Advertisement

ನಾಡೋಜ ಏಣಗಿ ಬಾಳಪ್ಪ ಚಿರಸ್ಥಾಯಿ ಇಂದು ಅಂತ್ಯಕ್ರಿಯೆ

05:55 AM Aug 19, 2017 | Team Udayavani |

ಬೆಳಗಾವಿ/ಸವದತ್ತಿ: ಹಿರಿಯ ರಂಗಭೂಮಿ ಕಲಾವಿದ, ನಾಡೋಜ, ನಾಟ್ಯಭೂಷಣ ಶತಾಯುಷಿ ಏಣಗಿ ಬಾಳಪ್ಪ(104) ಅವರು ಶುಕ್ರವಾರ ಸ್ವಗ್ರಾಮ ಸವದತ್ತಿ ತಾಲೂಕಿನ ಏಣಗಿಯಲ್ಲಿ ವಿಧಿ ವಶರಾದರು.

Advertisement

ವೃತ್ತಿ ರಂಗಭೂಮಿಯಲ್ಲಿ ಹಲವು ದಶಕಗಳ ಕಾಲ ಕಾರ್ಯನಿರ್ವಹಿಸಿ “ಏಣಗಿ ಬಾಳಪ್ಪ’ ಎಂದೇ ಖ್ಯಾತರಾಗಿದ್ದ ಅವರು, ಕಳೆದ ನಾಲ್ಕು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಬೆಳಗ್ಗೆ 11 ಗಂಟೆಗೆ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ದಿ. ಪತ್ನಿ ಸಾವಿತ್ರಮ್ಮ ಅವರ ಸಮಾಧಿ  ಪಕ್ಕ ಅಂತ್ಯಕ್ರಿಯೆ ನೆರವೇರಲಿದೆ.

ಕರಿಬಸಪ್ಪ-ಬಾಳಮ್ಮ ಲೋಕೂರ ದಂಪತಿಯ ಪುತ್ರರಾಗಿ ಅವರು ಜನಿಸಿದಾಗ ಕುಟುಂಬ ಆರ್ಥಿಕವಾಗಿ ಸದೃಢವಾಗಿರಲಿಲ್ಲ. ಒಕ್ಕಲುತನ ಮನೆತನದ ಉದ್ಯೋಗವಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಬಾಳಪ್ಪ ತಂದೆಯನ್ನು ಕಳೆದುಕೊಂಡರು. ಆದರೆ ಬಡತನ ಅವರ ಸಾಧನೆಗೆ ಅಡ್ಡಿಯಾಗಲಿಲ್ಲ. ಬದಲಾಗಿ ನಟನೆ ಅವರ ಬಾಲ್ಯದ ನಂಟಾಯಿತು.

ಎಂಟರ ಹರೆಯದಲ್ಲೇ ಆಕಸ್ಮಿಕವಾಗಿ ಸಿಕ್ಕ ಅವಕಾಶ ಬಳಸಿಕೊಂಡ ಅವರು ಗಣಪತಿಯ ಪಾತ್ರ ನಿರ್ವಹಿಸುವ ಮೂಲಕ ರಂಗಭೂಮಿ ಪ್ರವೇಶಿಸಿದ್ದರು. ಅಂದಿನಿಂದ ಒಂಭತ್ತು ದಶಕಗಳ ಕಾಲ ಹಿಂತಿರುಗಿ ನೋಡಿದ್ದೇ ಇಲ್ಲ. ನಡೆದಾಡುವ ರಂಗಭೂಮಿ ಎಂದೇ ಹೆಸರಾಗಿದ್ದ ಬಾಳಪ್ಪನವರು ನಟರಾಗಿ, ನಾಟಕ ರಚನೆಕಾರರಾಗಿ, ನಿರ್ದೇಶಕರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಮೊದಲಿಗೆ ಇತರರ ತಂಡಗಳಲ್ಲಿ ನಾಟಕ ಕಲಾವಿದರಾಗಿದ್ದ  ಅವರು ನಂತರ ತಮ್ಮದೇ ಆದ ಸ್ವತಂತ್ರ ತಂಡ ರಚಿಸಿ ಬೆಳೆಸಿದರು. ನೂರಾರು ನಾಟಕ ರಚಿಸಿದರೂ ಅದರಲ್ಲಿ ಜಗಜ್ಯೋತಿ ಬಸವೇಶ್ವರ ನಾಟಕದ ಬಸವೇಶ್ವರರ ಪಾತ್ರದಿಂದ ಕನ್ನಡ ಜನಮಾನಸದಲ್ಲಿ ಪ್ರಸಿದ್ಧರಾಗಿದ್ದರು.

ಬಾಳಪ್ಪನವರು 432ಕ್ಕೂ ಅಧಿಕ ನಾಟಕ 123 ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಜಾನಪದ, ವೃತ್ತಿ, ಹವ್ಯಾಸಿ ಈ ಮೂರು ನೆಲೆಗಳ ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸಿರುವ ಬಾಳಪ್ಪ ಇಡೀ ವೃತ್ತಿ ರಂಗಭೂಮಿಗೆ ಚಾರಿತ್ರಿಕ ಮಹತ್ವ ತಂದು ಕೊಡಲು ಶ್ರಮಿಸಿದ್ದರು. ಸಾವಿತ್ರಮ್ಮ, ಲಕ್ಷ್ಮೀದೇವಿ ಸೇರಿದಂತೆ ಇಬ್ಬರು ಪತ್ನಿಯರು, ಐವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಹೊಂದಿದ್ದ ಬಾಳಪ್ಪ ನಾಲ್ಕೈದು ವರ್ಷಗಳಿಂದ ಏಣಗಿಯಲ್ಲಿಯೇ ವಾಸವಾಗಿದ್ದರು. ಪತ್ನಿ ಸಾವಿತ್ರಮ್ಮ ಮತ್ತು ಮಗ ಖ್ಯಾತ ಕಲಾವಿದ ಏಣಗಿ ನಟರಾಜ ಈಗಾಗಲೇ ನಿಧನ ಹೊಂದಿದ್ದಾರೆ. ಶತಾಯುಷಿ ಅಜ್ಜನನ್ನು ಕಳೆದುಕೊಂಡಿರುವ ಏಣಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next