಯತೆಯನ್ನೂ ಮೀರಿ ನಿಲ್ಲುವ ತೆರದಲ್ಲಿ ನಾಜೂಕಾಗಿ ಹಿಗ್ಗಿಸಬೇಕು. ಹೀಗೆ ರಾಜ್ಯಾಂಗ ಘಟನೆಯ ಸೂಕ್ತ ಮಾರ್ಪಾಡು ಮಾಡಿ, ಕೇಂದ್ರ ಸಂಸತ್, ರಾಷ್ಟ್ರಪತಿ ಅಧಿಕಾರ ಕಕ್ಷೆಯನ್ನು ಶುಭ್ರಗೊಳಿಸಿ, ಸರ್ವೋಚ್ಛ ನ್ಯಾಯಾಲಯದ ತಕ್ಕಡಿಗೆ ಸೂಕ್ತ ಅನುಸಂಧಾನ ಒಂದೆಡೆಗೆ ಸಾಗಬೇಕು.
ಇನ್ನೊಂದೆಡೆ ಯುವಕರ ಕೈಗೆ ಬಂದೂಕು, ಕಲ್ಲು ನೀಡಿ, ಅವರ ಜೇಬಿಗೆ ಒಂದಿನಿತು ಹಣ ತುರುಕಿಸಿ, ಅವರ ಬದುಕನ್ನೇ ಕಸಿಯುವ ಕೈಗಳಿಗೆ ಕೋಳ ಹಾಕಬೇಕು. ಮತ್ತೂಂದೆಡೆ ತಮ್ಮ ವೃತ್ತಿ ಕೌಶಲ್ಯದ ಜೊತೆಗೆ ಆಧುನಿಕ ತಂತ್ರಜ್ಞಾನ, ವಿಜ್ಞಾನ, ಕೃಷಿ, ಸಾರಿಗೆ ಸಂಪರ್ಕ ಇವೆಲ್ಲದರ ಕ್ಷಿಪ್ರಕ್ರಾಂತಿಯೊಂದಿಗೆ ವಿಶಾಲ ಭಾರತದೊಂದಿಗೆ ಕಾಶ್ಮೀರದ ಕಣಿವೆಯನ್ನೂ, ಅಲ್ಲಿನ ಎಳೆಮನಸ್ಸುಗಳನ್ನೂ ಹಸನುಗೊಳಿಸಬೇಕು. ರಾಷ್ಟ್ರದ ಸಂಕಲ್ಪ ಶಕ್ತಿಯ ಮುಂದೆ, ದೃಢ ಹೆಜ್ಜೆಯ ಮುಂದೆ ಗಡಿಯಾಚೆಗಿನ ಭೀತಿ ಪ್ರಸಾರಕರ ಶಕ್ತಿ ಉಡುಗುವುದರಲ್ಲಿ ಸಂಶಯವಿಲ್ಲ. ಬಲಿಷ್ಠ ಭಾರತದ ಕನಸಿಗೆ, ಕಾಶ್ಮೀರ ನವೀನತೆಯ ಪರಿಪೂರ್ಣತೆಗೆ 370ನೇ ವಿಧಿಯ ವಿದಾಯ ಆವಶ್ಯಕ ಮೈಲುಗಲ್ಲು.