ಮುದ್ದೇಬಿಹಾಳ: ಹೆಣ್ಣುಮಕ್ಕಳ ಭವಿಷ್ಯ ಉತ್ತಮಗೊಳ್ಳಲು ಅವರಿಗೆ ಅತ್ಯುತ್ತಮ ಶಿಕ್ಷಣ ದೊರಕಿಸಿಕೊಡುವ ಜವಾಬ್ದಾರಿಯನ್ನು ಪಾಲಕರು ನಿಭಾಯಿಸಬೇಕು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಮಂಗಳಾದೇವಿ ಬಿರಾದಾರ ಹೇಳಿದರು.
ಇಲ್ಲಿನ ಸಂಗಮೇಶ್ವರ ನಗರದಲ್ಲಿ ಎಂಜಿವಿಸಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದ ಹೀನಾಕೌಸರ್ ಬಂದೇನವಾಜ್ ಜಾನ್ವೇಕರ್ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಬಿಎಸ್ಸಿ ಪದವಿ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಮತ್ತು ಗಣಿತ, ಅಂಕಶಾಸ್ತ್ರ ವಿಷಯಗಳಲ್ಲಿ ಎರಡು ಚಿನ್ನದ ಪದಕ ಪಡೆದುಕೊಂಡು ಸಾಧನೆ ಮಾಡಿದ ಹಿನ್ನೆಲೆ ಸೋಮವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.
ಹೀನಾಕೌಸರಳಂತಹ ಎಷ್ಟೋ ವಿದ್ಯಾರ್ಥಿನಿಯರು ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದಾರೆ. ರ್‍ಯಾಂಕ್ ಶೈಕ್ಷಣಿಕ ಕಲಿಕೆಯ ಜವಾಬ್ದಾರಿ ಹೆಚ್ಚಿಸುತ್ತದೆ. ಪಾಲಕರ ಪ್ರೋತ್ಸಾಹ ಹೆಣ್ಣುಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸುತ್ತದೆ ಎಂದು ಹೇಳಿದರು.
ಪುರಸಭೆ ಸದಸ್ಯ ವೀರೇಶ ಹಡಲಗೇರಿ, ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಕ್ಬಾಲ್ ಮೂಲಿಮನಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರವಿಂದ ಕಾಶಿನಕುಂಟಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪದಾಧಿಕಾರಿ ರಫೀಕ್ ಕುಂಟೋಜಿ, ಬಿಜೆಪಿ ಯುವ ಮುಖಂಡ ಶೇಖರ ಹಿರೇಮಠ, ಹೀನಾಕೌಸರಳ ತಂದೆ ವಕೀಲ ಬಂದೇನವಾಜ್ ಜಾನ್ವೇಕರ್, ತಾಯಿ ತಸ್ಲಿಮಾಬಾನು ಜಾನ್ವೇಕರ್, ಸಂಗಮೇಶ್ವರ ನಗರದ ಯುವಕರು, ಕಾಲೇಜು ವಿದ್ಯಾರ್ಥಿಗಳು ಇದ್ದರು.