Advertisement

ದೇಶದಲ್ಲಿ ಈಗ ಉದ್ಯೋಗ ನಷ್ಟದ ಅಭಿವೃದ್ಧಿ ಶಕೆ..

11:49 AM Apr 21, 2019 | pallavi |
ಹುಬ್ಬಳ್ಳಿ: ಈ ಹಿಂದೆ ಉದ್ಯೋಗ ರಹಿತ ಅಭಿವೃದ್ಧಿ ದೇಶವನ್ನು ಸಾಕಷ್ಟು ಸಮಸ್ಯೆಗೆ ನೂಕಿತ್ತು. ಇದೀಗ ಉದ್ಯೋಗನಷ್ಟದ ಅಭಿವೃದ್ಧಿ ಶಕೆ ಆರಂಭವಾಗಿದೆ…

ಇದು ‘ಉದಯವಾಣಿ’ ಜತೆ ಮಾತನಾಡಿದ ಜಯಪ್ರಕಾಶ ನಾರಾಯಣ (ಜೆಪಿ)ಅವರಿಂದ ಸ್ಥಾಪಿಸಲ್ಪಟ್ಟ ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ (ಸಿಎಫ್ಡಿ)ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌.ಹಿರೇಮಠ ಅಭಿಮತ.

Advertisement

ಒಟ್ಟಾರೆ ಅವರು ಹೇಳಿದ್ದು

ಕಾರ್ಪೊರೆಟ್ ಜಗತ್ತಿಗೆ ಏನೆಲ್ಲಾ ಬೇಕೋ ಅದಕ್ಕೆ ಪೂರಕವಾಗಿ ಆಡಳಿತ ಹೆಜ್ಜೆ ಇರಿಸುವ ಮೂಲಕ, ಇದೇ ದೇಶದ ನಿಜವಾದ ಅಭಿವೃದ್ಧಿ ಎಂದು ಬಿಂಬಿಸುವ ದುರಂತಮಯ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಯಾವ ಅಭಿವೃದ್ಧಿ ಎಂದು ಕರೆಯಬೇಕು ?

-ಭ್ರಷ್ಟಾಚಾರ ಹೆಚ್ಚುತ್ತಿದೆ ಕೃಷಿ, ಶಿಕ್ಷಣ, ಆರೋಗ್ಯದಂತಹ ಕ್ಷೇತ್ರಗಳು ನಿರ್ಲಕ್ಷ್ಯಕ್ಕೊಳಗಾಗುತ್ತಿವೆ. ಪಿ.ವಿ.ನರಸಿಂಹರಾವ್‌ ನೇತೃತ್ವದ ಸರಕಾರ ಹೊಸ ಆರ್ಥಿಕ ನೀತಿ ಮೂಲಕ ದೇಶದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿತ್ತು. ಅದರ ಮುಂದುವರಿದ ಭಾಗವಾಗಿ ಇಂದಿನ ಸರಕಾರ ಇನ್ನಷ್ಟು ಅನಾಹುತಗಳನ್ನು ಸೃಷ್ಟಿಸಲು ಮುಂದಾಗಿದೆ.

-ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಕೇಂದ್ರ ವಿಚಕ್ಷಣ ದಳ ಇನ್ನಿತರ ಸಂಸ್ಥೆಗಳನ್ನು ಕಾಂಗ್ರೆಸ್‌ ದುರುಪಯೋಗ ಪಡಿಸಿಕೊಂಡಿತ್ತು. ಇದೀಗ ಎನ್‌ಡಿಎ ಸರಕಾರ ಈ ಸಂಸ್ಥೆಗಳನ್ನು ಧ್ವಂಸಗೊಳಿಸುವ ಮಟ್ಟಕ್ಕೆ ಇಳಿದಿದೆ ಎಂದೆನಿಸುತ್ತದೆ. ಸಿಬಿಐ ನಿರ್ದೇಶಕರ ನೇಮಕ ವಿಚಾರದಲ್ಲಿ ನಡೆದ ಡೊಂಬರಾಟ ಇದಕ್ಕೆ ಪುಷ್ಟಿ ನೀಡುತ್ತದೆ. ದೇಶದ ಒಟ್ಟಾರೆ ಆರ್ಥಿಕ ಸ್ಥಿತಿ ನಿರ್ಧರಿಸುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಗಮನಕ್ಕೂ ತಾರದೆ ಘೋಷಣೆಯಾದ ನೋಟು ಅಮಾನ್ಯೀಕರಣವೂ ಇದಕ್ಕೆ ಸಾಕ್ಷಿ.

