ಹುಬ್ಬಳ್ಳಿ: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಳಲ್ಲಿ ಎದುರಾಗುವ ಸವಾಲುಗಳ ಕುರಿತು ಹಾಗೂ ಭಾರತೀಯ ರೈಲ್ವೆಯ ನವೀನತೆಯ ನೀತಿ, ರೈಲ್ವೆಗಾಗಿ ಸ್ಟಾರ್ಟ್‌ಅಪ್ ಕುರಿತು ಸೋಮವಾರ ಇಲ್ಲಿನ ಗದಗ ರಸ್ತೆಯ ಎಚ್‌ಎಚ್‌ಪಿ ಡೀಸೆಲ್ ಲೋಕೋಶೆಡ್‌ನಲ್ಲಿ ಸ್ಟಾರ್ಟ್‌ಅಪ್ ಮತ್ತು ಉದ್ಯಮಿಗಳೊಂದಿಗೆ ವಿಚಾರ ಸಂಕಿರಣ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಮಾತನಾಡಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನವದೆಹಲಿಯ ರೈಲು ಭವನದಲ್ಲಿ ಜೂ. 13ರಂದು ನಾವೀನ್ಯತೆಯ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರೈಲ್ವೆಗಾಗಿ ಸ್ಟಾರ್ಟ್ ಅಪ್ ನೀತಿ ಘೋಷಿಸಿದ್ದಾರೆ. ಈ ನೀತಿಯ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ನೀತಿಯು ಸ್ಟಾರ್ಟ್‌ಅಪ್‌ಗ್ಳಿಗೆ ಶೇ. 50 ಬಂಡವಾಳ ಅನುದಾನ, ಖಾತ್ರಿ ಮಾರುಕಟ್ಟೆ ಮೊದಲಾದ ಸೌಲಭ್ಯ ಒದಗಿಸಲಿದೆ. ಇಂತಹ ವಿಚಾರ ಸಂಕಿರಣಗಳಿಂದ ಅತ್ಯುತ್ತಮ ನವೋದ್ಯಮಗಳ ಭಾಗವಹಿಸುವಿಕೆಯ ಮೂಲಕ ರೈಲ್ವೆಯ ಪರಿಚಾಲನೆ ಮತ್ತು ಸುರಕ್ಷತೆಯಲ್ಲಿ ಮತ್ತಷ್ಟು ಸುಧಾರಣೆ ತರಬಹುದು. ಇಲಾಖೆಯು ಎಲ್ಲ ರೀತಿಯ ಸಹಯೋಗ ನೀಡಲಿದೆ ಎಂದರು.
ರೈಲ್ವೆಯ ಪರಿಚಾಲನೆ ಮತ್ತು ನಿರ್ವಹಣೆಯಲ್ಲಿ ಭಾರತೀಯ ರೈಲ್ವೆ ಹಾಗೂ ಹುಬ್ಬಳ್ಳಿ ವಿಭಾಗವು ಗುರುತಿಸಿರುವ ಸವಾಲುಗಳ ಕುರಿತು ಚರ್ಚಿಸಲಾಯಿತು. ಸ್ಟಾರ್ಟ್‌ಅಪ್ ಮತ್ತು ಉದ್ಯಮಿಗಳು ಅಧಿಕಾರಿಗಳೊಂದಿಗೆ ನೂತನ ನೀತಿಯ ಸಾಧಕ-ಭಾದಕಗಳ ಕುರಿತು ಚರ್ಚಿಸಿದರು.
ನವೀನ ಆವಿಷ್ಕಾರಗಳಿಗೆ 1.5 ಕೋಟಿ ರೂ. ವರೆಗೆ ಸಮಾನ ವೆಚ್ಚ ಹಂಚಿಕೆ, ಸಂಪೂರ್ಣ ಆನ್ ಲೈನ್ ಪ್ರಕ್ರಿಯೆ ಮೂಲಕ ಶೇ. 100 ಪಾರದರ್ಶಕತೆ, ಪ್ರೊಟೊಟೈಪ್‌ಗ್ಳ ಪರೀಕ್ಷೆ ನಡೆಸಲು ರೈಲ್ವೆಯಿಂದ ಸಹಯೋಗ, ಪ್ರೊಟೊಟೈಪ್ ನಿರ್ವಹಣೆ ಯಶಸ್ವಿಯಾದಾಗ ವರ್ಧಿತ ಅನುದಾನ, ಆವಿಷ್ಕಾರಿಗಳಿಗೆ ಅವರು ಅಭಿವೃದ್ಧಿ ಪಡಿಸಿದ ತಾಂತ್ರಿಕತೆಯ ಬೌದ್ಧಿಕ ಆಸ್ತಿಹಕ್ಕು ನೀಡುವುದು ಇತ್ಯಾದಿಗಳನ್ನು ವಿವರಿಸಲಾಯಿತು. ಭಾರತೀಯ ರೈಲ್ವೆಯಲ್ಲಿ 11 ಹಾಗೂ ಹುಬ್ಬಳ್ಳಿ ವಿಭಾಗವು ಗುರುತಿಸಿರುವ 14 ಸವಾಲುಗಳಿಗೆ ನವೀನ ಪರಿಹಾರಗಳನ್ನು ಆವಿಷ್ಕರಿಸುವವರಿಗೆ ಆದ್ಯತೆ ನೀಡಲಾಗುವುದು. ಜು. 31ರೊಳಗೆ ಸ್ಥಳೀಯವಾಗಿ ಸಂಬಂಧಪಟ್ಟ ವಿಭಾಗಗಳ ಹಿರಿಯ ಅಧಿಕಾರಿಗಳನ್ನು ಭೇಟಿಮಾಡಿ ಪ್ರದರ್ಶಿಸಬಹುದು ಹಾಗೂ ಭಾರತೀಯ ರೈಲ್ವೆಯು ಗುರುತಿಸಿರುವ ಸವಾಲುಗಳ ಆವಿಷ್ಕಾರಗಳನ್ನು ರೈಲ್ವೆಯ ವೆಬ್ ಸೈಟ್‌ಗೆ ಸಲ್ಲಿಸಬಹುದು ಎಂದು ತಿಳಿಸಲಾಯಿತು.
ವಿಚಾರ ಸಂಕಿರಣದಲ್ಲಿ ಹುಬ್ಬಳ್ಳಿ ವಿಭಾಗದ ಎಡಿಆರ್‌ಎಂ ಸಂತೋಷ ಕುಮಾರ ವರ್ಮಾ, ವಿಶ್ವಾಸ ಕುಮಾರ, ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಬಿ. ದೇಶದತ್ತ, ಹಿರಿಯ ವಿಭಾಗೀಯ ಇಂಜನಿಯರ್ ಸಂಯೋಜಕ ವೆಂಕಟರಾವ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಎಸ್. ಹರಿತಾ ಹಾಗೂ ದೇಶಪಾಂಡೆ ಫೌಂಡೇಶನ್, ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜ್, ಬಿವಿಬಿ ಎಂಜಿನಿಯರಿಂಗ್, ಕಾಲೇಜ್, ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜ್‌ಗಳ ಪ್ರಾಧ್ಯಾಪಕರು, ವಿವಿಧ ನವೋದ್ಯಮಿಗಳು, ಅವರ ಪ್ರತಿನಿಧಿಗಳು ಸೇರಿದಂತೆ ಸುಮಾರು 100 ಪ್ರತಿನಿಧಿಗಳು ಭಾಗವಹಿಸಿದ್ದರು.