ಬೆಂಗಳೂರು: ಬಡತನ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಸವಾಲುಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡು ಕೊಳ್ಳುವಲ್ಲಿ ಯಶಸ್ವಿ ಯಾಗಿರುವ ಭಾರತ, ಇದೇ ತಂತ್ರಜ್ಞಾನ ನೆರವಿನಿಂದ ಸಾಮಾಜೀಕರಣದ ಜತೆಗೆ ಸಬಲೀಕರಣ ಸಾಧಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ಲೇಷಿಸಿದರು.
ನಗರದ ಅರಮನೆ ಆವರಣದಲ್ಲಿ ಬುಧವಾರ ಆರಂಭಗೊಂಡ ಮೂರು ದಿನಗಳ ಬೆಂಗಳೂರು ಟೆಕ್ ಸಮಿಟ್‌ನ 25ನೇ ಆವೃತ್ತಿಯಲ್ಲಿ ವರ್ಚುವಲ್ ಆಗಿ ಅವರು ಮಾತನಾಡಿದರು. ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿದೆ.
ಭಾರತವಂತೂ ಈಗ ಮಾಹಿತಿ ಸೂಪರ್ ಹೈವೇ ಆಗಿದೆ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ತಂತ್ರಜ್ಞಾನಕ್ಕೆ ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಸ್ಪರ್ಶವನ್ನು ನೀಡುತ್ತಲೇ ಇರುವುದು ಭಾರತದ ಅನನ್ಯ ಸಾಧನೆಯಾಗಿದೆ. ತಂತ್ರಜ್ಞಾನವು ನಮಗೆ ಬಡತನದ ವಿರುದ್ಧದ ಹೋರಾಟಕ್ಕೆ ಶಕ್ತಿಶಾಲಿ ಅಸ್ತ್ರವಾಗಿದೆ.
ಅದರಲ್ಲೂ ಬೆಂಗಳೂರು ತಂತ್ರಜ್ಞಾನ, ನಾವೀನ್ಯತೆ ಮತ್ತು ಸಮರ್ಥ ನಾಯಕತ್ವದ ತವರಾಗಿದೆ ಎಂದು ತಿಳಿಸಿದರು.
81ರಿಂದ 40ನೇ ರ್‍ಯಾಂಕ್‌ಗೆ ಜಿಗಿತ: ದತ್ತಾಂಶಗಳಲ್ಲಂತೂ ಭಾರತ ಕ್ರಾಂತಿ ಮಾಡುತ್ತಿದೆ. ಯುವಶಕ್ತಿಯಿಂದ ಕೂಡಿರುವ ಸಮಕಾಲೀನ ಜಗತ್ತಿನಲ್ಲಿ ಪ್ರತಿಭೆಯ ಜಾಗತೀಕರಣ ನಡೆಯುತ್ತಿದೆ. ಭಾರತದಲ್ಲಿ 81 ಸಾವಿರ ನವೋದ್ಯಮಗಳಿದ್ದು, ಯೂನಿಕಾರ್ನ್ಗಳಲ್ಲಿ ಪ್ರಪಂಚದ 3ನೇ ಅತಿದೊಡ್ಡ ಹಬ್ ಆಗಿದೆ. ಜತೆಗೆ, ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಭಾರತದ ಸ್ಥಾನವು ಕಳೆದ ಎಂಟು ವರ್ಷಗಳಲ್ಲಿ ಗಣನೀಯವಾಗಿ ಮೇಲಕ್ಕೆ ಬಂದಿದ್ದು, 40ನೇ ಸ್ಥಾನದಲ್ಲಿದೆ. 2015ರಲ್ಲಿ 81ನೇ ಸ್ಥಾನದಲ್ಲಿತ್ತು ಎಂದು ಹೇಳಿದರು.
2025ರ ವೇಳೆಗೆ ಬಯೋ ಎಕನಾಮಿ 100 ಬಿಲಿಯನ್ ಡಾಲರ್ ಆಗಲಿದ್ದು, 2047ರ ವೇಳೆಗೆ ಇದನ್ನು 500 ಬಿಲಿಯನ್ ಡಾಲರ್‌ಗೆ ತಲುಪಿಸುವ ಗುರಿ ಇದೆ. ಈ ಪೈಕಿ ಶೇ. 40ಕ್ಕಿಂತ ಹೆಚ್ಚು ಬೆಂಗಳೂರಿನ ಪಾಲು ಇರಲಿದೆ.
- ಕಿರಣ್ ಮಜೂಂದಾರ್ ಷಾ, ಅಧ್ಯಕ್ಷೆ, ಬಿಟಿ ವಿಜನ್ ಗ್ರೂಪ್