ನವದೆಹಲಿ:ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆ ಬಳಕೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಾಮಾನ್ಯ ಜನರಲ್ಲಿ ವಿಶ್ವಾಸವನ್ನು ಹೆಚ್ಚಿಸಬೇಕಾದ ಕೆಲಸ ಮಾಡಬೇಕಾಗಿದೆ. ಸ್ಥಳೀಯ ಭಾಷೆ ಬಳಕೆಯಿಂದ ಜನಸಾಮಾನ್ಯರಿಗೂ ಹೆಚ್ಚು ಆಪ್ತವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ:ದಿವ್ಯಾ ಹಾಗರಗಿ ಬಂಧನ ಸರ್ಕಾರದ ದೊಡ್ಡ ಸಾಧನೆಯಲ್ಲ: ಶಾಸಕ ಪ್ರಿಯಾಂಕ್ ಖರ್ಗೆ
ಅವರು ಶನಿವಾರ (ಏಪ್ರಿಲ್ 30) ನವದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯಮಂತ್ರಿಗಳು ಹಾಗೂ ಹೈಕೋರ್ಟ್ ನ ಚೀಫ್ ಜಸ್ಟೀಸ್ ಜಂಟಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ. ಇದರಿಂದ ಕೇವಲ ನ್ಯಾಯಾಂಗ ವ್ಯವಸ್ಥೆ ಮೇಲೆ ಜನಸಾಮಾನ್ಯರಲ್ಲಿ ವಿಶ್ವಾಸ ಹೆಚ್ಚಿಸುವುದು ಮಾತ್ರವಲ್ಲ, ಜತೆಗೆ ಇದು ಜನಸಾಮಾನ್ಯರನ್ನು ಕೂಡಲೇ ತಲುಪಲಿದೆ ಎಂದು ಪ್ರಧಾನಿ ಹೇಳಿದರು.
ಕೇಂದ್ರ ಸರ್ಕಾರ ಈಗಾಗಲೇ ಅಪ್ರಸ್ತುತವಾಗಿರುವ 1,450 ಕಾನೂನುಗಳನ್ನು ತೆಗೆದುಹಾಕಿದೆ. ಅದೇ ರೀತಿ ರಾಜ್ಯ ಸರ್ಕಾರಗಳು ಕೂಡಾ 75 ಅಂತಹ ಕಾನೂನುಗಳನ್ನು ರದ್ದುಗೊಳಿಸಿವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
2015ರಲ್ಲಿ ನಾವು (ಕೇಂದ್ರ ಸರ್ಕಾರ) ಸುಮಾರು 1,800 ಅಪ್ರಸ್ತುತ ಕಾಯ್ದೆಗಳನ್ನು ಗುರುತಿಸಿ, ಅದರಲ್ಲಿ 1450 ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವುದಾಗಿ ಸಮ್ಮೇಳನದಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ಭಾರತವು 75ನೇ ಸ್ವಾತಂತ್ರ್ಯೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ನ್ಯಾಯ ಪ್ರತಿಯೊಬ್ಬರಿಗೂ ಸುಲಭವಾಗಿ ಮತ್ತು ತ್ವರಿತವಾಗಿ ಲಭ್ಯವಾಗುವ ರೀತಿಯಲ್ಲಿ ನಾವು ನ್ಯಾಯಾಂಗ ವ್ಯವಸ್ಥೆಯನ್ನು ರಚಿಸುವತ್ತ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.