Advertisement

ಖಾಲಿ ನಿವೇಶನ; ನಗರಸಭೆ ಹೊಸ ಪ್ಲ್ಯಾನ್

01:07 PM Oct 29, 2019 | Suhan S |

ಕೊಪ್ಪಳ: ನಗರ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಹೆಚ್ಚುತ್ತಿರುವುದನ್ನು ನಿಯಂತ್ರಣಕ್ಕೆ ತರಲು ನಗರಸಭೆಯು ಹೊಸದೊಂದು ಪ್ಲ್ಯಾನ್ ಮಾಡಿದೆ. 30 ದಿನದಲ್ಲಿ ಖಾಲಿ ನಿವೇಶನ ಸ್ವಚ್ಛ ಮಾಡದೇ ಇದ್ದರೆ ಮಾಲೀಕರಿಗೆ ದಂಡದ ಜೊತೆಗೆ ಬಡ್ಡಿ, ಚಕ್ರಬಡ್ಡಿ ಹಾಕಿ ವಸೂಲಿ ಮಾಡುವ ಎಚ್ಚರಿಕೆ ನೀಡಿದೆ.

Advertisement

ಹೌದು.. ನಗರ ವ್ಯಾಪ್ತಿಯಲ್ಲಿ ದಶಕಗಳಿಂದಲೂ ನೂರಾರು ಲೇಔಟ್‌ ನಿರ್ಮಾಣವಾಗಿವೆ. ಆದರೆ ಉಳ್ಳವರು ನಿವೇಶನಗಳನ್ನು ಖರೀದಿ ಮಾಡಿ ಮನೆಗಳನ್ನು ನಿರ್ಮಿಸದೇ ಹಾಗೆ ಖಾಲಿ ಬಿಟ್ಟಿದ್ದಾರೆ. ಇದರಿಂದ ನಿವೇಶನದಲ್ಲಿ ಮಳೆ, ಚರಂಡಿ ನೀರು ನಿಂತು, ಜಾಲಿಗಿಡ, ಮುಳ್ಳಿನ ಪೊದೆಗಳು ಬೆಳೆದು ಸುತ್ತಲಿನ ಪರಿಸರ ಹಾಳು ಮಾಡಿ, ಸ್ಥಳೀಯರಿಗೆ ಕಿರಿಕಿರಿಯಾಗುತ್ತಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿವೆ. ಮಳೆಯ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಆರೋಗ್ಯ ಇಲಾಖೆ ಹೇಳುತ್ತಿದ್ದರೂ ಖಾಲಿ ನಿವೇಶನಗಳಲ್ಲಿ ಸೊಳ್ಳೆಗಳು ಹೆಚ್ಚುತ್ತಿವೆ.

ಇದರಿಂದ ವೃದ್ಧರು, ಗರ್ಭಿಣಿಯರು ಮಕ್ಕಳಿಗೆ ನಿತ್ಯವೂ ಒಂದಿಲ್ಲೊಂದು ಜ್ವರ ಬಾಧೆ ಕಾಣಿಸಿಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಈ ಕುರಿತು ಹಲವು ವಾರ್ಡ್‌ ನಿವಾಸಿಗಳು ನಗರಸಭೆಗೆ ಮನವಿ ಮಾಡಿ ಚರಂಡಿ, ಖಾಲಿ ನಿವೇಶನಗಳ ಸ್ವತ್ಛತೆಗೆ ದಿಟ್ಟ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಒತ್ತಾಯಿಸಿವೆ. ಈ ಹಿಂದೆ ನಗರಸಭೆ ಖಾಲಿ ನಿವೇಶನಗಳ ಮಾಲೀಕರಿಗೆ ಹಲವು ಬಾರಿ ನೋಟಿಸ್‌ ಕೊಟ್ಟರೂ ಅವರು ಕ್ಯಾರೇ ಎಂದಿಲ್ಲ. ಇದರಿಂದ ಬೇಸತ್ತ ನಗರಸಭೆ ಪರ್ಯಾಯ ಮಾರ್ಗಕ್ಕೆ ಮುಂದಾಗಿದೆ.

ಸ್ವಚ್ಛಗೊಳಿಸದಿದ್ದರೆ ಬಡ್ಡಿ+ಚಕ್ರಬಡ್ಡಿ: ನಗರ ವ್ಯಾಪ್ತಿಯಲ್ಲಿ ಮನೆಗಳು ಇರುವ ಸುತ್ತಮುತ್ತ ಖಾಲಿ ನಿವೇಶನಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳದೇ ಇರುವ ನಿವೇಶನ ಮಾಲೀಕರಿಗೆ ಬಿಸಿ ಮುಟ್ಟಿಸಲು ನಗರಸಭೆ ದಂಡ ವಸೂಲಿ ಜೊತೆಗೆ ಬಡ್ಡಿ+ಚಕ್ರ ಬಡ್ಡಿ ದಾಳ ಉರುಳಿಸಿದೆ. ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 248ರ ಪ್ರಕಾರ ಖಾಲಿ ನಿವೇಶನಗಳನ್ನು ಗುರುತಿಸಿ ನಗರಸಭೆಯಿಂದಲೇ ಅವುಗಳನ್ನು ಸ್ವಚ್ಛಗೊಳಿಸಿ, ಸ್ವತ್ಛತಾ ಕಾರ್ಯಕ್ಕೆ ತಗುಲುವ ವೆಚ್ಚವನ್ನು ಲೆಕ್ಕ ಮಾಡಿ ಅದನ್ನು ನಿವೇಶನಗಳ ಮಾಲೀಕರಿಂದ ವಸೂಲಿ ಮಾಡುವ ಜೊತೆಗೆ ಆ ಹಣ ನೀಡದಿದ್ದರೆ ಲೆಕ್ಕಾಚಾರದ ಪ್ರಕಾರ ವರ್ಷಕ್ಕೆ ಇಂತಿಷ್ಟು ಬಡ್ಡಿ ಎಂದು ನಿಗದಿ  ಮಾಡುವುದು. ವೆಚ್ಚ ಕಟ್ಟದಿದ್ದರೆ ಬಡ್ಡಿ ಹಾಗೂ ಚಕ್ರ ಬಡ್ಡಿ ಹಾಕಿ ವಸೂಲಿ ಮಾಡುವುದಾಗಿ ಎಚ್ಚರಿಕೆ ನೀಡಿದೆ.

