ಮುದ್ದೇಬಿಹಾಳ: ಮಾಧ್ಯಮಗಳು ಸಮಾಜದ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಾದೇಶಿಕ ಮಾಧ್ಯಮಗಳಿಗೆ ಪ್ರೋತ್ಸಾಹ ಸಿಕ್ಕಂತೆ ಸ್ಥಳೀಯ ಮಾಧ್ಯಮಗಳಿಗೂ ಸರ್ಕಾರದ ಸೌಲಭ್ಯ ಸಿಗಬೇಕು. ಇವು ಪ್ರಬಲವಾಗಿ ಬೆಳೆಯಬೇಕು ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ದೇವರು ಹೇಳಿದರು.
ಇಲ್ಲಿನ ಜ್ಞಾನಭಾರತಿ ವಿದ್ಯಾ ಮಂದಿರದಲ್ಲಿ ನಯನ ಭಾರ್ಗವ ಪಾಕ್ಷಿಕ ಪತ್ರಿಕೆಯ ವಾರ್ಷಿಕೋತ್ಸವ, ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇಶದ ಸಂಸ್ಕೃತಿ ನಾಶವಾದರೆ ದೇಶ ನಾಶವಾಗುತ್ತದೆ ಎನ್ನುವುದನ್ನು ನಾವೆಲ್ಲ ಅರಿತು ಜಾತಿಗಾಗಿ ಬಾಳದೆ, ಭಾರತೀಯರಾಗಿ ಬಾಳಬೇಕು ಎಂದು ಕಿವಿಮಾತು ಹೇಳಿದರು. ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದದರು.
ಕಾರ್ಗಿಲ್ ಯುದ್ಧದಲ್ಲಿ ತಮ್ಮ ಎರಡು ಕೈಗಳನ್ನು ಕಳೆದುಕೊಂಡ ವೀರಯೋಧ ರಂಗಪ್ಪ ಆಲೂರ ಸನ್ಮಾನಿತರ ಪರವಾಗಿ ಮಾತನಾಡಿದರು. ಕರ್ನಾಟಕ ಕೋ ಆಪ್ ಬ್ಯಾಂಕ್ ಅಧ್ಯಕ್ಷ ಸತೀಶಕುಮಾರ ಓಸ್ವಾಲ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ರಕ್ಕಸಗಿ ಗ್ರಾಪಂ ಉಪಾಧ್ಯಕ್ಷ ಅಕ್ಷಯ್ ನಾಡಗೌಡ, ವಿದ್ಯಾಸ್ಫೂರ್ತಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಬಸಮ್ಮ ಸಿದರೆಡ್ಡಿ, ಓಂಶಾಂತಿ ಭವನದ ರಾಜಯೋಗಿನಿ ಬ್ರಹ್ಮಕುಮಾರಿ ರೇಣುಕಾ ಮಾತನಾಡಿದರು.
ಬಸಯ್ಯ ಶರಣರು ಸಾನ್ನಿಧ್ಯವನ್ನು, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಮಹೇಂದ್ರ ಓಸ್ವಾಲ್, ಗಿರಿಜಾಶಂಕರ ಚಿತ್ರಮಂದಿರದ ಮಾಲೀಕ ಶಿವಾನಂದ ಸಾಲಿಮಠ, ಜ್ಞಾನಭಾರತಿಯ ಕಾರ್ಯದರ್ಶಿ ಬಿ.ಪಿ ಕುಲಕರ್ಣಿ, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಬಸವರಾಜ ಅಂಗಡಗೇರಿ ವೇದಿಕೆಯಲ್ಲಿದ್ದರು.
ಸಾಧಕರಾದ ವೀರಯೋಧ ರಂಗಪ್ಪ ಆಲೂರ, ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಾಜಿ ಸೈನಿಕರಾದ ಎಸ್.ಆರ್. ಕುಲಕರ್ಣಿ, ಎಸ್.ಸಿ.ಹಿರೇಮಠ, ಸಾಮೂಹಿಕ ವಿವಾಹದಲ್ಲಿ ಮಾಂಗಲ್ಯ, ಕಾಲುಂಗುರ ಉಚಿತವಾಗಿ ನೀಡುವ ಸೇವೆಗೈಯುತ್ತಿರುವ ಗಿರಿಜಾ ಬಂಡಿ, ಸೂರಜ್ ಸೋಷಿಯಲ್ ಗ್ರೂಪ್‌ನ ಅಧ್ಯಕ್ಷ ಮಹಿಬೂಬ ಹಡಲಗೇರಿ, ಕ್ಷೌರಿಕ ವೃತ್ತಿಯಲ್ಲಿ ಅವಿರತವಾಗಿ ಸೇವೆ ಮಾಡುತ್ತ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿ ದಲಿತರಿಗೆ ಕ್ಷೌರ ಸೇವೆ ಮಾಡಿದ ಕಾಯಕ ಯೋಗಿ ಮಲ್ಲಣ್ಣ ತೇಲಂಗಿ, ಬೂಟ್ ಪಾಲಿಷ್ ಮಾಡುತ್ತ ಚರ್ಮಶಿಲ್ಪ ಕಾಯಕದಲ್ಲಿ ಸೇವೆಗೈಯ್ದ ಮಹಾಂತೇಶ ಬೂತನಾಳ, ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಮಹಾಂತೇಶ ಸಿದರೆಡ್ಡಿ, ಆರೋಗ್ಯ ಕವಚದಲ್ಲಿ ನೂರಾರು ಸುರಕ್ಷಿತ ಹೆರಿಗೆ ಮಾಡಿಸಿದ ಇಎಂಟಿ ಶ್ರೀಶೈಲ ಹೂಗಾರ ಅವರನ್ನು ಗೌರವಿಸಲಾಯಿತು.
ಶಿಕ್ಷಕ ಪಾಟೀಲ ಸ್ವಾಗತಿಸಿದರು. ಅನಿಲಕುಮಾರ ತೇಲಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಕಲಾಲ ನಿರೂಪಿಸಿದರು. ರವಿ ತೇಲಂಗಿ ವಂದಿಸಿದರು.