ಬನಹಟ್ಟಿ: ಕನ್ನಡ ನಾಡು-ನುಡಿ ಅಭಿವೃದ್ಧಿಯ ಸಲುವಾಗಿ ಕಾರ್ಯ ಮಾಡುವ ಸಂಸ್ಥೆಗಳನ್ನು ಮತ್ತು ವ್ಯಕ್ತಿಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಿದಾಗ ಮಾತ್ರ ನಾಡು-ನುಡಿ ಬೆಳೆಯುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸಮೀಪದ ಯಲ್ಲಟ್ಟಿಯಲ್ಲಿ ಶುಕ್ರವಾರ ನಡೆದ ಕೊಣ್ಣೂರು ನುಡಿ ಸಡಗರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ. ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಅಭಿರುಚಿಯನ್ನುಂಟು ಮಾಡುವ ಕಾರ್ಯ ಶ್ರೇಷ್ಠವಾದುದು. ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಮಹತ್ವದ ಕಾರ್ಯಕ್ರಮಗಳಿಗೆ ಯಾವಾಗಲೂ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ನಿವೃತ್ತ ಉಪನ್ಯಾಸಕ ಫ್ರೋ ಜಿ.ಎಸ್. ವಡಗಾವಿ ಆಶಯ ನುಡಿಗಳನ್ನಾಡಿದರು. ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಡಾ| ಸಿದ್ಧರಾಮ ಮನಹಳ್ಳಿ, ಫ್ರೋ ಜಿ.ಎಸ್. ವಡಗಾವಿ ರಚಿಸಿದ ಆರವತ್ತು ಅರಳು ಮತ್ತು ಫ್ರೋ | ಎಸ್.ಎಂ. ದಾಶ್ಯಾಳ ರಚಿಸಿದ ಸಂತ ಕಬೀರದಾಸಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಜಮಖಂಡಿಯ ವಿದ್ಯಾ ಭವನ ಶಿಕ್ಷಣ ಸಂಸ್ಥೆಗೆ ಶಿಕ್ಷಣ ಪ್ರಶಸ್ತಿ ಮತ್ತು ಡಾ| ಚಂದ್ರಕಾಂತ ಪೋಕಳೆ ಅವರಿಗೆ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿದ್ಧಲಿಂಗ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ದೀಪಾ ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ನವಲಿಹಿರೇಮಠ, ಜಿ.ಎನ್. ಸನದಿ, ಬಿ.ಆರ್. ಪೊಲೀಸ್ ಪಾಟೀಲ, ಶಂಕರ ಜಾಲಿಗಿಡದ, ಗೋಪಾಲ ಭಟ್ಟಡ, ಡಾ| ಎಸ್. ಎಸ್.ಸುವರ್ಣಖಂಡಿ, ಶಂಕರ ಜುಂಜಪ್ಪನವರ, ಮಲ್ಲಿಕಾರ್ಜುನ ಕಕಮರಿ, ವೆಂಕಟೇಶ ನಿಂಗಸಾನಿ, ಬಸವರಾಜ ದಲಾಲ ಇದ್ದರು. ಪದ್ಮಪ್ರಿಯಾ ಕುಡಚಿ ನಾಡಗೀತೆ ಹಾಡಿದರು.
ಶಮಿಶಾ ನದಾಫ್ ಪ್ರಾರ್ಥಿಸಿದರು. ಫ್ರೋ ಬಸವರಾಜ ಕೊಣ್ಣೂರ ಸ್ವಾಗತಿಸಿದರು. ಫ್ರೋ ಚಂದ್ರಕಾಂತ ಹೊಸೂರ ನಿರೂಪಿಸಿದರು. ರಾಜೇಶ ನೋಟದ ವಂದಿಸಿದರು