ಶ್ರೀನಗರ: ಜಮ್ಮು ಕಾಶ್ಮೀರದ ಪಂಥಾ ಚೌಕ್ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಮೃತಪಟ್ಟಿದ್ದಾರೆ. ಆದರೆ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದೆ.
ಶ್ರೀನಗರದ ಹೊರವಲಯದಲ್ಲಿ ಶನಿವಾರ ರಾತ್ರಿ ನಾಕಾಬಂದಿ ನಡೆಸುತ್ತಿದ್ದ ಪೊಲೀಸರು ಮತ್ತು ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ಆರಂಭಿಸಿದರು. ಕೂಡಲೇ ಪ್ರದೇಶವನ್ನು ಸುತ್ತುವರಿದ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಮತ್ತೆ ಉಗ್ರರು ದಾಳಿ ಆರಂಭಿಸಿದರು. ಅದಕ್ಕೆ ದಿಟ್ಟ ಉತ್ತರ ನೀಡಿದ ಪೊಲೀಸರು ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಸದೆಬಡಿದಿದ್ದಾರೆ.
ಪೊಲೀಸರು ಮತ್ತು ಸಿಆರ್ ಪಿಎಫ್ ಯೋಧರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಮೂವರನ್ನು ಹೊಡೆದುರುಳಿಸಿದ್ದಾರೆ. ಸದ್ಯ ಹೆಚ್ಚುವರಿ ಪಡೆ ಸ್ಥಳಕ್ಕೆ ಆಗಮಿಸಿ ಸುತ್ತುವರಿದಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ:ಒಂದು ಸ್ಪೂರ್ತಿಯ ಕಥೆ: ಕೋವಿಡ್-19 ಸೋಂಕಿನಿಂದ ಗುಣಮುಖರಾದ 110ರ ಅಜ್ಜಿ
ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಶುಕ್ರವಾರ ಎನ್ ಕೌಂಟರ್ ನಡೆದಿತ್ತು. ಹಿಜ್ ಬುಲ್ ಮುಜಾಹಿದ್ದೀನ್ ಸಂಘಟನೆಯ ಮೂವರು ಉಗ್ರರು ಹತ್ಯೆಯಾಗಿದ್ದು ಓರ್ವ ಯೋಧರು ಹುತಾತ್ಮರಾಗಿದ್ದಾರೆ.