ಪುತ್ತೂರು: ಕೇಂದ್ರ ಸರಕಾರ ನೀಡುವ ಪಂಡಿತ್ ದೀನ್ ದಯಾಳ್ ಪಂಚಾಯತ್ ಸಶಕ್ತೀಕರಣ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ರಾಜ್ಯದ ಎರಡು ತಾಲೂಕು ಪಂಚಾಯತ್‌ಗಳಲ್ಲಿ ಒಂದಾದ ಪುತ್ತೂರು ತಾ.ಪಂ.ಗೆ ಸೋಮವಾರ ಉತ್ತರಪ್ರದೇಶದ ಲಕ್ನೋದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ಪ್ರಶಸ್ತಿ ಪ್ರದಾನ ಮಾಡಿದರು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮತ್ತು ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು 30 ಲಕ್ಷ ರೂ. ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
2014-15ನೇ ಸಾಲಿನಲ್ಲಿ ಕೈಗೊಳ್ಳಲಾದ ಅಭಿಧಿವೃದ್ಧಿ ಕಾರ್ಯಗಳಿಗಾಗಿ ಈ ಪ್ರಶಸ್ತಿ ಲಭಿಸಿದೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಶೇ. 100 ಸಾಧನೆ, ಅಭಿವೃದ್ಧಿ ಅನುದಾನ ಮತ್ತು ಸ್ವಂತ ನಿಧಿ ಬಳಕೆ, ವಸತಿ ಯೋಜನೆಗಳ ಯಶಸ್ವಿ ಅನುಷ್ಠಾನ, ಸಾಮಾನ್ಯ ಸಭೆ, ಕೆಡಿಪಿ ಸಭೆಗಳನ್ನು ನಿರ್ದಿಷ್ಟ ಅವಧಿಯಲ್ಲಿ ನಿರ್ವಹಿಸಿರುವುದು, ಅಧೀನದ ವಿವಿಧ ಇಲಾಖೆಗಳ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಯಶಸ್ವಿ ಅನುಷ್ಠಾನಗೊಳಿಸಿರುವುದು ಮೊದಲಾದ ಅಂಶಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಎರಡನೇ ರಾಷ್ಟ್ರ ಪ್ರಶಸ್ತಿ: 2008ರಲ್ಲಿ ಪುತ್ತೂರು ತಾ.ಪಂ.ಗೆ ನಿರ್ಮಲ ಗ್ರಾಮ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಇದೀಗ ಎರಡನೇ ಬಾರಿಗೆ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ. 1995-96ರಲ್ಲಿ ರಾಜ್ಯ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅತ್ಯುತ್ತಮ ತಾ.ಪಂ. ಪ್ರಶಸ್ತಿ ಪುತ್ತೂರು ತಾ.ಪಂ.ಗೆ ಲಭಿಸಿತ್ತು.
ಸಂಪಾಜೆ ಗ್ರಾಮ ಪಂಚಾಯತ್‌ಗೆ ಪ್ರಶಸ್ತಿ
ಸುಳ್ಯ: ಕೇಂದ್ರ ಸರಕಾರ ನೀಡುವ ಸಶಕ್ತೀಕರಣ ರಾಷ್ಟ್ರಪ್ರಶಸ್ತಿ ಕೊಡಗು ಸಂಪಾಜೆ ಗ್ರಾಮ ಪಂಚಾಯತ್‌ಗೆ ಲಭಿಸಿದ್ದು, ಲಕ್ನೋದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಚಂದ್ರ ಕಳಗಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರಿಂದ ಸ್ವೀಕರಿಸಿದರು.
ಕೇಂದ್ರ ಸಚಿವ ನರೇಂದ್ರ ಸಿಂಗ್ ಸೋಮಾಲ್, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ್, ಕೊಡಗು ಜಿ.ಪಂ. ಅಧ್ಯಕ್ಷ ಹರೀಶ್, ಪಾಲಿಬೆಟ್ಟ ಗ್ರಾ.ಪಂ. ಅಧ್ಯಕ್ಷ ಬೋಪಣ್ಣ, ಪಿಡಿಒ ಶೋಭಾರಾಣಿ ಮತ್ತು ಕೊಡಗು ಜಿ.ಪಂ. ಸಿಇಒ ಚಾರುಲತಾ ಉಪಸ್ಥಿತರಿದ್ದರು.