ಚಿಕ್ಕೋಡಿ: ಜನರನ್ನು ರಂಜಿಸುವ ವೃತ್ತಿ ರಂಗಭೂಮಿಯ ನಾಟಕಗಳು ಇಂದು ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ನಶಿಸಿ ಹೋಗುತ್ತಿದ್ದು, ಇದರಿಂದ ವೃತ್ತಿ ರಂಗಭೂಮಿಯಲ್ಲಿ ಕೆಲಸ ಮಾಡುವ ಅನೇಕ ಜನ ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಯುವ ಜನಾಂಗ ಹೆಚ್ಚು ಹೆಚ್ಚು ನಾಟಕಗಳನ್ನು ನೋಡುವ ಮೂಲಕ ಕಲಾವಿದರ ಜೀವನಕ್ಕೆ ಆಸರೆಯಾಗಬೇಕು ಎಂದು ಮುಖ್ಯಾಧಿಕಾರಿ ಪಿ.ಬಿ.ದೇವಮಾನೆ ಹೇಳಿದರು.
ಪಟ್ಟಣದಲ್ಲಿ ಚಿಂದೋಡಿಲೀಲಾ ಅವರ ಕೆಬಿಆರ್ ಡ್ರಾಮಾ ಕಂಪನಿ ದಾವಣಗೆರೆ ಅವರಿಂದ ಪ್ರಾರಂಭವಾದ ಕಿವುಡ ಮಾಡಿದ ಕಿತಾಪತಿ ಎಂಬ ಹಾಸ್ಯ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಾಥಮಿಕ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಿ.ಎಂ.ಕಾಂಬಳೆ ಮಾತನಾಡಿ, ಸಾಂಸ್ಕೃತಿಕ ಕಲೆಯನ್ನು ಪ್ರೋತ್ಸಾಹಿಸುವ ಚಿಕ್ಕೋಡಿ ನೆಲದಲ್ಲಿ ಅನೇಕ ಡ್ರಾಮಾ ಕಂಪನಿಗಳು ನಾಟಕ ಆಡಿವೆ. ಇಲ್ಲಿಯ ಜನರು ಅನೇಕ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಂಪನಿಯ ಮಾಲಿಕ ಚಿಂದೋಡಿ ಎಲ್.ಚಂದ್ರಧರ ಮಾತನಾಡಿ, ಭಾರತದ ಹೆಮ್ಮೆಯ ವೃತ್ತಿ ರಂಗಭೂಮಿಯ ಪ್ರಥಮ ಪದ್ಮಶ್ರೀ ಪುರಸ್ಕೃತ ಏಕೈಕ ಮಹಿಳೆ ಚಿಂದೋಡಿಲೀಲಾರವರ ಕೆ.ಬಿ.ಆರ್.ಡ್ರಾಮ ಕಂಪನಿ ಇನ್ನು 10 ವರ್ಷ ಕಳೆದರೆ ಶತಮಾನ ಪೂರೈಸಲಿದೆ. ಬೆಳಗಾವಿ ನಾಡಿನಲ್ಲಿ ಕಲೆ ಸಾಂಸ್ಕೃತಿಕ ಕಲೆ ರಕ್ಷಣೆಗೆ ಚಿಂದೋಡಿಲೀಲಾ ಅವರ ಕೊಡುಗೆ ಅಪಾರ. ಬೆಳಗಾವಿ ಜನ ಅಷ್ಟೇ ಪ್ರೀತಿಯಿಂದ ಚಿಂದೋಡಿಲೀಲಾ ಅವರನ್ನು ಪ್ರೀತಿಸಿ ಪ್ರೋತ್ಸಾಹ ನೀಡಿದ್ದಾರೆ ಎಂದರು.
ಅಮೃತ ಮಹೋತ್ಸವ ಆಚರಿಸಿಕೊಂಡ ಚಿಂದೋಡಿಲೀಲಾ ಅವರ ಡ್ರಾಮಾ ಕಂಪನಿ ವೃತ್ತಿ ರಂಗಭೂಮಿ ಉಳಿಸುತ್ತದೆ. ಇದೀಗ ಚಿಕ್ಕೋಡಿಯಲ್ಲಿ ಪ್ರಥಮ ಸಂಚಿಕೆಯಲ್ಲಿ ಕಿವುಡ ಮಾಡಿದ ಕಿತಾಪತಿ ಎಂಬ ಕಾಮಿಡಿ ನಾಟಕ ಪ್ರಾರಂಭವಾಗಿ ಮುಂದಿನ ದಿನಮಾನಗಳಲ್ಲಿ ಅನೇಕ ಹಾಸ್ಯ ಭರಿತ ನಾಟಕಗಳನ್ನು ಆಡಲಿದೆ ಎಂದರು.
ಕಲಾವಿದ ಗಿರೀಶ ಬಿಸಲನಾಯಕ ಸ್ವಾಗಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ನೌಕರರ ಸಂಘದ ಅಧ್ಯಕ್ಷ ಎಸ್. ಎನ್. ಬೆಳಗಾವಿ, ರವಿ ಮಾಳಿ, ಸುನೀಲ ಖಡ್ಡೆ, ಎಸ್.ಕೆ.ನೇಜ, ಬಸವರಾಜ ಅಮ್ಮಿನಭಾವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.