Advertisement

ಹತ್ತಿ-ಕಡಲೆ ಬೆಳೆಯಲು ಪ್ರೋತ್ಸಾಹಿಸಿ

03:39 PM Jun 20, 2018 | |

ವಿಜಯಪುರ: ಬೆಲೆ ಕುಸಿತದಿಂದ ರೈತರನ್ನು ಕಂಗೆಡಿಸಿರುವ ತೊಗರಿ ಬೆಳೆ ಸರ್ಕಾರಕ್ಕೆ ತಲೆ ನೋವು ತಂದಿದೆ. ಹೀಗಾಗಿ ಪರ್ಯಾವಾಗಿ ಹತ್ತಿ ಹಾಗೂ ಕಡಲೆ ಸೇರಿದಂತೆ ಪರ್ಯಾಯ ಬೆಳೆ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಬೇಕು. ತೊಟಗಾರಿಕೆ ಬೆಳೆಗಾರರನ್ನು ಉತ್ತೇಜಿಸಲು ರಫ್ತು ಅವಕಾಶಗಳ ಕುರಿತು ರೈತರಿಗೆ ಸ್ಪಷ್ಟ ಮಾಹಿತಿ ನೀಡುವಂತೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಸೂಚಿಸಿದರು.

Advertisement

ಸಚಿವರಾದ ಬಳಿಕ ಮೊದಲ ಬಾರಿಗೆ ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರೊಂದಿಗೆ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಿರೀಕ್ಷೆ ಮೀರಿ ತೊಗರಿ ಬೆಳೆ ಬೆಳೆದು ಏಕಕಾಲಕ್ಕೆ ಮಾರುಕಟ್ಟೆಗೆ ಬಂದಾಗ ಬೆಲೆ ಕುಸಿತವಾಗಿ ಸಮಸ್ಯೆ ತಂದೊಡ್ಡಿತು.

ಹೀಗಾಗಿ ರೈತರನ್ನು ಆರ್ಥಿಕ ಸಬಲೀಕರಣಕ್ಕೆ ಪರ್ಯಾಯ ಬೆಳೆಗೆ ಪ್ರೇರಣೆ ನೀಡಲು ಯೋಜನೆ ರೂಪಿಸಬೇಕು. ಇದಕ್ಕಾಗಿ ಕೃಷಿ, ತೋಟಗಾರಿಕೆ ಇಲಾಖೆ ಮಾತ್ರವಲ್ಲ, ಬಾಗಲಕೋಟೆ ತೋಟಗಾರಿಕೆ ಕೃಷಿ ಮಹಾವಿದ್ಯಾಲಯದ ತಜ್ಞರೊಂದಿಗೆ ಜಂಟಿ ಕಾರ್ಯಕ್ರಮ ರೂಪಿಸಲು ಸೂಚಿಸಿದರು.

ತೊಗರಿ ಬೆಳೆಯ ಬೆಲೆ ಕುಸಿತ ಹಾಗೂ ಬೆಂಬಲ ಬೆಲೆಯಲ್ಲಿ ಖರೀದಿ ಸೇರಿದಂತೆ ಇಡಿ ವ್ಯವಸ್ಥೆಯಲ್ಲಿ ಅಧಿಕಾರಿಗಳ ದೂರದೃಷ್ಟಿ ಇಲ್ಲದ ನಡೆಯೂ ಸಮಸ್ಯೆ ಗಂಭೀರ ಸ್ವರೂಪ ಪಡೆದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ತೊಗರಿ ಬೆಳೆ ವಿಷಯದಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಸಚಿವ ಶಿವಾನಂದ ಅತೃಪ್ತಿ ವ್ಯಕ್ತಪಡಿಸಿದರು.