Advertisement

-ಭ್ರಷ್ಟಾಚಾರ ತೊಡೆದು ಹಾಕುವ ಕುರಿತು ದೇಶದಲ್ಲಿ ದೊಡ್ಡ ದೊಡ್ಡ ಭಾಷಣಗಳು ಮೊಳಗುತ್ತಿವೆ. ರಫೇಲ್ ಹಗರಣದಲ್ಲಿ ಇನ್ನಾರಿಗೊ ಲಾಭ ಮಾಡಿಕೊಡುವ ಯತ್ನ ಮಾಡಲಾಗಿದೆ ಎಂಬ ಕೂಗು ಕೇಳಿ ಬರುತ್ತಿರುವುದು ಭ್ರಷ್ಟಾಚಾರ ಅಲ್ಲವೇ? 2014 ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕೆ ಆಗಿರುವ ವೆಚ್ಚ ಎಷ್ಟು? ಅಷ್ಟು ಹಣ ಎಲ್ಲಿಂದ ಬಂತು ಎಂಬುದನ್ನು ದೇಶದ ಮತದಾರರ ಮುಂದಿಡಬೇಕಲ್ಲವೇ?

-ವಿದೇಶಗಳಿಂದ ದೇಣಿಗೆ ಪಡೆಯುವ ವಿಚಾರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸಮಾನ ಹಿತಾಸಕ್ತಿ ಹೊಂದಿವೆ. ದೇಣಿಗೆ ಪಡೆಯುವುದಕ್ಕಿದ್ದ ನಿರ್ಬಂಧ ತೊಡೆದು ಹಾಕುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಭಾವನೆಗಳನ್ನು ಭಿತ್ತಿ, ಸುಳ್ಳುಗಳನ್ನು ಪೋಣಿಸುತ್ತಲೇ, ಜನರ ಭಾವನೆಗಳ ಮೇಲೆ ಆಡುವ ಆಟ ಬಹಳ ದಿನ ನಡೆಯುವುದಿಲ್ಲ ಎಂಬ ಸತ್ಯವನ್ನು ರಾಜಕೀಯ ಪಕ್ಷಗಳು ಅರಿತುಕೊಳ್ಳಬೇಕಾಗಿದೆ. ಇಲ್ಲವಾದರೆ ಕಾಲವೇ ಇದಕ್ಕೆ ಪಾಠ ಕಲಿಸಲಿದೆ.

-ಇಂದಿರಾಗಾಂಧಿ ಕಾಲದ ತುರ್ತು ಪರಿಸ್ಥಿತಿಗಿಂತ 20 ಪಟ್ಟು ಹೆಚ್ಚಿನ ಗಂಡಾಂತರ ಸ್ಥಿತಿಗೆ ದೇಶ ತಲುಪಿದೆ. ಅಂದು ಇಂದಿರಾ ಇಡೀ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸಿದ್ದರೆ, ಇಂದು ಪ್ರಧಾನಿ ನರೇಂದ್ರ ಮೋದಿ-ಅಮಿತ್‌ ಶಾ ಜೋಡಿ ತಮ್ಮ ಅಂಕುಶಕ್ಕೆ ಯತ್ನಿಸುತ್ತಿದೆ. ಇಂದಿರಾಗಾಂಧಿಗೆ 1977ರ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಿದ್ದರು. ಅಂತಹ ತಪ್ಪುಗಳು ಪುನಾರಾವರ್ತನೆ ಆಗದಂತೆ ನೋಡಿಕೊಳ್ಳಬೇಕಾದರೆ, ಆಡಳಿತ ನಡೆಸುವವರು ಇತಿಹಾಸದಿಂದ ಪಾಠ ಕಲಿಬೇಕು. ಇಲ್ಲವಾದರೆ ಪಾಠ ಕಲಿಸಲು ಜನ ಸಿದ್ಧರಿರುತ್ತಾರೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next