ದಾವಣಗೆರೆ: ಹಿಂದುಳಿದ ವರ್ಗದ ಸಾಧಕರನ್ನು ಸನ್ಮಾನಿಸುವ ಕಾರ್ಯ ಮಾತ್ರ ಮಾಡದೆ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಉನ್ನತ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಲಹೆ ನೀಡಿದ್ದಾರೆ.
ಭಾನುವಾರ ಮಹಾತ್ಮ ಗಾಂಧಿ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಆದಿ ಕರ್ನಾಟಕ ವಿದ್ಯಾರ್ಥಿ ಸಂಘದಿಂದ ಕೆಪಿಎಸ್‌ಸಿ ಸದಸ್ಯ ಎಸ್.ಎಚ್. ದುಗ್ಗಪ್ಪನವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದವರು ಸಾಧನೆಮಾಡಿದ ಗುರುತಿಸುವವರು ಅನೇಕರಿದ್ದಾರೆ.
ಆದರೆ, ಇದೇ ವರ್ಗದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವವರು ಕಡಿಮೆ ಇದ್ದಾರೆ. ಸಂಘ, ಸಂಸ್ಥೆಗಳು ಹಿಂದುಳಿದ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಿಸಬೇಕು ಎಂದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಾಕಷ್ಟು ಅನುದಾನ ಇಡಲಾಗಿದೆ.
ಸಮಾಜಕ್ಕೆ ಆಗಬೇಕಾದ ಕಾರ್ಯಗಳನ್ನು ಪಟ್ಟಿಮಾಡಿ ಅನುದಾನ ಬಳಕೆಮಾಡಿಕೊಳ್ಳು ಯೋಜನೆ ರೂಪಿಸಿ. ನಾನು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಜೊತೆ ಮಾತುಕತೆ ನಡೆಸಿ, ಅನುದಾನ ತರುತ್ತೇನೆ ಎಂದು ಅವರು ತಿಳಿಸಿದರು. ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ದಲಿತರಿಗಾಗಿ ನಮ್ಮ ಸರ್ಕಾರ ಸಾಕಷ್ಟು ಕಾರ್ಯಕ್ರಮ ರೂಪಿಸಿದೆ. ದಲಿತ ಸಮುದಾಯದವರು ಸಂಘಟಿತರಾಗಿ ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದರು.
ಸಂಘದ ನಿರ್ದೇಶಕ ಬಿ.ಎಸ್. ಪುರುಷೋತ್ತಮ, ಗೌಡ್ರ ಚನ್ನಬಸಪ್ಪ, ಎಪಿಎಂಸಿ ಮಾಜಿ ಸದಸ್ಯ ಎನ್.ಜಿ. ಪುಟ್ಟಸ್ವಾಮಿ, ಸಂಘದ ಕಾರ್ಯದರ್ಶಿ ಬಿ.ಎಚ್. ವೀರಭದ್ರಪ್ಪ, ಎಲ್.ಎಂ. ಹನುಮಂತಪ್ಪ, ಬಿ. ಲೋಹಿತ್, ಬಿ.ಎಂ. ಈಶ್ವರ್ ವೇದಿಕೆಯಲ್ಲಿದ್ದರು. ಅನ್ಯ ಕಾರ್ಯ ನಿಮಿತ್ತ ಕೆಪಿಎಸ್‌ಸಿ ಸದಸ್ಯ ಎಸ್.ಎಚ್. ದುಗ್ಗಪ್ಪ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ.