ಧಾರವಾಡ: ಯುವಶಕ್ತಿ ಈ ದೇಶದ ಬೆನ್ನೆಲುಬು, ಅವರಿಗೆ ತಾಂತ್ರಿಕ ಶಿಕ್ಷಣ ನೀಡಿ ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡಿದಲ್ಲಿ ಈ ದೇಶದ ಚಿತ್ರಣ ಬದಲಾಗುವುದರಲ್ಲಿ ಸಂದೇಹವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ನಗರದ ಜೆ.ಎಸ್.ಎಸ್ ಆವರಣದಲ್ಲಿ ಜರುಗಿದ ಸ್ಕಿಲ್ ಎಕ್ಸಪೋ-2017 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಿತವರಿಗೆಲ್ಲ ಉದ್ಯೋಗ ದೊರೆಯುವ ಕಾಲ ಈಗಿಲ್ಲ. ಈಗ ಏನಿದ್ದರೂ ಗುಣಮಟ್ಟವನ್ನು ಕೈಗಾರಿಕೆಗಳು ಅಪೇಕ್ಷಿಸುತ್ತವೆ.
ಯಾವ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುತ್ತದೆಯೋ ಆ ವಿದ್ಯಾರ್ಥಿಗಳು ಮಾತ್ರ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಗುಣಾತ್ಮಕ ಶಿಕ್ಷಣ ಪಡೆಯಲು ತಾಂತ್ರಿಕ ವಸ್ತು ಪ್ರದರ್ಶನಗಳು ಸಹಾಯಕಾರಿಯಾಗುತ್ತವೆ. ಕೇವಲ ನೌಕರಿ ಗೀಳಿಗೆ ಬೀಳದೆ ಸ್ವಉದ್ಯೋಗದ ಕಡೆಗೆ ವಿದ್ಯಾರ್ಥಿಗಳು ಗಮನ ನೀಡಬೇಕು ಎಂದರು.
ಪಿ. ರಮೇಶ್ಯರ ಮಾತನಾಡಿ, ಮುಂದಿನ ದಿನಗಳಲ್ಲಿ ಈ ತಾಂತ್ರಿಕ ಐ.ಟಿ.ಐ ಮೇಳಗಳನ್ನು ಕೈಗಾರಿಕೆಗಳೊಂದಿಗೆ ಜಂಟಿಯಾಗಿ ಇನ್ನೂ ಪರಣಾಮಕಾರಿಯಾಗಿ ಆಯೋಜಿಸಲಾಗುವುದು ಎಂದರು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ| ವಜ್ರಕುಮಾರ ಮಾತನಾಡಿ, ದುಡಿಯುವ ಕೈಗಳಿಗೆ ಆರ್ಥಿಕ ಶಕ್ತಿ ತುಂಬಿದರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿ ಡಾ| ಅಜಿತ ಪ್ರಸಾದ ಮಾತನಾಡಿ, ಅಧ್ಯಾಪಕರು ನಿರಂತರ ಅಧ್ಯಯನಶೀಲರಾಗಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ನೂತನ ತಾಂತ್ರಿಕತೆಯ ಪರಿಚಯ ಮಾಡಲು ಸಾಧ್ಯ. ಈ ಮೇಳಗಳು ನೂತನ ಅವಿಷ್ಕಾರಗಳಿಗೆ ಮೆಟ್ಟಿಲುಗಳಾಗಲಿ ಎಂದರು.
ಮಹಾವೀರ ಉಪಾಧ್ಯೆ ಮಾತನಾಡಿ, ಐ.ಟಿ.ಐ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ತಾಂತ್ರಿಕ ವಸ್ತು ಪ್ರದರ್ಶನವನ್ನು ಅವರ ಅವಿಷ್ಕಾರ ಮನೋಭಾವನೆಯನ್ನು ಹೊರ ಹಾಕಲು ವೇದಿಕೆಯಾಗಲಿದೆ ಎಂದರು. ಜೆ.ಎಸ್.ಎಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜಿನದತ್ತ ಹಡಗಲಿ ನಿರೂಪಿಸಿದರು.
ರವೀಂದ್ರ ದ್ಯಾಬೇರಿ ವಂದಿಸಿದರು. ವಸ್ತು ಪ್ರದರ್ಶನದಲ್ಲಿ 35 ಕಾಲೇಜುಗಳ 125 ಮಾದರಿಗಳು ಭಾಗವಹಿಸಿದ್ದವು. ಅದರಲ್ಲಿ ಸೈಕಲ್ ಚಾಲಿತ ನೀರಿನ ಪಂಪ್, ಫೈರ್ ಅಲಾರಾಂ, ಮಳೆ ನೀರು ಸಂಗ್ರಹಣೆ, ಮೊಬೈಲ್ ಚಾಲಿತ ಗೃಹಪಯೋಗಿ ವಸ್ತುಗಳು, ವಿದ್ಯಾರ್ಥಿನಿಯರು ತಯಾರಿಸಿದ ಸಿದ್ಧ ಉಡುಪುಗಳ ಮಾದರಿಗಳು ಗಮನ ಸೆಳೆದವು.