Advertisement
ಹೆಸರು, ವಿಮಲ್ ಗೀತಾನಂದನ್. ವಯಸ್ಸು, ಬರೀ 23. ಊರು ಅನಂತಪುರ. ಎಂಜಿನಿಯರಿಂಗ್ ಓದುತ್ತಿದ್ದ ಹುಡುಗ ಇದ್ದಕ್ಕಿದ್ದಂತೆ ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು ದೇಶ ಸುತ್ತುತ್ತೇನೆಂದು ಹೊರಟುಬಿಟ್ಟ. ಆಗ ಅವನ ಬಳಿ ಇದ್ದದ್ದು ಒಂದು ಹಾಸಿಗೆ, ಮಡಚಿ ಒಯ್ಯಬಹುದಾದ ಟೆಂಟ್, 3 ಜೊತೆ ಬಟ್ಟೆ, ಲ್ಯಾಪ್‌ಟಾಪ್, ಮೊಬೈಲ್, ಪವರ್ ಬ್ಯಾಂಕ್, ಮಾನವೀಯತೆಯ ಮೇಲೆ ನಂಬಿಕೆ ಮತ್ತು ಖಾಲಿ ಜೇಬು!
ಕಳೆದ ವರ್ಷ ಜುಲೈನಲ್ಲಿ ಅನಂತಪುರದಿಂದ ಹೊರಟವನು 9 ತಿಂಗಳ ನಂತರ ಮಾರ್ಚ್‌ನಲ್ಲಿ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ ಒಟ್ಟು 11 ರಾಜ್ಯಗಳನ್ನು ಸುತ್ತಿ ವಾಪಸಾದ. ಜೇಬು ಖಾಲಿಯಿದ್ದರೂ ಇದೆಲ್ಲಾ ಹೇಗೆ ಸಾಧ್ಯವಾಯ್ತು? ಅಂತ ಕೇಳಿದಾಗ ವಿಮಲ್ ಹೇಳುವುದು ಹೀಗೆ-
ನನಗೆ ಮನುಷ್ಯರ ಮೇಲೆ, ಮನುಷ್ಯತ್ವದ ಮೇಲೆ ಅಪಾರ ನಂಬಿಕೆ. ಈ ನಂಬಿಕೆಯೊಂದಿದ್ದರೆ ದುಡ್ಡಿನ ಅವಶ್ಯಕತೆ ಬೀಳುವುದಿಲ್ಲ. ಜನರು ನನಗೆ ಸಹಾಯ ಮಾಡಿಯೇ ಮಾಡುತ್ತಾರೆ ಅಂತ ನನಗೆ ಗೊತ್ತಿತ್ತು. ಒಂದು ರೂಪಾಯಿ ಕೂಡ ಇಲ್ಲದೆ ಈ ಪ್ರಯಾಣ ಮುಗಿಸಬೇಕು ಎಂಬುದೇ ನನ್ನ ಗುರಿಯಾಗಿತ್ತು. ಮನುಷ್ಯ ರಾಕ್ಷಸನಾಗುತ್ತಿದ್ದಾನೆ, ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಪ್ರಾಣಿಯಾಗಿ ಮಾರ್ಪಟ್ಟಿದ್ದಾನೆ ಅಂತ ಕೆಲವರು ಹೇಳುತ್ತಿರುತ್ತಾರೆ. ಆದರೆ, ನಾನು ಆ ರೀತಿ ಯೋಚಿಸುತ್ತಿರಲಿಲ್ಲ. ಅದಕ್ಕೇ ನನ್ನ ನಂಬಿಕೆಯನ್ನು ಪ್ರಮಾಣಿಸಿ ನೋಡಲು ಈ ಪ್ರಯೋಗ ಮಾಡಿದೆ. ಪ್ರವಾಸದ ಪ್ರಯೋಗ. ಇದೊಂದು ರೀತಿಯಲ್ಲಿ ಮಾನವೀಯತೆಯ ಪರೀಕ್ಷೆಯಾಗಿತ್ತು. ಅಂತೂ ದುಡ್ಡೇ ಇಲ್ಲದೆ ನಾನು 11 ರಾಜ್ಯಗಳನ್ನು ಸುತ್ತಿಬಂದೆ. ನಾನಂದುಕೊಂಡಂತೆ ಕೊನೆಗೂ ಮಾನವೀಯತೆ ಗೆದ್ದುಬಿಟ್ಟಿತು. ಮೋಟಾರ್ ಸೈಕಲ್, ಕಾರು, ಬಸ್, ಟ್ರಕ್, ರೈಲಿನಲ್ಲಿ ಎಲ್ಲಾ ಕಡೆ ಓಡಾಡಿದೆ. ಹಾಗಂತ ಎಲ್ಲಿಯೂ ಟಿಕೆಟ್ ಪಡೆಯದೆ ಮೋಸ ಮಾಡಿಲ್ಲ. ಜನರೇ ನನ್ನ ಕೈ ಹಿಡಿದು ನಡೆಸಿದ್ದಾರೆ. ಅನಂತಪುರದಿಂದ ಹೊರಟು ಮೊದಲು ಬೆಂಗಳೂರು, ನಂತರ ಪೂರ್ತಿ ದಕ್ಷಿಣ ಭಾರತವನ್ನು ಸುತ್ತಿ ಮಹಾರಾಷ್ಟ್ರಕ್ಕೆ ಹೋದೆ. ಅಲ್ಲಿಂದ ಈಶಾನ್ಯ ಭಾರತದ ಅಸ್ಸಾಂ ಹಾಗೂ ಇತರ ರಾಜ್ಯಗಳನ್ನು ಸುತ್ತಿ ಕೋಲ್ಕತ್ತಾದಲ್ಲಿ ಪ್ರಯಾಣ ಮುಗಿಸಿದೆ. ಇಡೀ ಭಾರತವನ್ನು ಸುತ್ತುವ ಕನಸಿತ್ತು. ಆದರೆ ಕೆಲ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ನನಗೆ ದಾರಿಯುದ್ದಕ್ಕೂ ಸಹೃದಯರೇ ಸಿಕ್ಕಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ನಾನು ಎಲ್ಲಿದ್ದೇನೆ ಅಂತ ಜನರಿಗೆ ತಿಳಿಸುತ್ತಿದ್ದೆ. ಅದನ್ನು ನೋಡಿದ ಹಲವರು ನನಗೆ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಕೇರಳದ ಮುನ್ನಾರಿನಲ್ಲಿ ಒಂದು ಕುಟುಂಬ ನನಗೆ ಆಶ್ರಯ ನೀಡಿತು. ಅದೊಂದು ಸಣ್ಣ ಗುಡಿಸಲು. ಅಲ್ಲಿ ಇದ್ದದ್ದೇ ಒಂದು ಮಂಚ. ಅದನ್ನೂ ನನಗೆ ಬಿಟ್ಟುಕೊಟ್ಟು ಅವರೆಲ್ಲ ನೆಲದ ಮೇಲೆ ಮಲಗಿದರು. ಅವರು ಪ್ರೀತಿಯಿಂದ ಬಡಿಸಿದ ಫಿಶ್ ಕರಿಯ ರುಚಿ ಇನ್ನೂ ನಾಲಗೆ ಮೇಲಿದೆ. ಈ ಅನುಭವಕ್ಕೆಲ್ಲಾ ಬೆಲೆ ಕಟ್ಟಲಾಗದು.
Related Articles
Advertisement
ಕೋಲ್ಕತ್ತಾದಲ್ಲಿ ಸೋನಾಗಚಿ ಎಂಬ ರೆಡ್‌ಲೈಟ್ ಏರಿಯಾಕ್ಕೆ ಹೋಗಿದ್ದೆ. ಅಲ್ಲಿನ ದಾರುಣ ಪರಿಸ್ಥಿತಿ ನೋಡಿ ದಂಗಾದೆ. ಹಾಗಾಗಿ ಲೈಂಗಿಕ ಕಾರ್ಯಕರ್ತೆಯರ ಏಳಿಗೆಗಾಗಿ ಒಂದು ಆರ್ಗನೈಸೇಷನ್ ಪ್ರಾರಂಭಿಸುವ ಯೋಚನೆಯೂ ಇದೆ. ಅದನ್ನು ಬಿಟ್ಟರೆ ನನ್ನ ಭವಿಷ್ಯ, ಉದ್ಯೋಗದ ಬಗ್ಗೆ ಯಾವ ಪ್ಲಾನ್ ಕೂಡ ಇಲ್ಲ.
ಉಪವಾಸದಲ್ಲಿದ್ದರೂ ಅವರು ಊಟ ಕೊಟ್ಟರು!ಅನಂತಪುರದಿಂದ ಬೆಂಗಳೂರಿಗೆ ಬರುವಾಗ ಅಸರ್ ಎಂಬ ಟ್ರಕ್ ಚಾಲಕನೊಬ್ಬನನ್ನು ಭೇಟಿಯಾದೆ. ಅದು ರಂಜಾನ್ ಸಮಯ. ಆತ ಟ್ರಕ್ ಡ್ರೈವರ್ ಅಷ್ಟೇ ಅಲ್ಲ, ರಸ್ತೆ ಅಪಘಾತಗಳ ಮಾಹಿತಿ, ಫೋಟೊಗಳನ್ನು ನ್ಯೂಸ್ ಆರ್ಗನೈಸೇಶನ್‌ಗಳಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದರು. ಅವರು ನನಗೆ ಲಿಫ್ಟ್ ಕೊಟ್ಟರು. ನಾನು ಏನನ್ನೂ ತಿಂದಿಲ್ಲ ಅಂತ ಗೊತ್ತಾದಾಗ, ದಾರಿ ಮಧ್ಯದಲ್ಲಿಯೇ ಲಾರಿ ನಿಲ್ಲಿಸಿ ಹತ್ತಿರದ ಖಾನಾವಳಿಯೊಂದರಲ್ಲಿ ಊಟ ಕೊಡಿಸಿದರು. ತಾವು ಉಪವಾಸದಲ್ಲಿದ್ದರೂ ನನಗೆ ಊಟ ಕೊಡಿಸಿದ ಅವರು ಮಾನವೀಯತೆಯ ಮೇಲಿದ್ದ ನನ್ನ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸಿದರು. (ಕೃಪೆ: ದಿ ನ್ಯೂಸ್ ಮಿನಿಟ್)
ನಿರೂಪಣೆ: ಪ್ರಿಯಾಂಕಾ ನಟಶೇಖರ್