Advertisement
ಸದ್ಯದ ಮಾಹಿತಿ ಪ್ರಕಾರ, ತಜ್ಞರು ನೀಡಬೇಕಾದ ಪೂರ್ಣ ಅಧ್ಯಯನ ವರದಿಯನ್ನು ಮೂಡಾಕ್ಕೆ ಸಲ್ಲಿಸದ ಕಾರಣ ಜಿಲ್ಲಾಡಳಿತಕ್ಕೆ ಸಲ್ಲಿಸುವ ಅಂತಿಮ ವರದಿ ತಡವಾಗಿದೆ ಎನ್ನಲಾಗಿದೆ. ಆದರೆ ಘಟನೆ ನಡೆದು ವರ್ಷವಾದರೂ ಅಂತಿಮ ವರದಿ ನೀಡಲು ಇನ್ನೂ ಸಾಧ್ಯವಾಗದಿರುವುದು ಇದೀಗ ಹಲವು ಪ್ರಶ್ನೆಗಳಿಗೂ ಕಾರಣವಾಗಿವೆ. ಚುನಾವಣೆ ಸಹಿತ ಇತರ ಕಾರ್ಯ ಒತ್ತಡದ ನೆಪದಿಂದಾಗಿ ಅಂತಿಮ ವರದಿ ತಡವಾಗಿದೆ ಎಂಬ ಅಭಿಪ್ರಾಯ ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆ ಸದ್ಯ ಕಾಡುತ್ತಿದೆ.
ಈ ಸಂಬಂಧ ಜೂ. 5ರಂದು ಈ ಸಮಿತಿಯು 27 ಪುಟಗಳ ಮಧ್ಯಾಂತರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿತ್ತು. ಪೂರ್ಣ ವರದಿಗೆ ಮತ್ತೆ ಹೆಚ್ಚುವರಿ ಸಮಯಾವಕಾಶ ನೀಡಲಾಗಿತ್ತು. ಮೂಡಾ ಆಯುಕ್ತರಾಗಿದ್ದ ಶ್ರೀಕಾಂತ್ ರಾವ್ ನೇತೃತ್ವದಲ್ಲಿ 4 ಮಂದಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಸಮಗ್ರ ವರದಿ ಸಿದ್ಧಗೊಳಿಸುತ್ತಿದ್ದರು. ಜತೆಗೆ ಪೂರ್ಣ ವರದಿ ತಯಾರಿಸಲು 4 ಮಂದಿ ಸಿಟಿ ಸರ್ವೆಯರ್‌ಗಳನ್ನು ನೇಮಕ ಮಾಡಲು ಜಿಲ್ಲಾಡಳಿತ ತಿಳಿಸಿತ್ತು. ಆ ವೇಳೆಗೆ ಚುನಾವಣೆ ಘೋಷಣೆಯಾಗಿ ಅಧಿಕಾರಿಗಳ ವರ್ಗಾವಣೆಯಾಯಿತು.
Related Articles
ಸಮಗ್ರ ವರದಿಗೆ ಎನ್‌ಐಟಿಕೆ ತಂತ್ರಜ್ಞರ ಸಹಕಾರವನ್ನು ಪಡೆದುಕೊಳ್ಳಲಾಗಿತ್ತು. ಅವರು “ಟೊಪೋಗ್ರಫಿ ನಕ್ಷೆ’ಯ ಸಹಾಯ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ತಾ.ಪಂ. ಅಧಿಕಾರಿಗಳ ಸಹಕಾರದಿಂದ ನಕ್ಷೆಯನ್ನು ಬೆಂಗಳೂರಿನಿಂದ ತರಿಸಿ ನೀಡಲಾಗಿತ್ತು. ಜತೆಗೆ, ರಾಜಕಾಲುವೆ ಸಾಗುವ ಹಾದಿಯ ಸರ್ವೆ ನಂಬರ್, ಇತರ ಮಾಹಿತಿಗಳನ್ನು ಸಮಿತಿ, ಎನ್‌ಐಟಿಕೆ ತಜ್ಞರ ಕಮಿಟಿಗೆ ನೀಡಲಾಗಿದೆ.
Advertisement
“ಚುನಾವಣೆ ಸಂಬಂಧ ಪ್ರಸ್ತುತ ನಾನು ಮೂಡಾ ಆಯುಕ್ತನಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದು, ರಾಜಕಾಲುವೆ ವರದಿ ಸಲ್ಲಿಸಿರುವ ಬಗ್ಗೆ ಹೆಚ್ಚಿನ ಮಾಹಿತಿ ನನ್ನಲ್ಲಿ ಸದ್ಯಕ್ಕಿಲ್ಲ. ಈ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಪಡೆದುಕೊಳ್ಳಲಾಗುವುದು’ ಎಂಬುದು ಪ್ರಸಕ್ತ ಮೂಡಾ ಪ್ರಭಾರ ಆಯುಕ್ತರಾಗಿರುವ ಪ್ರಮೀಳಾ ಅವರ ಅಭಿಪ್ರಾಯ. “ಪ್ರಾರಂಭಿಕ ವರದಿಯನ್ನು ಸಲ್ಲಿಸಲಾಗಿದ್ದು, ಅದರಂತೆ ಕೆಲವು ಒತ್ತುವರಿಯನ್ನು ಪಾಲಿಕೆಯು ಈಗಾಗಲೇ ತೆರವು ಮಾಡಿದೆ’ ಎನ್ನುವುದು ಸಮಿತಿಯ ಸದಸ್ಯೆ ಮನಪಾ ಕಂದಾಯ ವಿಭಾಗದ ಮುಖ್ಯಸ್ಥೆ ಗಾಯತ್ರಿ ನಾಯಕ್ ಅಭಿಪ್ರಾಯ.
ಕೆಲವು ಕಡೆಗಳಲ್ಲಿ ಒತ್ತುವರಿ ತೆರವುಜಿಲ್ಲಾಧಿಕಾರಿ ನೇಮಿಸಿದ ಸಮಿತಿಯು ಜಿಲ್ಲಾಧಿಕಾರಿ ಯವರಿಗೆ ಸಲ್ಲಿಸಿದ ಮಧ್ಯಾಂತರ ವರದಿಯಲ್ಲಿ ನಗರದ ಕೆಲವು ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ಆಗಿದೆ ಎಂಬುದನ್ನು ಬೊಟ್ಟು ಮಾಡಿ ತಿಳಿಸಿತ್ತು. ಇದನ್ನು ಅದಾಗಲೇ ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಪಾಲಿಕೆ ಕೆಲವು ಒತ್ತುವರಿಯನ್ನು ತೆರವು ಮಾಡಿದ್ದರು. ಹೀಗಾಗಿ ಅಂತಿಮ ವರದಿ ಬಂದ ಬಳಿಕ ಇನ್ನಷ್ಟು ಒತ್ತುವರಿಗೆ ಬ್ರೇಕ್ ಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣದ ನೆಪದಿಂದ ವರದಿ ಮಾತ್ರ ತಡವಾಗುತ್ತಲೇ ಇದೆ! - ದಿನೇಶ್ ಇರಾ