ಇಂಚಗೇರಿ: ಸುಮಾರು 10 ವರ್ಷಗಳಿಂದ ಮುಂಗಾರು ಹಿಂಗಾರು ಮಳೆಗಳಿಲ್ಲದೇ ರೈತ ಭೀಕರ ಬರಗಾಲ ಎದುರಿಸುವಂತಾಗಿತ್ತು. ಜಾನುವಾರುಗಳಿಗೆ ಮೇವಿನ ನೀರಿನ ಕೊರತೆಯಿಂದ ಬರ ಬರುತ್ತಾ ಕೃಷಿ ಸಾಗುವಳಿ ಕಡಿಮೆಯಾಗುತ್ತಾ ಸಾಗಿತ್ತು.
ಹಲವಾರು ರೈತರು ತಮ್ಮ ಜಾನುವಾರುಗಳನ್ನು ಸಂತೆ ಜಾತ್ರೆಯಲ್ಲಿ ಮಾರಾಟ ಮಾಡಿ ಕೂಲಿ, ನಾಲಿ ಮಾಡಿ ಜೀವನ ಸಾಗಿಸುವಂತಾಗಿದೆ. ಇನ್ನೂ ಕೆಲ ರೈತರು ಸಾಲ ಸೂಲದಿಂದ ತತ್ತರಿಸಿ ಅದನ್ನು ಭರಿಸಲಾಗದೇ ಇದ್ದ ಜಮೀನುಗಳನ್ನು ಮಾರಾಟ ಮಾಡಿ ಹೊಟ್ಟೆ ಪಾಡಿಗಾಗಿ ಗುಳೆ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ.
ಸಿದ್ಧರ ಹೇಳಿಕೆ ಸತ್ಯ: ಸಿದ್ಧಿ ಪುರುಷರು ಈ ಸಲ ಮಳೆ ಬೆಳೆ ಬಗ್ಗೆ ದೇವರ ಅವತಾರದಲ್ಲಿ ನುಡಿ ಮುತ್ತುಗಳನ್ನು ಹೇಳಿ, ಈ ಸಲ ಮುಂಗಾರು ಹಿಂಗಾರು ಎಲ್ಲ ಮಳೆಗಳು ಸಂಪೂರ್ಣ ಕೊಟ್ಟು ರೈತರಿಗೆ ಸುಕಾಲ ಎಂದು ಹೇಳಿದ್ದನ್ನು ನಾವು ಸ್ಮರಿಸಬಹುದಾಗಿದೆ. ಮುಂಗಾರು ಮಳೆಗಳು ಎಲ್ಲ ಕಡೆಗೆ ಸಂಪೂರ್ಣವಾಗಿ ರೈತನ ಕೈ ಬಲಪಡಿಸಿವೆ. ಹದವಾದ ಜಮೀನುಗಳಲ್ಲಿ ಬಿತ್ತನೆಗೆ ಬೇಕಾಗುವ ತೇವಾಂಶ ಕೊಟ್ಟು ಅವನಿಗೆ ಉತ್ಸಾಹ ತುಂಬಿರುವವು. ರೈತ ಆನಂದದಿಂದ ಬಿತ್ತನೆಯ ಕಾರ್ಯದಲ್ಲಿ ತೊಡಗಿದ್ದಾನೆ.
ಬಿತ್ತನೆ ಕಾರ್ಯ: ಮುಂಗಾರು ಮಳೆಗಳು ಕೃಷಿಗೆ ಸಾಕಷ್ಟು ಆಗಮಿಸಿದ್ದರಿಂದ ರೈತನು ತಮ್ಮ ಜಮೀನಿನಲ್ಲಿ ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾನೆ. ಮುಂಗಾರು ಬೆಳೆಗಳಾದ ಶೇಂಗಾ, ತೊಗರಿ, ಮೆಕ್ಕೆಜೋಳ, ಹುರಳಿ, ಮಟಕಿ, ಸಜ್ಜೆ ಮುಂತಾದವುಗಳನ್ನು ಬಿತ್ತನೆ ಮಾಡುತ್ತಿದ್ದಾನೆ. ಬಿತ್ತನೆಯಾದ ಮೂರು-ನಾಲ್ಕು ದಿವಸಗಳಲ್ಲಿ ಮತ್ತೂಮ್ಮೆ ಮಳೆಯಾದರೆ ರೈತನ ಕೈ ಹಿಡಿಯುವವರು ಯಾರಿಲ್ಲ.
ಮಳೆಗಳು ಸಂಪೂರ್ಣವಾಗಿದ್ದು ಹದವಾದ ಜಮೀನುಗಳಲ್ಲಿ ದನ ಕರುಗಳಿಗೆ ಮೇವಿನ ಕೊರತೆಯಾಗುವುದಿಲ್ಲ. ಹೀಗೆ ಮೇಲಿಂದ ಮೇಲೆ ಮಳೆ ಬಂದರೆ ಹಳ್ಳಕೊಳ್ಳಗಳು ತುಂಬಿ ಹರಿಯುವವು. ನೀರಿಲ್ಲದ ಬಾವಿಗಳಿಗೆ ಬೋರ್‌ವೆಲ್ಗಳಿಗೆ ನೀರು ಬರುವುದುಂಟು. ಮತ್ತೆ ರೈತ ಇನ್ನು ಹೆಚ್ಚಿನ ಫಲವತ್ತಾದ ಬೆಳೆಗಳನ್ನು ಬೆಳೆಯಲಿಕ್ಕೆ ಸಹಾಯಕಾರಿಯಾಗಲಿದೆ.