Advertisement

ಸಮ್ಮೇಳನದ ನಿರ್ಣಯಗಳ ಜಾರಿ ಮಾಡಿ

03:16 PM Feb 08, 2018 | |

ಹನೂರು: ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಸಾಕಾರಗೊಳಿಸಲು ಮತ್ತು ಕನ್ನಡದ ಕಡೆಗೆ ಜನರನ್ನು ಆಕರ್ಷಿಸುವಂತಹ ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷ ಸಿ.ನಾಗರಾಜು ಅಭಿಪ್ರಾಯಪಟ್ಟರು.

Advertisement

ಪಟ್ಟಣದ ವಾಸವಿ ಮಹಲ್‌ ಕಲ್ಯಾಣ ಮಂಟಪದ ಮೀಣ್ಯ ಗುರುಸಿದ್ಧ ವೇದಿಕೆಯಲ್ಲಿ ಏರ್ಪಡಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಾಗರಾಜು, ಕೊಳ್ಳೇಗಾಲ ತಾಲೂಕು ಗಡಿಯಂಚಿನಲ್ಲಿದ್ದು, ತಮಿಳುನಾಡಿನ ಪ್ರಭಾವಕ್ಕೆ ಒಳಗಾಗಿದ್ದರೂ ಕನ್ನಡ ಅಭಿವೃದ್ಧಿಯಾಗುತ್ತಿದೆ ಇದು ಹೆಮ್ಮೆ ಪಡುವಂತಹ ವಿಚಾರ. ಕನ್ನಡದ ಅಭಿವೃದ್ಧಿ ಕಾರ್ಯಗಳನ್ನು ಪ್ರತಿಯೊಬ್ಬ ಕನ್ನಡಿಗನೂ ಸ್ವಯಂಪ್ರೇರಿತವಾಗಿ ಮಾಡ ಬೇಕು. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡಿ ಕನ್ನಡದಲ್ಲೇ ಶಿಕ್ಷಣ ನೀಡುವಂತಾಗಬೇಕು ಎಂದು ತಿಳಿಸಿದರು. 

ಸಮ್ಮೇಳನದ ನಿರ್ಣಯಗಳು: ಕೊಳ್ಳೇಗಾಲ ಮತ್ತು ಹನೂರು ಕಸಾಪ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸ್ವಂತ ಕಟ್ಟಡ ಕಲ್ಪಿಸಬೇಕು, ಸಭಾಭವನ, ಗ್ರಂಥಾಲಯಗಳ ನಿರ್ಮಾಣಕ್ಕಾಗಿ ಸ್ವಂತ ಕಟ್ಟಡ ಹೊಂದಲು ಅಗತ್ಯ ನಿವೇಶನ ಮಂಜೂರು ಮಾಡಿಕೊಡಬೇಕು. 

ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರವಾಸಿಗಳು ಮತ್ತು ಸ್ಥಳೀಯರ ಅನುಕೂಲಕ್ಕಾಗಿ ಸುಸಜ್ಜಿತ ಗ್ರಂಥಾಲಯ ಪ್ರಾರಂಭಿಸಬೇಕು, ಧರ್ಮಸ್ಥಳ ಮಾದರಿಯಲ್ಲಿ ವಸ್ತು ಸಂಗ್ರಹಾಲಯ ಪ್ರಾರಂಭಿಸಬೇಕು. ಕ್ಷೇತ್ರ ವ್ಯಾಪ್ತಿಯ ಗುಂಡಾಲ್‌ ಜಲಾಶಯ ಕೃಷ್ಣರಾಜ ಸಾಗರ ಜಲಶಯಕ್ಕಿಂತಲೂ ರಮಣೀಯ ಪ್ರವಾಸಿ ತಾಣವಾಗಿದ್ದು, 2 ಕಡೆ ಬೆಟ್ಟಗುಡ್ಡಗಳಿಂದ ಕೂಡಿದೆ. ಈ ಜಲಾಶಯವನ್ನು ಪ್ರವಾಸಿ ತಾಣವನ್ನಾಗಿ ನಿರ್ಮಾಣ ಮಾಡಬೇಕು, ಅಗತ್ಯ ರಸ್ತೆ ಸಂಪರ್ಕ ಕಲ್ಪಿಸಬೇಕು. 

ತಮಿಳುನಾಡು ರಸ್ತೆ ಸಾರಿಗೆ ಮತ್ತು ಅಂತಾರಾಜ್ಯ ಪರವಾನಗಿ ಪಡೆದ ಖಾಸಗಿ ಬಸ್‌ಗಳಲ್ಲಿ ಕನ್ನಡದ ನಾಮಫ‌ಲಕ ಸಮರ್ಪಕವಾಗಿ ಹಾಕಬೇಕು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆ ಬಳಕೆಯಾಗುತ್ತಿದ್ದು, ಸಂವಹನ ನಡೆಸಲು ಕನ್ನಡಿಗರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಕನ್ನಡವನ್ನೂ ಬಳಕೆ ಮಾಡಬೇಕು.

Advertisement

ಬ್ಯಾಂಕುಗಳಲ್ಲಿ ಪರಭಾಷಿಗರ ನೌಕರರು ಹೆಚ್ಚಾಗಿದ್ದು, ಕನ್ನಡ ಬಳಕೆ ಮಾಡುತ್ತಿಲ್ಲ, ರಾಜಧಾನಿ ಬೆಂಗಳೂರಿಗೆ ಕನಕಪುರ ಮಾರ್ಗವಾಗಿ ಸಂಪರ್ಕ ರಸ್ತೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರಾಧ್ಯಾಪಕ ದೊಡ್ಡಲಿಂಗೇಗೌಡ ನಿರ್ಣಯಗಳನ್ನು ಮಂಡಿಸಿದರು. 

ವಿವಿಧ ಸಾಧಕರಿಗೆ ಸನ್ಮಾನ: ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ರಾಮಾಪುರ ರಾಜೇಂದ್ರ, ಮಾಂಬಳ್ಳಿ ಅರುಣ್‌ಕುಮಾರ್‌, ಪಾಳ್ಯ ಪುಟ್ಟಬಸಮ್ಮ, ಜಾಗೇರಿ ಪಳನಿಸ್ವಾಮಿ, ಮುಳ್ಳೂರು ಉಷಾರಾವ್‌, ಭಾರತೀಯ ಸೇನೆಯ ಹೂವಯ್ಯ, ಮಾರ್ಟಳ್ಳಿ ಸೇಸುನಾಥನ್‌, ಬಂಡಳ್ಳಿ ನಾಗಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಸಾಹಿತಿ ಹನೂರು ಚೆನ್ನಪ್ಪ, ಡಾ.ಶಿವರುದ್ರಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ, ಹನೂರು ವಲಯದ ಅಧ್ಯಕ್ಷ ಶ್ರೀನಿವಾಸ್‌ನಾಯ್ಕ, ಕನ್ನಡಪರ ಸಂಘಟನೆಗಳ ಮುಖಂಡರು ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next