ಇಂಚಗೇರಿ: ಜಿಗಜೇವಣಿ ಗ್ರಾಮದಲ್ಲಿ ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನ ಹರಸಾಹಸ ಪಡುತ್ತಿದ್ದಾರೆ. ದಲಿತ ಓಣಿಯಲ್ಲಿ 3 ಕೈ ಪಂಪು ಇದ್ದು, ಅವು ರಿಪೇರಿಗಾಗಿ ಕಾಯುತ್ತಿದ್ದು ಅಲ್ಪ ಸ್ವಲ್ಪ ನೀರು ಬರುತ್ತಿವೆ. ನೀರಿಗಾಗಿ ಹಗಲಿರುಳು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲ ಮಟ್ಟ ಕುಸಿದಿದ್ದರಿಂದ ರಿಪೇರಿಗೆ ಬಂದ ಕೈ ಪಂಪುಗಳಿಗೆ ಪೈಪ್ ಅಳವಡಿಸಿದರೆ ಬೇಸಿಗೆಯಿಂದ ಪಾರಾಗಬಹುದು ಎಂಬುದು ಗ್ರಾಮಸ್ಥರ ಅನಿಸಿಕೆ.
ಕೈ ಪಂಪುಗಳ ರಿಪೇರಿಗಾಗಿ ಗ್ರಾಮದ ನಾಗರಿಕರು ಗ್ರಾಪಂಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಗೋಳು ಕೇಳುವವರಿಲ್ಲ. ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೊಳ್ಳಬೇಕೆಂದು ದಲಿತ ಓಣಿಯ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.
ನೀರಿನ ಘಟಕ ಆರಂಭಿಸಿ: ದಲಿತರ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಶುದ್ಧ ನೀರಿನ ಘಟಕ ಪ್ರಾರಂಭವಾಗಿ ಸುಮಾರು ವರ್ಷಗಳೇ ಗತಿಸಿವೆ. ಆದರೂ ಇನ್ನೂವರೆಗೂ ಕಾರ್ಯ ಪ್ರಾರಂಭವಾಗಿಲ್ಲ. ಅದರ ಪಕ್ಕದಲ್ಲಿಯೇ ಒಂದು ಬೋರ್‌ವೆಲ್ ಇದ್ದು ಅದಕ್ಕೆ ಸಂಪೂರ್ಣ ನೀರು ಇರುತ್ತದೆ. ಅದಕ್ಕೆ ವಿದ್ಯುತ್ ಸಂಪರ್ಕ ಕೊಟ್ಟರೆ ಗ್ರಾಮಸ್ಥರ ನೀರಿನ ತೊಂದರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಇದನ್ನು ಹಲವಾರು ಬಾರಿ ಪಿಡಿಒಗೆ ತಿಳಿಸಿದರೂ ಸ್ಪಂದಿಸಿಲ್ಲ. ಇದರಿಂದ ಶಾಲೆ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ ಮನೆಗೆ ನೀರು ಕುಡಿಯಲು ಹೋಗುವ ಪ್ರಸಂಗ ಬಂದಿದೆ.
ಜಿಗಜೇವಣಿ ಗ್ರಾಮದ ಸುತ್ತಮುತ್ತಲಿನ ತೋಟಗಳಲ್ಲಿಯೂ ಸಹ ಸುತ್ತಾಡಿದರೂ ಹನಿ ನೀರು ಸಿಗದಂತಾಗಿದೆ. ಸುಮಾರು 3-4 ಕಿ.ಮೀ. ನೀರನ್ನು ಹುಡುಕುತ್ತ ಹೊಗುವ ಸಂದರ್ಭ ಬಂದಿದೆ. ನೀರಿಗಾಗಿ ದಿನಂಪ್ರತಿ ಕಚ್ಚಾಟ ತಪ್ಪಿದ್ದಲ್ಲ. ಇದಕ್ಕೆ ಪರಿಹಾರ ನೀಡಬೇಕೆಂದು ದಾನಮ್ಮ ಧನ್ಯಾಳ, ಸಾಗರ ಶಿವಶರಣ, ದುಂಡಪ್ಪ ವಾಲೀಕಾರ, ಮಲ್ಲಪ್ಪ ಡೋಣಿ, ಆನಂದ ಶಿವಶರಣ, ಜಯವ್ವ ಶಿವಶರಣ, ರೇವುಬಾಯಿ ಶಿವಶರಣ, ಸಂಗವ್ವ ಡೋಣಿ, ಮಲ್ಲವ್ವ ಶಿವಶರಣ, ಲಕ್ಷ್ಮೀಬಾಯಿ ಡೋಣಿ, ಸುನೀಲ ಧನ್ಯಾಳ, ಉಮೇಶ ಕಡ್ಡೆ, ಆಕಾಶ ಧನ್ಯಾಳ, ವಿಲಾಸ ಶಿವಶರಣ, ಲಾಯವ್ವ ಘೋಣಸಗಿ, ಸರದಾರ ಧನ್ಯಾಳ ಆಗ್ರಹಿಸಿದ್ದಾರೆ.
ಹಲವಾರು ಬಾರಿ ಗ್ರಾಪಂಗೆ ನಮ್ಮ ಕೇರಿಯ ನೀರಿನ ಸಮಸ್ಯೆ ಬಗ್ಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನಮ್ಮ ದಲಿತರ ಕಾಲೋನಿಯಲ್ಲಿ ಶೀಘ್ರದಲ್ಲಿಯೇ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು. ಇದರಿಂದ ಸ್ವಲ್ಪ ಮಟ್ಟಿಗಾದರೂ ನೀರಿನ ಬವಣೆ ತಪ್ಪಿದಂತಾಗುತ್ತದೆ.
•
ಸಾಗರ ಶಿವಶರಣ, ಗ್ರಾಮಸ್ಥ
ನಮಗ ಏನೂ ಬ್ಯಾಡ್ರಿ ಮೊದಲ ಕುಡ್ಯಾಕ ನೀರ ಕೊಡ್ರಿ. ನಮ್ಮ ಮನಿ ಕೆಲಸ ಬಿಟ್ಟು ನೀರಿಗಾಗಿ ಸುತ್ತಾಡೋದು ಬಂದೈತಿ. ಈ ತಾಪತ್ರಯದಿಂದ ನಮ್ಮನ್ನ ಪಾರು ಮಾಡಿರಿ. ಬೇಸಿಗೆಯಲ್ಲಿ ಇದರ ಖಾಯಂ ಯೋಜನೆ ಮಾಡಿ ನಮ್ಮ ಸಮಸ್ಯೆ ಬಗೆಹರಿಸಿರಿ. ಇನ್ನೂ 1 ತಿಂಗಳು ಹೇಗೆ ಕಳೆಯುವದು ತಿಳಿದಂಗಾಗೇತಿ. •
ದಾನಮ್ಮ ಧನ್ಯಾಳ, ಗ್ರಾಮದ ಮಹಿಳೆ