ಬೆಂಗಳೂರು: ನಗರದಲ್ಲಿ ಮಳೆ ನೀರು ಕಾಲುವೆ ಒತ್ತುವರಿ ತೆರುವು ಕಾರ್ಯ ಪ್ರಗತಿಯಲ್ಲಿದ್ದು, ಇಲ್ಲಿವರೆಗೆ 500 ಕಡೆ ಒತ್ತುವರಿಯಾಗಿದ್ದ ಮಳೆ ನೀರು ಕಾಲುವೆ ಜಾಗವನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಮಂಗಳವಾರ ಮಾಹಿತಿ ನೀಡಿದೆ.
ಈ ಕುರಿತಂತೆ ಸಿಟಿಜನ್ ಆ್ಯಕ್ಷನ್ ಗ್ರೂಪ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾ. ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಬಿಬಿಎಂಪಿ ಈ ಮಾಹಿತಿ ನೀಡಿತು.
ನಗರದಲ್ಲಿ ಮಳೆನೀರು ಗಾಲುವೆಗೆ ಒಳಚರಂಡಿಯ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಮಳೆ ನೀರು ಕಾಲುವೆ ಮೂಲಕ ಒಳಚರಂಡಿ ನೀರು ಕೆರೆಯನ್ನು ಸೇರಿ, ನೀರು ಕಲುಷಿವಾಗುತ್ತಿದೆ. ಇದರಿಂದ ಮಳೆನೀರು ಕಾಲುವೆ ಮತ್ತು ಒಳಚರಂಡಿಯನ್ನು ಪ್ರತ್ಯೇಕಗೊಳಿಸಬೇಕು.
ಈಗಾಗಲೇ ಕಲುಷಿತಗೊಂಡಿರುವ ಕರೆಯನ್ನು ಪುನರುಜ್ಜೀವನಗೊಳಿಸಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಸಿಟಿಜನ್ ಆ್ಯಕ್ಷನ್ ಗ್ರೂಪ್ ಅರ್ಜಿಯಲ್ಲಿ ಕೋರಿದೆ. ವಿಚಾರಣೆ ವೇಳೆ ನಗರ ವ್ಯಾಪ್ತಿಯಲ್ಲಿ 500 ಕಡೆ ಒತ್ತುವರಿಯಾಗಿದ್ದ ಮಳೆನೀರು ಕಾಲುವೆ ಜಾಗವನ್ನು ತೆರವುಗೊಳಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಈ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠ, ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರದ ಸ್ವತ್ತಿನಲ್ಲಿ ಒತ್ತುವರಿಯಾಗಿರುವ ಮಳೆ ನೀರು ಕಾಲುವೆ ಜಾಗವನ್ನು ಸರ್ವೇ ನಡೆಸಿ ಅದರ ಮಾಹಿತಿಯನ್ನು ಪಾಲಿಕೆಗೆ ನೀಡುವಂತೆ ಸರ್ವೇ ಇಲಾಖೆಗೆ ನಿರ್ದೇಶಿಸಿತು. ವಿಚಾರಣೆಯನ್ನು ಜೂನ್ ಎರಡನೆ ವಾರಕ್ಕೆ ಮುಂದೂಡಿತು.