Advertisement

ಪಂಚಾಯತ್‌ಗಳಲ್ಲಿ ಮಹಿಳಾ ಸದಸ್ಯರ ಸಶಕ್ತೀಕರಣಕ್ಕೆ ದಿಟ್ಟ ಹೆಜ್ಜೆ

12:20 AM Jun 18, 2022 | Team Udayavani |

ಪಂಚಾಯತ್‌ ರಾಜ್‌ ವ್ಯವಸ್ಥೆಯಡಿ ಬರುವ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಮಹಿಳೆ ಯರಿಗೆ ಶೇ. 50ರಷ್ಟು ಮೀಸಲಾತಿ ಕಲ್ಪಿಸಿ ದಶಕಗಳೇ ಕಳೆದಿವೆ. ಹಾಗೆಂದು ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಮೀಸಲಾತಿಯಡಿ ಆಯ್ಕೆಯಾಗಿ ಬರುವ ಮಹಿಳಾ ಸದಸ್ಯರು ತಮ್ಮ ಅಧಿಕಾರವನ್ನು ಸ್ವತಂತ್ರವಾಗಿ ನಿರ್ವಹಿಸುವ ವಾತಾವರಣ ಇತ್ತೇ ಎಂಬ ಪ್ರಶ್ನೆ ಕಾಡುತ್ತಿದ್ದುದು ಸಹಜ.

Advertisement

ಮಹಿಳೆಯರಿಗೆ ಆಡಳಿತದಲ್ಲಿ ಸಮಾನ ಪ್ರಾತಿನಿಧ್ಯ ನೀಡುವ ಉದ್ದೇ ಶದಿಂದ ಈ ಮೀಸಲಾತಿ ಕಲ್ಪಿಸಲಾಗಿದೆಯಾದರೂ ನಿಜಾರ್ಥದಲ್ಲಿ ಈ ಉದ್ದೇಶ ಈಡೇರಿರಲಿಲ್ಲ. ಕಾರಣ ಪಂಚಾಯತ್‌ ರಾಜ್‌ ಸಂಸ್ಥೆಗಳ ಚುನಾಯಿತ ಮಹಿಳಾ ಸದಸ್ಯರ ಅಧಿಕಾರವನ್ನು ಅವರ ಪತಿ ಅಥವಾ ಕುಟುಂಬದ ಪುರುಷ ಸದಸ್ಯರು ಹಿಂಬಾಗಿಲಿನಿಂದ ನಡೆಸುತ್ತಿದ್ದಾರೆ ಎಂದು ಬಹಳಷ್ಟು ದೂರುಗಳು ಕೇಳಿ ಬಂದಿದ್ದವಾದರೂ ಪಂಚಾಯತ್‌ ರಾಜ್‌ ಇಲಾಖೆಯಾಗಲಿ, ಸರಕಾರವಾಗಲಿ ತಲೆಕೆಡಿಸಿಕೊಂಡಿರಲಿಲ್ಲ.

ಮಹಿಳಾ ಸದಸ್ಯರ ಅಧಿಕಾರದಲ್ಲಿ ಪುರುಷರ ಹಸ್ತಕ್ಷೇಪ ಮಿತಿಮೀರುತ್ತಿ ರುವುದರಿಂದಾಗಿ ಈ ಮಹಿಳಾ ಮೀಸಲಾತಿ ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಿಂದ ಪದೇಪದೆ ಕೇಳಿಬರುತ್ತಿದೆ. ಗ್ರಾಮ ಪಂಚಾಯತ್‌ ಮಟ್ಟದಲ್ಲಂತೂ ಮಹಿಳಾ ಸದಸ್ಯರು ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದ್ದು ಅವೆಷ್ಟೋ ಕೆಲಸಕಾರ್ಯಗಳನ್ನು ಅವರ ಹೆಸರಿನಲ್ಲಿ ಅವರ ಪತಿಯೋ ಅಥವಾ ಕುಟುಂಬದ ಪುರುಷ ಸದಸ್ಯರು ನಡೆಸುತ್ತಿದ್ದಾರೆ. ಮಾತ್ರವಲ್ಲದೆ ಮಹಿಳಾ ಸದಸ್ಯರ ಪತಿ ಅಥವಾ ಅವರ ಕುಟುಂಬದ ಸದಸ್ಯರ ಮಿತಿ ಮೀರಿದ ಹಸ್ತಕ್ಷೇಪದ ಕಾರಣದಿಂದ ಅಧಿಕಾರಿ ಗಳು, ಸಿಬಂದಿಯ ಕರ್ತವ್ಯ ನಿರ್ವಹಣೆಗೂ ಅಡಚಣೆಯುಂಟಾಗುತ್ತಿದೆ. ಇದು ನೇರವಾಗಿ ಸಾರ್ವಜನಿಕರಿಗೂ ಇನ್ನಿಲ್ಲದ ಸಮಸ್ಯೆಗಳನ್ನು ತಂದೊಡ್ಡು ತ್ತಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಮಹಿಳಾ ಸದಸ್ಯರ ಅಧಿಕಾರ ನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದರ ಜತೆಗೆ ಅಂಥ‌ ಮಹಿಳಾ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡುವಂತೆಯೂ ಮುಖ್ಯಮಂತ್ರಿಗೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಮನವಿ ಸಲ್ಲಿಸುತ್ತಲೇ ಬಂದಿದ್ದವು.

