Advertisement

ಕಾಫಿ, ಕರಿಮೆಣಸು ಅಭಿವೃದ್ಧಿ ಯೋಜನೆಗೆ ಪ್ರೋತ್ಸಾಹ

02:36 PM Mar 06, 2021 | Team Udayavani |

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಲಿಗ ಸಮುದಾಯದವರು ಬೆಳೆಯುತ್ತಿರುವ ಕಾಫಿ ಮತ್ತು ಕರಿಮೆಣಸಿಗೆ ಉತ್ತಮ ಮಾರುಕಟ್ಟೆ ಒದಗಿಸಿ ಸಮುದಾಯವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವ ಸಮಗ್ರ ಯೋಜನೆಗೆ ಜಿಲ್ಲಾಡಳಿತದಿಂದ ಅಗತ್ಯ ಪ್ರೋತ್ಸಾಹ, ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಿಳಿ ಗಿರಿರಂಗನ ಬೆಟ್ಟದ ಸೋಲಿಗ ಸಮುದಾಯದವರು ಉತ್ಪಾದಿಸುವ ಕಾಫಿ, ಕರಿಮೆಣಸಿನ ಸಮಗ್ರ ಅಭಿವೃದ್ಧಿ ಕಾರ್ಯಕ್ರಮ ಸಂಬಂಧ ಕಾಫಿ ಬೋರ್ಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ್‌ ಅವರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

ಯೋಜನೆಗೆ ಉತ್ತೇಜನ: ಬಿಳಿಗಿರಿರಂಗನ ಬೆಟ್ಟದ ಭಾಗದಲ್ಲಿ ಕಾಫಿ, ಕರಿಮೆಣಸು ಬೆಳೆಯುತ್ತಿರುವ 492 ಬೆಳೆಗಾರರನ್ನು ಒಳಗೊಂಡ ರೈತರ ಉತ್ಪಾದಕ ಸಂಸ್ಥೆ ಆಗಿರುವ ಬಿಳಿಗಿರಿ ಸೋಲಿಗರ ಉತ್ಪಾದಕರ ಕಂಪನಿ ಸದೃಢವಾಗಿ ಅಭಿವೃದ್ಧಿಹೊಂದಲು 2021-22ರ ವರ್ಷಕ್ಕೆ ರೂಪಿಸಲಾಗಿರುವ ಉದ್ದೇಶಿತ ಯೋಜನೆ ಗಾಗಿ ಬೇಕಿರುವ ಎಲ್ಲಾ ಸಹಕಾರ ನೀಡಲಾಗುವುದು. ಸೋಲಿಗರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗುವ ಯೋಜನೆಗೆ ಉತ್ತೇಜನ ನೀಡಲಾಗುವುದೆಂದರು.

ಸಹಕಾರ: ಕಾಫಿ ಬೋರ್ಡ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಜಿ.ಜಗದೀಶ್‌ ಮಾತನಾಡಿ, ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಫಿ, ಮೆಣಸು ಬೆಳೆ ಬೆಳೆಯುತ್ತಿರುವ ಸೋಲಿಗರ ಉತ್ಪಾದಕ ಸಂಸ್ಥೆಗೆ ಉತ್ಪನ್ನ ಗಳ ಸಂಸ್ಕರಣಾ ಘಟಕ, ಮಣ್ಣು ಪರೀಕ್ಷೆ, ತರಬೇತಿ ಕೇಂದ್ರ, ಉಗ್ರಾಣ ಇನ್ನಿತರ ಉದ್ದೇಶಗಳಿಗಾಗಿ ಭೂಮಿ ಅಗತ್ಯವಿದೆ. ಇದಕ್ಕಾಗಿ ಜಿಲ್ಲಾಡಳಿತದ ಸಹಕಾರ ನೀಡಬೇಕೆಂದರು. ಈ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ, ಅಗತ್ಯವಿರುವ ಭೂಮಿ ನೀಡಲು ಸಹಕರಿಸುವುದಾಗಿ ತಿಳಿಸಿದರು.

