Advertisement

ಮಕ್ಕಳ ಚಿತ್ರಕಲೆ-ಶಿಲ್ಪಕಲಾಕೃತಿ ಪ್ರೋತ್ಸಾಹಿಸಿ: ಶಾಸಕ ವಿರೂಪಾಕ್ಷಪ್ಪ

06:19 PM Aug 17, 2022 | Team Udayavani |

ಬ್ಯಾಡಗಿ: ವ್ಯಕ್ತಿಯ ಸೃಜನಾತ್ಮಕ ಕೌಶಲ್ಯ ಕಲ್ಪನೆಯ ಅಭಿವ್ಯಕ್ತಿ ಮತ್ತು ಭಾವನಾತ್ಮಕ ಶಕ್ತಿಗಾಗಿ ಚಿತ್ರಕಲೆ ಅಳವಡಿಸಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ದೃಶ್ಯ ರೂಪದಲ್ಲಿ ಚಿತ್ರಕಲೆ ಅಥವಾ ಶಿಲ್ಪಕಲೆಗಳಲ್ಲಿ ಮಕ್ಕಳ ಕೃತಿಗಳನ್ನು ನಾವೆಲ್ಲರೂ ಪ್ರಶಂಸಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

Advertisement

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಮುದ್ರಣಕಾರರ ಸಂಘದ ಆಶ್ರಯದಲ್ಲಿ 3 ರಿಂದ 6 ನೇ ತರಗತಿ(ಕಿರಿಯರ ವಿಭಾಗ) ಮತ್ತು 7 ರಿಂದ 10ನೇ ತರಗತಿ(ಹಿರಿಯರ ವಿಭಾಗ) ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಚಿತ್ರಕಲೆ, ಸಂಗೀತ, ಸಾಹಿತ್ಯ ಮತ್ತು ನೃತ್ಯದಂತಹ ಸೃಜನಶೀಲ ಚಟುವಟಿಕೆಗಳು ಕಲೆಯ ವಿವಿಧ ಶಾಖೆಗಳು ಹಾಗೂ ದೃಶ್ಯ ಕಲೆಯ ಪ್ರಕಾರಗಳಾಗಿವೆ. ಚಿತ್ರಕಲೆ ಎಂಬ ಪದ ಕೆತ್ತನೆ ಒಳಗೊಂಡ ಶಿಲ್ಪಕಲೆ ಹಾಗೂ ಕುಂಚವನ್ನು ಬಳಸಿ ಬಣ್ಣದೊಂದಿಗೆ ರಚಿಸುವ ಪ್ರಕಾರವಾಗಿದೆ. ಹೀಗಾಗಿ, ಚಿತ್ರಕಲೆಯನ್ನು ಕರಗತ ಮಾಡಿಕೊಂಡ ವ್ಯಕ್ತಿ ಸಾಮಾನ್ಯವಾಗಿ ಕಲಾವಿದನಾಗಿ ರೂಪುಗೊಳ್ಳುತ್ತಾನೆ ಎಂದರು.

ಅವನತಿಯತ್ತ ಹವ್ಯಾಸಿ ಚಿತ್ರಕಲೆ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ತಾಂತ್ರಿಕತೆಯಿಂದಾಗಿ ನೈಜ ಚಿತ್ರಕಲೆ ಮತ್ತು ಕಲಾವಿದರು ಕೂಡ ಅವನತಿಯತ್ತ ಸಾಗಿದ್ದಾರೆ. ಗ್ರಾμಕ್ಸ್‌ ಎಂಬ ವಸ್ತು ಇಂತಹ ಎಲ್ಲ ಕಲಾವಿದರಿಗೆ ನೆಲೆಯಿಲ್ಲದಂತೆ ಮಾಡಿದೆ. ನೈಜವಾದ ಚಿತ್ರಕಲೆ ರಚನೆ ಮಾಡುವವರು ಬಣ್ಣ ಮತ್ತು ಕುಂಚಗಳಿಂದ ದೂರ ಉಳಿಯುವಂತಾಗಿದೆ ಎಂದರು.

ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ್‌, ಮುಖಂಡರಾದ ಎಸ್‌.ಆರ್‌.ಪಾಟೀಲ, ನ್ಯಾಯವಾದಿ ಪ್ರಕಾಶ ಬನ್ನಿಹಟ್ಟಿ, ರೋಟರಿ ಸಂಸ್ಥೆ ಅಧ್ಯಕ್ಷ ಮಂಜುನಾಥ ಉಪ್ಪಾರ, ರೋ. ಮಹಾಂತೇಶ ಸುಂಕದ, ನವಚೈತನ್ಯ ಶಾಲೆ ಕಾರ್ಯದರ್ಶಿ ಬಿ.ಕೆ. ಶೇಖರಗೌಡ್ರ, ತಾಲೂಕು ಮುದ್ರಣಕಾರರ ಸಂಘದ ಅಧ್ಯಕ್ಷ ಗಿರೀಶ್‌ಸ್ವಾಮಿ ಇಂಡಿಮಠ ಇನ್ನಿತರರು ಉಪಸ್ಥಿತರಿದ್ದರು.

Advertisement

ಫಲಿತಾಂಶ: ಹಿರಿಯರ ವಿಭಾಗ(7ರಿಂದ10ನೇ ತರಗತಿ)ದಲ್ಲಿ ಪಟ್ಟಣದ ಎಸ್‌ಪಿಡಿಎಫ್‌ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ನಾಗರಾಜ ಗಾಜೇರ ಪ್ರಥಮ, ಗುಂಡೇನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ತುಕಾರಾಮ ನಾಯಕ್‌ ದ್ವಿತೀಯ ಹಾಗೂ ಪಟ್ಟಣದ ನವಚೈತನ್ಯ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಗೋಮಿನಿ ವಿಷ್ಣುಕಾಂತ್‌ ಬೆನ್ನೂರ ತೃತೀಯ ಸ್ಥಾನ ಪಡೆದುಕೊಂಡರು. ಕಿರಿಯರ ವಿಭಾಗದಲ್ಲಿ (3 ರಿಂದ 6ನೇ ತರಗತಿ) ಪಟ್ಟಣದ ನವಚೈತನ್ಯ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಪಿ.ಎಸ್‌.ಗೌತಮಿ ಪ್ರಥಮ, ಇದೇ ಶಾಲೆಯ ವರ್ಷಿತಾ ಮಹೇಶ ನಾಯಕ್‌ ದ್ವಿತೀಯ, ಶ್ರೀಲಕ್ಷ್ಮೀ ಮಾಲತೇಶ ಅಳಲಗೇರಿ ತೃತೀಯ ಸ್ಥಾನ ಪಡೆದುಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next