ತೊಗರಿ ಬೆಳೆಗಾರರ ಪರಿಶ್ರಮ ಮಧ್ಯವರ್ತಿಗಳ ಪಾಲಾಗಲು ಅಧಿಕಾರಿಗಳೇ ಕಾರಣ. ತೊಗರಿ ಖರೀದಿ ಮಾಡಿದ ರೈತರಿಗೆ ಇನ್ನೂ ಹಣ ನೀಡಿಲ್ಲ, ರೈತರು ಕೇಳಿದರೆ ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಈ ಹಂತದಲ್ಲಿ ಸಚಿವರ ಅಸಮಾಧಾನಕ್ಕೆ ಪ್ರತಿಕ್ರಿಯೆ ನೀಡಿದ ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ರೈತರಿಂದ ತೋಗರಿ ಖರೀದಿ ಮಾಡಿದ್ದಕ್ಕೆ ಸರ್ಕಾರ 160 ಕೋಟಿ ರೂ. ಬಿಲ್‌ನಲ್ಲಿ 138 ಕೋಟಿ ರೂ. ಹಣ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಈಗಾಗಲೇ ಜಮೆಯಾಗಿದ್ದು, 22 ಕೋಟಿ ರೂ. ಬಾಕಿ ಪಾವತಿಸಬೇಕಿದೆ ಎಂದು ವಿವರಿಸಿದರು.

ಈ ಹಂತದಲ್ಲಿ ಪರ್ಯಾಯ ಬೆಳೆ ಬೆಳೆಗೆ ಸಲಹೆ ನೀಡಿದ ಸಚಿವ ಶಿವಾನಂದ ಪಾಟೀಲ, ತೊಗರಿ ಬೆಳಗೆ ಪರ್ಯಾವಾಗಿ
ಆರ್ಥಿಕ ಅಭಿವೃದ್ಧಿಗಾಗಿ ವಾಣಿಜ್ಯ ಬೆಳೆ ಬೆಳೆಯಲು ಅದರಲ್ಲೂ, ಈ ಹಿಂದೆ ಹತ್ತಿ ಬೆಳೆಯುವ ಸಾಂಪ್ರದಾಯಿಕ ಕ್ಷೇತ್ರ ಇರುವ ಸಿಂದಗಿ, ವಿಜಯಪುರ ತಾಲೂಕಿನ ರೈತರನ್ನು ಪ್ರೇರೇಪಿಸಬೇಕು. ಇದಕ್ಕಾಗಿ ರೈತರ ಮನವೊಲಿಕೆ ಕಾರ್ಯಕ್ರಮ ರೂಪಿಸಿ ಕನಿಷ್ಠ 1 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ, ಕಡಲೆ ಬೆಳೆ ಬೆಳೆಗೆ ಪ್ರೇರೇಪಿಸಿ ಎಂದು
ಸೂಚಿಸಿದರು.

ಬಿತ್ತನೆ ಹಂಗಾಮಿನ ರೈತರ ಧಾವಂತವನ್ನು ಅವಕಾಶವಾದಿ ತನಕ್ಕೆ ಬಳಸಿಕೊಂಡು ಕಳಪೆ ಬೀಜ, ನಕಲಿ ರಸಗೊಬ್ಬರ, ಕ್ರಿಮಿನಾಶಕ ಪೂರೈಕೆ ಮಾಡುವ ವಂಚಕರ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಇದಕ್ಕೆ ಕೃಷಿ ಜಿಂಟಿ ನಿರ್ದೇಶಕ ಮಂಜುನಾಥ, ಕಳೆದ ವರ್ಷ ಇಂಥ ಪ್ರಕರಣಗಳು ಕಂಡು ಬಂದಾಗ ಪೊಲೀಸ್‌ ದೂರು
ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಮಜಾಯಿಸಿ ನೀಡಲು ಮುಂದಾದಾಗ, ಒಂದು ಪ್ರಕರಣದಲ್ಲೂ ವಂಚಕರಿಗೆ ಶಿಕ್ಷೆ ಆಗಿಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಆಲಿಕಲ್ಲು, ಅತಿವೃಷ್ಟಿಯಿಂದ ಆಗಿರುವ ತೋಟಗಾರಿಕೆ ಬೆಳೆ ಹಾನಿ ವಿವರ ನೀಡಿದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ, ಆಲಿಕಲ್ಲು ಮಳೆಯಿಂದ 305.5 ಹೆಕ್ಟೇರ್‌ ಹಾಗೂ ಅತಿವೃಷ್ಟಿಯಿಂದಾಗಿ 767 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಉಳ್ಳಾಗಡ್ಡಿಗೆ 13,500 ಪ್ರತಿ ಹೆಕ್ಟೇರ್‌ಗೆ ಹಾಗೂ ಉಳಿದ ತೋಟಗಾರಿಕಾ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 18 ಸಾವಿರ ರೂ. ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದರು.

ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ, ಕಬ್ಬು ಬೆಳೆಗಾರರ ಹಿಂಬಾಕಿ ಪಾವತಿಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆ ಸೂಚಿಸಿ, ಸೂಕ್ತ ಮಾಹಿತಿ ಇಲ್ಲದೇ ಅಧಿಕಾರಿಗಳು ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸದಂತೆ ತಾಕೀತು ಮಾಡಿದರು.  ಜಿಲ್ಲೆಯಲ್ಲಿ ಹನಿ ನೀರಾವರಿ ಯೋಜನೆ ಅನುಷ್ಠಾನದ ವಿಷಯದಲ್ಲಿ ಇಲಾಖೆ ಹಾಗೂ ಅನುಷ್ಠಾನ ಸಂಸ್ಥೆಗಳ ನಡೆ ಕುರಿತು ಅನುಮಾನ ಮೂಡುವಂತಿದೆ. ಮತ್ತೂಂದೆಡೆ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅಧಿಕ ಪ್ರಮಾಣದಲ್ಲಿ ದ್ರಾಕ್ಷಿ, ಲಿಂಬೆ ಬೆಳೆ ಬೆಳೆಯುತ್ತಿದ್ದರೂ ರೈತರಿಗೆ ರಫ್ತು ವಹಿವಾಟಿನ ಕುರಿತು ಮಾಹಿತಿ ನೀಡಬೇಕು. ಇದಕ್ಕಾಗಿ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳು ಜಂಟಿಯಾಗಿ ಈ ವಿಷಯದಲ್ಲಿ ಸ್ಪಷ್ಟ ಮಾಹಿತಿ ಸಹಿತ ಯೋಜನೆ ರೂಪಿಸುವಂತೆ ಸೂಚಿಸಿದರು. 

ಅಧಿಕಾರಿಗಳ ಮಧ್ಯೆ ಇರುವ ಸಮನ್ವಯ ಕೊರತೆಹಾಗೂ ನಿರಾಸಕ್ತಿ ಪರಿಣಾಮ ಸರ್ಕಾರ ಬಡವರಿಗಾಗಿ ರೂಪಿಸುವ ಕೃಷಿ, ತೋಟಗಾರಿಕೆ ಕಾರ್ಯಕ್ರಮಗಳು ಕೆಲವೇ ರೈತರನ್ನು ತಲುಪುತ್ತಿವೆ. ಹೀಗಾಗಿ ಎಲ್ಲ ರೈತರನ್ನು ತಲುಪುವಂತೆ ಜಾಗೃತಿ ಕಾರ್ಯಕ್ರಮ ರೂಪಿಸುವಂತೆ ನಿರ್ದೇಶನ ನೀಡಿದರು. ಇದಕ್ಕೂ ಮೊದಲು ಸಚಿವರಾಗಿ ಮೊದಲ ಬಾರಿಗೆ ಕೆಡಿಪಿ ಸಭೆಗೆ ಆಗಮಿಸಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ ಹಾಗೂ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರನ್ನು ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಸನ್ಮಾನಿಸಿ ಬರಮಾಡಿಕೊಂಡರು. ಜಿಪಂ ಸಿಇಒ
ಸುಂದರೇಶಬಾಬು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next