ಡಾ.ಕೆ.ಜಿ.ಜಗದೀಶ್‌ ಮಾತನಾಡಿ, ಬೆಳೆಗಾರರಿಗೆ ಎರೆಹುಳು ಗೊಬ್ಬರ, ಇತರೆ ಜೈವಿಕ ಗೊಬ್ಬರ ನೀಡುವ ಮುಖೇನ ಇಳುವರಿ ಹೆಚ್ಚಳಕ್ಕೆ ಪ್ರೋತ್ಸಾಹಿಸಬೇಕಿದೆ. ಕಾಫಿ ಮೆಣಸು ಒಣಗಿಸಲು ಟಾರ್ಪಾಲಿನ್‌ ಒದಗಿಸ ಬೇಕಿದೆ ಎಂದರು.

Advertisement

ನೆರವು ನೀಡಿ: ಕಿತ್ತಲೆ, ನಿಂಬೆ, ಬಟರ್‌ ಫ್ರೊಟ್‌ ನಂತಹಹಣ್ಣುಗಳ ಬೆಳೆಗೆ ಅವಕಾಶ ಮಾಡಿಕೊಡಬೇಕು. ನೆರಳಿನ ಮರ ಬೆಳೆಸುವ ನಿಟ್ಟಿನಲ್ಲಿ ಬಿತ್ತನೆ ಬೀಜ ಹಾಗೂ ಸಸಿಗಳನ್ನು ತೋಟಗಾರಿಕೆ ಇಲಾಖೆ ನೀಡಬೇಕು. ನರೇಗಾ ಯೋಜನೆಯಡಿ ಮಣ್ಣು ಸಂರಕ್ಷಣೆ ಮಾದರಿಗೆ ನೆರವಾಗಬೇಕು. ಬ್ಯಾಂಕುಗಳಿಂದಲೂ ವಹಿವಾಟಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಕಾಫಿ ಬೋರ್ಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಜಿ. ಜಗದೀಶ್‌ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಮಾತನಾಡಿ, ಬೆಳೆಗಾರರ ಹಿತದೃಷ್ಟಿ ಹಾಗೂ ಉತ್ಪನ್ನಗಳಿಗೆ ವಿಶೇಷ ಮನ್ನಣೆ ನೀಡಿ ಅವುಗಳ ವೈಶಿಷ್ಟ್ಯತೆ, ಮೌಲ್ಯವರ್ಧನೆ ಹೆಚ್ಚಿಸಲಾಗುವುದು. ರೈತ ಉತ್ಪಾದಕ ಸಂಸ್ಥೆ ನಿರಂತರವಾಗಿ ಸಂಪರ್ಕದಲ್ಲಿದ್ದು ಪ್ರಗತಿಗೆ ಪೂರಕ ಸಹಕಾರ ಪಡೆದುಕೊಳ್ಳಬೇಕು ಎಂದರು.

ಇದೇ ವೇಳೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಬಿಳಿಗಿರಿ ಸೋಲಿಗರ ಉತ್ಪಾದಕರ ಕಂಪನಿಗೆ 30 ಲಕ್ಷ ರೂ. ಆವರ್ತ ನಿಧಿ ಪ್ರಮಾಣ ಪತ್ರ ನೀಡಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವಿಜಯ್‌ ಕುಮಾರ್‌, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ವಿಜಯ್‌ ಕುಮಾರ್‌ ಚೌರಾಸಿಯ, ನಬಾರ್ಡ್‌ನ ವ್ಯವಸ್ಥಾಪಕಿ ಹಿತಾ ಜಿ. ಸುವರ್ಣ, ಬಿಳಿಗಿರಿ ಸೋಲಿಗರ ಉತ್ಪಾದಕರ ಕಂಪನಿ ಅಧ್ಯಕ್ಷೆ ಸುಮತಿ, ಕಾರ್ಯದರ್ಶಿ ನಂಜೇಗೌಡ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್‌, ಕಾಫಿ ಬೋರ್ಡ್‌ನ ಹಿರಿಯ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್‌ ಇತರರು ಇದ್ದರು.

ಮಾರಾಟ ಮಳಿಗೆ ಸ್ಥಾಪನೆಗೆ ಅವಕಾಶ :

ಸಂಸ್ಥೆ ಉತ್ಪಾದಿಸುವ ಉತ್ಪನ್ನಗಳಿಗೆ ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾರಾಟ ಮಳಿಗೆ ಸ್ಥಾಪನೆಗೆ ಅವಕಾಶ ನೀಡಬೇಕು ಎಂಬ ಉದ್ದೇಶಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ರವಿ, ಮಲೆಮಹದೇಶ್ವರ ಬೆಟ್ಟದಲ್ಲಿ ತಕ್ಷಣವೇ ಮಾರಾಟ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲುಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next