ಈ ಮನವಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಪುರುಷರ ಈ ಹಿಂಬಾಗಿಲ ರಾಜಕಾರಣಕ್ಕೆ ಕಡಿವಾಣ ಹಾಕಲು ಮುಂದಾ ಗಿದೆ. ಹಾಲಿ ಜಾರಿಯಲ್ಲಿರುವ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕರಣ 110(ಎ)ಯಂತೆ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಆಯ್ಕೆಯಾದ ಮಹಿಳಾ ಸದಸ್ಯರು ಸ್ವತಂತ್ರವಾಗಿ ಅಧಿಕಾರವನ್ನು ಚಲಾಯಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಿದೆ. ಚುನಾಯಿತ ಮಹಿಳಾ ಸದಸ್ಯರ ಅಧಿಕಾರ ನಿರ್ವಹಣೆಯಲ್ಲಿ ಪತಿ ಅಥವಾ ಕುಟುಂಬ ಸದಸ್ಯರ ಹಸ್ತಕ್ಷೇಪದ ಆರೋಪಗಳು ಕೇಳಿಬಂದಲ್ಲಿ ಸೂಕ್ತ ತನಿಖೆ ನಡೆಸಿ, ಆರೋಪ ಸಾಬೀತಾದಲ್ಲಿ ಆ ಮಹಿಳಾ ಸದಸ್ಯರ ಸದಸ್ಯತ್ವ ರದ್ದು ಮಾಡಲು ಪಂಚಾಯತ್‌ ರಾಜ್‌ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ಮಹಿಳಾ ಮೀಸಲಾತಿಯ ನೈಜ ಉದ್ದೇಶವನ್ನು ಸಾಕಾರಗೊಳಿಸಲು ಸರಕಾರ ಮುಂದಡಿ ಇಟ್ಟಿದೆ.

ಸರಕಾರದ ಈ ಆದೇಶ ಅಕ್ಷರಶಃ ಜಾರಿಯಾದಲ್ಲಿ ಮಹಿಳಾ ಸದಸ್ಯರ ಘನತೆ, ಗೌರವ ಮತ್ತಷ್ಟು ಹೆಚ್ಚಲಿದೆ. ಆಡಳಿತ ವ್ಯವಸ್ಥೆಯಲ್ಲಿ ಲಿಂಗ ತಾರ ತಮ್ಯ ಹೋಗಲಾಡಿಸಿ ಸಮಾನತೆಯನ್ನು ತರುವ ಸರಕಾರದ ಆಶಯವೂ ಈಡೇರಿದಂತಾಗಲಿದೆ. ತನ್ಮೂಲಕ ಸ್ವತಂತ್ರವಾಗಿ ಅಧಿಕಾರ ಚಲಾಯಿಸುವ ಮೂಲಕ ನಿಜಾರ್ಥದಲ್ಲಿ ಮಹಿಳೆಯರ ಸಶಕ್ತೀಕರಣ ಸಾಧ್ಯವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next