ಅಜೆಕಾರು: ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ ಪೋ›ತ್ಸಾಹಿಸಬೇಕು, ಶಿಶು ಗೀತೆಗಳನ್ನು, ಜಾನಪದ ಗೀತೆಗಳನ್ನು ಕಲಿಸಿ ಅವರಲ್ಲಿ ಉತ್ಸಾಹ ತುಂಬಬೇಕು ಎಂದು ಹಿರಿಯ ಕವಿ ಕಾಂತಾವರ ಶಿವಾನಂದ ಶೆಣೈ ಹೇಳಿದರು.
ಅವರು ಅಜೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಿಂಗಳ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಶಿಶು ಗೀತೆಗಳು ಮತ್ತು ಆಶು ಕತೆಗಳನ್ನು ಹಾಡಿ ಬದುಕನ್ನು ಹೇಗೆ ನಡೆಸ ಬೇಕು ಎಂಬುದನ್ನು ಹೆತ್ತವರಿಗೆ ಮತ್ತು ಮಕ್ಕಳಿಗೆ ಮನವರಿಕೆ ಮಾಡಿ, ತಮ್ಮ ಕತೆಗಳನ್ನೊಳಗೊಂಡ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ವಿತರಿಸಿದರು.
ಈ ಸಂದರ್ಭ ಭರತನಾಟ್ಯದಲ್ಲಿ ಬಾಲ್ಯದಲ್ಲಿಯೇ ಸಾಧನೆ ಮಾಡಿರುವ ಮೂಡಬಿದಿರೆಯ ಬಾಲಕಿ ಕರ್ನಾಟಕ ಪ್ರತಿಭಾ ರತ್ನ ಗೌರವ ಪುರಸ್ಕೃತೆ ಪ್ರಕೃತಿ ಮಾರೂರು ನೃತ್ಯ ಪ್ರದರ್ಶನ ನೀಡಿದರು.
ಪ್ರಕೃತಿ ಮತ್ತು ಶಿವಾನಂದ ಶೆಣೈ ಅವರನ್ನು ಗೌರವಿಸಲಾಯಿತು. ಮುಖ್ಯ ಶಿಕ್ಷಕ ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು.
ತಿಂಗಳ ಸಂಭ್ರಮದ ನಿರ್ದೇಶಕ ಡಾ| ಶೇಖರ ಅಜೆಕಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ನಫಿಸಾ ವಂದಿಸಿದರು. ಹಿರಿಯ ಶಿಕ್ಷಕಿ ಶಾರದಾ ಕಾರ್ಯಕ್ರಮ ನಿರೂಪಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸದಾನಂದ ಮಡಿವಾಳ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಸದಸ್ಯೆ ಶಶಿಕಲಾ ಜಯಂತ್ ಕೋಟ್ಯಾನ್ ಬೆಳುವಾಯಿ ಮತ್ತು ಕವಿತಾ ಸುರೇಶ ಮರಿಯಾಡಿ ಉಪಸ್ಥಿತರಿದ್ದರು.