14230 ನಿವೇಶನ: ನಗರ ವ್ಯಾಪ್ತಿಯಲ್ಲಿ 14230 ಖಾಲಿ ನಿವೇಶನಗಳಿವೆ. ಇದರಲ್ಲಿ ಎಲ್ಲ ಲೇಔಟ್‌ ಗಳ ನಿವೇಶನವೂ ಒಳಗೊಂಡಿವೆ. ಆದರೆ ಕನಿಷ್ಟ 6-7 ಸಾವಿರ ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತ ಮುಳ್ಳಿನ ಪೊದೆ, ತ್ಯಾಜ್ಯ, ಚರಂಡಿ ನೀರನ್ನು ತೆರವು ಮಾಡಿ ಸಾಂಕ್ರಾಮಿಕರೋಗ ನಿಯಂತ್ರಣ ಮಾಡಲೇಬೇಕಿದೆ ಎಂದು ಆರೋಗ್ಯ ಇಲಾಖೆ ನಿರಂತರವಾಗಿ ಹೇಳುತ್ತಿದೆ. ಆದರೆ ನಿವೇಶನಗಳ ಮಾಲೀಕರು ಇದ್ಯಾವುದನ್ನು ಕಿವಿಗೆ ಹಾಕಿಕೊಂಡಿಲ್ಲ. ಹಾಗಾಗಿ ನಗರಸಭೆ ಬಡ್ಡಿ, ಚಕ್ರಬಡ್ಡಿಯ ದಾಳಕ್ಕೆ ಮುಂದಾಗಿದೆ.

Advertisement

ನಗರಸಭೆ 30 ದಿನದೊಳಗೆ ಖಾಲಿ ನಿವೇಶನ ಸ್ವಚ್ಛತೆಗೆ ಮಾಲಿಕರಿಗೆ ನೋಟಿಸ್  ನೀಡುತ್ತದೆ. ಅಷ್ಟರೊಳಗೆ ಸ್ವಚ್ಛಗೊಳಿಸದಿದ್ದರೆ ಮತ್ತೆ 15 ದಿನ ಸಮಯ ನೀಡುತ್ತದೆ. ಅದಕ್ಕೂ ಸ್ಪಂದಿಸದಿದ್ದರೆ ನಗರಸಭೆಯೇ ನಿವೇಶನ ಸ್ವಚ್ಛ ಮಾಡುವ ವೆಚ್ಚದ ಯೋಜನೆ ರೂಪಿಸಿ ಸ್ವತ್ಛ ಮಾಡಿ ನೋಟಿಸ್‌ ಹೊರಡಿಸುತ್ತದೆ. ಸ್ವಚ್ಛ ಮಾಡಿದ ಹಣವನ್ನು ನಿವೇಶನ ಮಾಲೀಕರಿಂದ ಬಡ್ಡಿ, ಚಕ್ರಬಡ್ಡಿ ಸಮೇತ ವಸೂಲಿಗೆ ಯೋಜನೆ ಹಾಕಿದೆ. ಜೊತೆಗೆ ಜೊತೆಗೆ ನಿವೇಶನಗಳಲ್ಲಿ ಭೋಜಾ ಕೂಡಿಸುವ ಪ್ರಯತ್ನಕ್ಕೂ ನಗರಸಭೆ ಮುಂದಾಗಿದೆ.

ಒಟ್ಟಿನಲ್ಲಿ ನಗರವನ್ನು ಸುಂದರವನ್ನಾಗಿಡಲು ಕೊಪ್ಪಳ ನಗರಸಭೆಯು ನೂರೆಂಟು ಪ್ರಯತ್ನ ಮಾಡುತ್ತಿದೆ. ಆದರೆ ಇದಲ್ಲಿ ಏಷ್ಟರ ಮಟ್ಟಿಗೆ ಯಶಸ್ವಿ ಕಾಣಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ನಿವೇಶನ ಮಾಲೀಕರು ಇದಕ್ಕೆ ಸ್ಪಂದಿಸುತ್ತಾ ಎನ್ನುವುದನ್ನು ಕಾಯದು ನೋಡಬೇಕಿದೆ.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next