Advertisement
ಹೌದು, ರಾಜ್ಯಾದ್ಯಂತ ಮೇ 10 ಕ್ಕೆ ನಿಗದಿಯಾಗಿರುವ ವಿಧಾನಸಭಾ ಚುನಾವಣೆಯ ಪರಿಣಾಮ ಈಗ ಜಿಲ್ಲಾದ್ಯಂತ ಸರ್ಕಾರಿ ಅಧಿಕಾರಿಗಳು, ನೌಕರರು ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿರುವುದರಿಂದ ಕಚೇರಿಗಳು ಸಾರ್ವಜನಿಕರಲ್ಲದೇ ಬೀಕೋ ಎನ್ನುತ್ತಿದ್ದು, ಸಮಸ್ಯೆ ಹೊತ್ತು ಬರುವ ಸಾರ್ವಜನಿಕರಿಗೆ ಅಧಿಕಾರಿಗಳ ದರ್ಶನ ಆಗದೇ ಬರಿಗೈಯಲ್ಲಿ ವಾಪಸ್ ಹೋಗುವಂತಾಗಿದೆ.
Related Articles
Advertisement
ಕಚೇರಿ ಬಾಗಿಲುಗಳ ಮೇಲೆ ಸಹಕರಿಸುವಂತೆ ಕೋರುವ ಫಲಕಗಳು!: ನಮ್ಮ ಕಚೇರಿಯ ಸಾಹೇಬರು, ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸಂಪೂರ್ಣವಾಗಿ ಚುನಾವಣಾ ಕಾರ್ಯದಲ್ಲಿಯೇ ಮಗ್ನ ಆಗಿರುವುದರಿಂದ ಚುನಾವಣೆ ಮುಗಿಯುವರೆಗೂ ಸಾರ್ವಜನಿಕರ ಸೇವೆಗಳಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ದಯವಿಟ್ಟು ಸಾರ್ವಜನಿಕರು, ರೈತರು ಸಹಕರಿಸಬೇಕು. ಹೀಗೆಂಬ ವಿನಂತಿ ಮಾಡುವ ನಾಮಫಲಕ ಹಾಕಿರುವುದು ಪ್ರತಿ ಕಚೇರಿ ಕಟ್ಟಡ, ಬಾಗಿಲುಗಳ ಮೇಲೆ ಅಂಟಿಸಲಾಗಿದೆ.
ಬಿಕೋ ಎನ್ನುತ್ತಿರುವ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನ: ಜಿಲ್ಲೆಯ ಆಡಳಿತದ ಶಕ್ತಿ ಕೇಂದ್ರವಾಗಿರುವ ಜಿಲ್ಲಾಡಳಿತ ಭವನಕ್ಕೂ ಈಗ ಚುನಾವಣೆ ಬಿಸಿ ತಟ್ಟಿದ್ದು, ಬಹುತೇಕ ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ವಿವಿಧ ಹೊಣೆಗಳನ್ನು ಹೊತ್ತು ಕಾರ್ಯನಿರ್ವಹಿಸುತ್ತಿರುವುದರಿಂದ ಕಚೇರಿಗಳು ಬಾಗಿಲು ತೆರೆದಿದ್ದರೂ ಅಧಿಕಾರಿಗಳು ಕಂಡು ಬರುತ್ತಿಲ್ಲ. ಹೀಗಾಗಿ ಸದಾ ಜನರಿಂದ ತುಂಬಿರುತ್ತಿದ್ದ ಜಿಲ್ಲಾಡಳಿತ ಭವನ ಸದ್ಯ ಬಿಕೋ ಎನ್ನುತ್ತಿದೆ.
ಅಪರೂಪಕ್ಕೆ ಒಮ್ಮೆ ಅಧಿಕಾರಿಗಳು ಕಚೇರಿಗಳಿಗೆ ಬಂದು ಹೋಗುವುದು ಬಿಟ್ಟರೆ ಬಹುತೇಕ ಸಮಯ ಚುನಾವಣಾ ಕಾರ್ಯದ ಹಿನ್ನೆಲೆಯಲ್ಲಿ ಹೊರಗೆ ಕೆಲಸ ಮಾಡುತ್ತಿರುವುದರಿಂದ ಜನರ ಓಡಾಟ, ಸಂಪರ್ಕ ಇಲ್ಲ. ಆದ್ದರಿಂದ ಶಕ್ತಿ ಕೇಂದ್ರಕ್ಕೆ ಮಂಕು ಕವಿದಂತಾಗಿದೆ. ಚುನಾವಣೆ ಮುಗಿಯುವರೆಗೂ ಜಿಲ್ಲಾಡಳಿತ ಭವನದ ಪರಿಸ್ಥಿತಿ ಇದೇ ರೀತಿ ಇರಲಿದೆ.
ವ್ಯಾಪಾರ ಕುಸಿತಕ್ಕೆ ಅಂಗಡಿ ವ್ಯಾಪಾರಿಗಳ ಹೈರಾಣ: ಜಿಲ್ಲಾಡಳಿತ ಭವನಕ್ಕೆ ಬರುವ ಅಧಿಕಾರಿಗಳು, ಸಾರ್ವಜನಿಕರನ್ನು ನಂಬಿಕೊಂಡು ಡೀಸಿ ಕಚೇರಿ ಹೊರಗೆ ಸಾಕಷ್ಟು ಸಂಖ್ಯೆಯಲ್ಲಿ ಅಂಗಡಿ ಮುಂಗಟ್ಟುಗಳು ತಲೆ ಎತ್ತಿವೆ. ಅದರಲ್ಲೂ ಹೋಟೆಲ್, ಜೆರಾಕ್ಸ್, ಕಾಂಡಿಮೆಂಟ್ಸ್ ಅಂಗಡಿಗಳು ಅಪಾರ ಸಂಖ್ಯೆಯಲ್ಲಿವೆ. ಆದರೆ ಚುನಾವಣೆ ಮಾದರಿ ನೀತಿ ಸಂಹಿತೆ ಜೊತೆಗೆ ಬಹುತೇಕ ಅಧಿಕಾರಿಗಳು ಕಚೇರಿಗಳತ್ತ ಸುಳಿಯದೇ ಜನರೂ ಅತ್ತ ಹೋಗುತ್ತಿಲ್ಲ. ತಿಂಗಳ ಸಾವಿರಾರೂ ರೂ. ಬಾಡಿಗೆ ಕಟ್ಟುವ ಅಂಗಡಿ ಮಳಿಗೆ ವರ್ತಕರು ದಿನ ನಿತ್ಯದ ವ್ಯಾಪಾರ ವಹಿವಾಟು ಕುಸಿದು ಆರ್ಥಿಕವಾಗಿ ತೀವ್ರ ಹೈರಾಣುವ ಸ್ಥಿತಿಗೆ ತಲುಪಿದ್ದಾರೆ.
– ಕಾಗತಿ ನಾಗರಾಜಪ್ಪ