ಮೈಸೂರು: ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳಲ್ಲಿ ವಿವಾಹವಾದವರಿಗೆ ನೀಡಲಾಗುತ್ತಿರುವ ಪ್ರೋತ್ಸಾಹ ಧನ ಹೆಚ್ಚಳ ಹಾಗೂ ಅಂತರ್ ಜಾತಿ ವಿವಾಹವಾದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಶಾಸಕ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಸರಳ ಸಾಮೂಹಿಕ ವಿವಾಹಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಸಂಘಸಂಸ್ಥೆಗಳಿಗೆ ನೀಡಲಾಗುವ ಅನುದಾನ ಹೆಚ್ಚಿಸುವ ಜೊತೆಗೆ ಸಾಮೂಹಿಕ ವಿವಾಹಗಳಲ್ಲಿ ವಿವಾಹವಾದ ಜೋಡಿಗೆ ನೀಡಲಾಗುವ 10 ಸಾವಿರ ರೂ. ಪ್ರೋತ್ಸಾಹ ಧನವನ್ನು 25 ಸಾವಿರ ರೂ.ಗಳಿಗೆ ಹೆಚ್ಚಿಸಲು ಸರ್ಕಾರಕ್ಕೆ ಸಮಿತಿ ಶಿಫಾರಸು ಮಾಡಲಿದೆ ಎಂದರು.
797 ವಿವಾಹ: ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 797 ಅಂತರ್ ಜಾತಿ ವಿವಾಹಗಳಾಗಿರುವುದು ಒಳ್ಳೆಯ ಬೆಳವಣಿಗೆ. ಸಮಾಜದಲ್ಲಿ ಅಂತರ ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಅಂತರ ಜಾತಿ ವಿವಾಹವಾದವರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಕ್ರಿಯಾ ಯೋಜನೆ: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಭಾಗಶಃ ತೃಪ್ತಿ ತಂದಿದೆ. ಬಹುತೇಕ ಇಲಾಖೆಗಳವರು 2019-20ನೇ ಸಾಲಿನ ಕ್ರಿಯಾ ಯೋಜನೆಯನ್ನೇ ಇನ್ನೂ ಮಾಡಿಕೊಂಡಿಲ್ಲ. ಕೂಡಲೇ ಕ್ರಿಯಾಯೋಜನೆ ಮಾಡಿಕೊಂಡು ಮಾ.31ರೊಳಗೆ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 227 ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇತ್ಯರ್ಥ ಪ್ರಮಾಣ ಕಡಿಮೆ ಇದೆ. ಖುಲಾಸೆ ಪ್ರಮಾಣ ಹೆಚ್ಚುತ್ತಿದ್ದು, ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತಿದೆ.
ಅನೇಕ ಇಲಾಖೆಗಳಲ್ಲಿ ಎಸ್‌ಇಪಿ-ಟಿಎಸ್‌ಪಿ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳಿಗೆ ಸವಲತ್ತು ತಲುಪಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿನ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿರುವುದರಿಂದ ಕಾಲಮಿತಿಯೊಳಗೆ ಪ್ರಕರಣ ಇತ್ಯರ್ಥಪಡಿಸಲು ನ್ಯಾಯಾಧೀಶರನ್ನೇ ನೇಮಕ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವ ಚಿಂತನೆ ಇದೆ. ಸಿಆರ್‌ಇ ಸೆಲ್ ಸಕ್ರಿಯವಾಗಬೇಕಿದೆ. ಸುಳ್ಳು ಜಾತಿ ದೃಢೀಕರಣ ಪತ್ರಗಳ ಪ್ರಕರಣ ಶೀಘ್ರ ವಿಲೇವಾರಿಯಾಗಬೇಕಿದೆ ಎಂದು ತಿಳಿಸಿದರು.
ಸರಳ ಸಾಮೂಹಿಕ ವಿವಾಹ: ಇದಕ್ಕೂ ಮುನ್ನ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ವಿಷಯ ಪ್ರಸ್ತಾಪಿಸಿದ ಶಾಸಕ ಡಾ.ಕೆ.ಅನ್ನದಾನಿ, ಸರಳ ಸಾಮೂಹಿಕ ವಿವಾಹಗಳ ಖರ್ಚುವೆಚ್ಚಗಳನ್ನು ಸರ್ಕಾರವೇ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಸಮಿತಿಯಿಂದ ಸರ್ಕಾರಕ್ಕೆ ಶಿಫಾರಸು ಮಾಡೋಣ ಎಂದರು.
ಸಮಿತಿ ಸದಸ್ಯರಾದ ಅನಿಲ್ ಚಿಕ್ಕಮಾದು, ಡಾ.ಕೆ.ಅನ್ನದಾನಿ, ಪ್ರಸನ್ನಕುಮಾರ್, ಶಾಸಕರಾದ ಎನ್.ಮಹೇಶ್, ಕೆ.ಮಹದೇವ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಪ್ರಭಾರ ಜಿಲ್ಲಾಧಿಕಾರಿಗಳಾದ ಜಿಪಂ ಸಿಇಒ ಕೆ.ಜ್ಯೋತಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಅಂತರ್ಜಾತಿ ವಿವಾಹ ಮಾಹಿತಿಗೆ ಸರ್ವೆ: ಸಮಿತಿ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಅಂತರ್‌ಜಾತಿ ವಿವಾಹವಾದವರು ಸರ್ಕಾರದ ಪ್ರೋತ್ಸಾಹಧನ ಪಡೆಯುವವರಿಗೆ ಚೆನ್ನಾಗಿದ್ದು, ಆ ನಂತರ ವಿಚ್ಛೇದನಕ್ಕೆ ಅರ್ಜಿ ಹಾಕಿ ಬಿಡುತ್ತಾರೆ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು. ಆದರೆ, ಇದು ಗಂಭೀರ ವಿಚಾರ ಅಂತರ್ ಜಾತಿ ವಿವಾಹವಾದವರು ಎಷ್ಟು ಜನ ಒಂದಾಗಿದ್ದಾರೆ ಎನ್ನುವುದನ್ನು ಸರ್ವೆ ಮಾಡಿಸಿ, ಜೊತೆಗೆ ಅಂತರ್ ಜಾತಿ ವಿವಾಹವಾದವರಿಗೆ ಉದ್ಯೋಗದಲ್ಲಿ ಶೇ.3ರಷ್ಟು ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡೋಣ ಎಂದು ಹೇಳಿದರು.